ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 14:10 IST
Last Updated 5 ಸೆಪ್ಟೆಂಬರ್ 2020, 14:10 IST

ಕೋಲಾರ: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಅವರು ಈಗ ವರದಿ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಾ ಪರಿಶಿಷ್ಟ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ದೂರಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಅಧಿಕಾರ ನಡೆಸಿರುವ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷವು 30 ವರ್ಷಗಳಿಂದ ಪರಿಶಿಷ್ಟರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಹೆಸರಲ್ಲಿ ಮೋಸ ಮಾಡಿವೆ. ಮೂರೂ ಪಕ್ಷಗಳು ಜಾತಿಯ ವಿಷ ಬೀಜ ಬಿತ್ತಿ ಗೊಂದಲ ಸೃಷ್ಟಿಸಿವೆ’ ಎಂದರು.

‘ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಸದಾಶಿವ ಆಯೋಗದ ವರದಿ ಒಪ್ಪಿಕೊಂಡಿತ್ತು. ಇದೀಗ ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ವರದಿ ಜಾರಿ ಮಾಡಿಲ್ಲ. ಒಳ ಮೀಸಲಾತಿ ವಿಚಾರದಲ್ಲಿ ಭಾವನಾತ್ಮಕವಾಗಿ ಸಮಾಜದ ದಿಕ್ಕು ತಪ್ಪಿಸಬಾರದು. ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರೀ ಭರವಸೆಯಲ್ಲೇ ಭಾರತವನ್ನು ವಿಶ್ವಗುರು ಮಾಡುತ್ತಿದೆ. ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಯಾವುದೇ ಕಾರ್ಯಕ್ರಮ ಅನುಷ್ಠಾನವಾಗಿಲ್ಲ. ಮೋದಿ ಅವರು ಸಮರ್ಥ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದು, ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಬಿಎಸ್‌ಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಆರ್‌.ಮುನಿಯಪ್ಪ, ವಿಭಾಗೀಯ ಕಾರ್ಯದರ್ಶಿ ನಾಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಜಯಪ್ರಸಾದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.