ADVERTISEMENT

ಕೋಲಾರ | ಪೊಲೀಸ್‌ ನಿಗಾದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆ– ನೂರಾರು ಗಣವೇಷಧಾರಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:55 IST
Last Updated 13 ಅಕ್ಟೋಬರ್ 2025, 6:55 IST
ಕೋಲಾರದಲ್ಲಿ ಆರ್‌ಎಸ್ಎಸ್‌ನ ಶತಮಾನೋತ್ಸವ ಅಂಗವಾಗಿ ಭಾನುವಾರ ನೂರಾರು ಗಣವೇಷಧಾರಿಗಳು ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು
ಕೋಲಾರದಲ್ಲಿ ಆರ್‌ಎಸ್ಎಸ್‌ನ ಶತಮಾನೋತ್ಸವ ಅಂಗವಾಗಿ ಭಾನುವಾರ ನೂರಾರು ಗಣವೇಷಧಾರಿಗಳು ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು   

ಕೋಲಾರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‍ಎಸ್‌) ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಭಾನುವಾರ ನೂರಾರು ಮಂದಿ ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ಪೊಲೀಸರು ಭಾರಿ ಭದ್ರತೆ ಒದಗಿಸಿದ್ದರು.

ನಗರದ ಅಂತರಗಂಗೆ ರಸ್ತೆಯ ಕುವೆಂಪು ಉದ್ಯಾನ ಮುಂಭಾಗ ಆರಂಭಗೊಂಡ ಪಥಸಂಚಲನದಲ್ಲಿ ಭಾರತಮಾತೆ ಹಾಗೂ ಸಂಘದ ಸಂಸ್ಥಾಪಕ ಡಾ.ಕೇಶವ್ ಬಲಿರಾಮ್‌ ಹೆಡಗೇವಾರ್‌ ಭಾವಚಿತ್ರವನ್ನು ತೆರದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. 

ಜೀಪಿನ ಹಿಂದೆ ಮುಂದೆ ನೂರಾರು ಆರ್‌‌ಎಸ್‍ಎಸ್ ಗಣವೇಷಧಾರಿಗಳು ದಂಡ ಹಿಡಿದು, ಕೆಲವರು ಡ್ರಮ್‌ ಬಾರಿಸುತ್ತಾ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ADVERTISEMENT

ಪಥಸಂಚಲನವು ಕುವೆಂಪು ಉದ್ಯಾನ ಬಳಿ ಆರಂಭಗೊಂಡು ಮುನೇಶ್ವರ ನಗರ, ಕಾರಂಜಿಕಟ್ಟೆ ಮುಖ್ಯರಸ್ತೆಯ ಮೂಲಕ ಹಾದು ಕಾಳಮ್ಮ ಗುಡಿ ಬೀದಿ, ಚಂಪಕ್ ವೃತ್ತ, ದೊಡ್ಡಪೇಟೆ, ಶಾರದಾ ಟಾಕೀಸ್ ರಸ್ತೆ, ಬಸ್ ನಿಲ್ದಾಣ ವೃತ್ತದ ಮೂಲಕ ಮತ್ತೆ ಕುವೆಂಪು ಉದ್ಯಾನ ಬಳಿ ಬಂದು ಸಮಾಪ್ತಿಗೊಂಡಿತು.

ಆರ್‌ಎಸ್‍ಎಸ್ ವಿಭಾಗೀಯ ಸಂಘ ಚಾಲಕ್ ಶಂಕರ ನಾಯಕ್, ನಗರ ಸಂಘ ಸಂಚಾಲಕ ಜನಾರ್ದನ್ ನೇತೃತ್ವದಲ್ಲಿ ಆರ್‌ಎಸ್‍ಎಸ್ ಪಥಸಂಚಲನ ಸಾಗಿ ಬಂತು. ಕಾಳಮ್ಮ ಗುಡಿಬೀದಿ, ದೊಡ್ಡಪೇಟೆ ಮುಖ್ಯರಸ್ತೆಯಲ್ಲಿ ಸಾರ್ವಜನಿಕರು ಪುಷ್ಪವೃಷ್ಟಿಯ ಮೂಲಕ ಸ್ವಾಗತ ಕೋರಿದರು. ಬಳಿಕ ಬಾಳೆ ಹಣ್ಣು ಹಾಗೂ ನಿಂಬು ಪಾನೀಯ ನೀಡಲಾಯಿತು.

ಪೊಲೀಸರು ಹಾದಿಯುದ್ದಕ್ಕೂ ಬಿಗಿ ಬಂದೋಬಸ್ತ್‌ ಕಲ್ಪಿಸಿದ್ದರು. ಡಿವೈಎಸ್ಪಿ ಎಂ.ಎಚ್‌.ನಾಗ್ತೆ ಹಾಗೂ ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸದಾನಂದ ಅವರ ನೇತೃತ್ವದಲ್ಲಿ ನೂರಾರು ಪೊಲೀಸರು ನಿಗಾ ಇಟ್ಟಿದ್ದರು.

ಪಥಸಂಚಲನದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಪುತ್ರ ಹರ್ಷಿತ್ ಗಣವೇಷಧಾರಿಗಳಾಗಿ ಭಾಗವಹಿಸಿ ಗಮನ ಸೆಳೆದರು. ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಸತ್ಯನಾರಾಯಣ, ಅನಂತನಾರಾಯಣ, ಜಗದೀಶ್, ಜಗ್ಗಿ, ಅಶ್ವಥ್‍ರಾಮ್, ನಂದೀಶ್, ರಮೇಶ್, ಪವನ್, ವಕೀಲ ನಟರಾಜ್‍ಬಾಬು, ಸಾ.ಮಾ.ಪ್ರಸನ್ನ, ಬಿಜೆಪಿ ಮುಖಂಡರಾದ ವಿಜಯಕುಮಾರ್, ಸಾ.ಮಾ.ಅನಿಲ್‍ಬಾಬು, ಎಂ.ಪಿ.ನಾರಾಯಣಸ್ವಾಮಿ, ಗ್ರಾ.ಪಂ ಸದಸ್ಯ ಅಶ್ವತ್ಥರಾಮ್, ಶಿವಶೇಖರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಜತೆಗೆ ಗಣವೇಷಧಾರಿ ಯುವಕರ ಹೊಸ ತಂಡವೂ ಗಮನ ಸೆಳೆಯಿತು.

ಕೋಲಾರದಲ್ಲಿ ಆರ್‌ಎಸ್ಎಸ್‌ ಶತಮಾನೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪಥಸಂಚಲನಕ್ಕೂ ಮುನ್ನ ಭಾರತಮಾತೆ ಹಾಗೂ ಡಾ.ಹೆಡಗೇವಾರ್ ಭಾವಚಿತ್ರದ ಮೆರವಣಿಗೆ ಸಾಗಿ ಬಂತು
ನೂರಾರು ಗಣವೇಷಧಾರಿಗಳು ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಪಾಲ್ಗೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.