ಮಾಲೂರು: ಅರಣ್ಯ ಇಲಾಖೆ ವತಿಯಿಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ನಿರ್ಮಾಣ ಮಾಡಿರುವ ಅರಣ್ಯ ಪಾರ್ಕ್ ಹಾಗೂ ಅಲ್ಲಿ ಅಳವಡಿಸಿರುವ ಮಕ್ಕಳ ಆಟಿಕೆಗಳು ಮತ್ತು ಹಿರಿಯರ ಹೊರಾಂಗಣ ವ್ಯಾಯಾಮ ಪರಿಕರಗಳು ಸುತ್ತ ಮುತ್ತಲ ಗ್ರಾಮಸ್ಥರನ್ನು ಆಕರ್ಷಿಸುತ್ತಿವೆ.
ತಾಲ್ಲೂಕಿನ ಕೂರಂಡಹಳ್ಳಿಯ ಸುಮಾರು 360 ಎಕರೆ ಅರಣ್ಯ ಪ್ರದೇಶದಲ್ಲಿ ರೆಡ್ ಸ್ಯಾಂಡಲ್, ಸ್ಯಾಂಡಲ್ ಮತ್ತು ಬಿದಿರು ಗಿಡಗಳನ್ನು ಬೆಳೆಸಲಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಕೂರಂಡಹಳ್ಳಿ, ಪುರಸನಹಳ್ಳಿ, ಮಾಂಗಾಪುರ, ಮೈಲಾಂಡಹಳ್ಳಿ, ಚನಕಲ್, ಕುಡಿಯನೂರು ಗ್ರಾಮಗಳಿಂದ ಈ ಸುಂದರ ಉದ್ಯಾನ ನೋಡಲು ಪೋಷಕರು ತಮ್ಮ ಮಕ್ಕಳೊಂದಿಗೆ ಭೇಟಿ ನೀಡುತ್ತಿದ್ದಾರೆ.
ಪಟ್ಟಣದಲ್ಲಿ ಸಮರ್ಪಕ ಉದ್ಯಾನದ ಕೊರತೆ: ಮಾಲೂರು ಪಟ್ಟಣದಲ್ಲಿರುವ ಒಂದೆರಡು ಉದ್ಯಾನಗಳಲ್ಲಿ ಮಕ್ಕಳಿಗೆ ಸಮರ್ಪಕ ಆಟಿಕೆಗಳಿಲ್ಲ. ವ್ಯಾಯಾಮ ಪರಿಕರಗಳೂ ಇಲ್ಲ. ಇರುವ ಒಂದೆರಡು ಆಟಿಕೆಗಳೂ ಹಾಳಾಗಿ ಹೋಗಿದ್ದು, ದುರಸ್ಥಿ ಮಾಡುವವರಿಲ್ಲ. ಪಟ್ಟಣದ ವೈಟ್ ಗಾರ್ಡನ್ ಬಳಿರುವ ಪಾರ್ಕ್‌ನಲ್ಲಿಯೂ ಇದೇ ಸ್ಥಿತಿ ಇದ್ದು, ಇಲ್ಲಿನ ಮಕ್ಕಳಿಗೆ ಆಟ ಆಡಲು ಹಾಗೂ ಇತರರಿಗೆ ವ್ಯಾಯಾಮ ಮಾಡಲು ಸುಸಜ್ಜಿತ ಪಾರ್ಕ್ ಅಗತ್ಯವಿತ್ತು. ಇದರಿಂದ ಪಟ್ಟಣದ ಅನೇಕರು ಕೂರಂಡಹಳ್ಳಿ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಸಾಲುಮರದ ತಿಮ್ಮಕ್ಕ ಪಾರ್ಕ್‌ನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಶಾಲಾ–ಕಾಲೇಜುಗಳ ರಜಾ ದಿನಗಳಲ್ಲಂತೂ ಗ್ರಾಮೀಣ ಭಾಗದ ಮಕ್ಕಳು, ವಿದ್ಯಾರ್ಥಿಗಳ ದಂಡೆ ಪಾರ್ಕ್‌ನತ್ತ ಧಾವಿಸುತ್ತದೆ. ಪಾರ್ಕಿನಲ್ಲಿ ಅಳವಡಿಸಿರುವ ಮೆಟ್ಟಿಲು ಗಿರಣಿ, ರೋಯಿಂಗ್ ಯಂತ್ರ, ಏರ್ಡೈನ್, ಸ್ಪಿನ್ ಬೈಕ್, ಜಾಕೋಬ್ಸ್ ಲ್ಯಾಡರ್, ಸ್ಕೀಯಾರ್ಗ್ ಯಂತ್ರಗಳು ಮಕ್ಕಳನ್ನು ಬಹುವಾಗಿ ಆಕರ್ಷಿಸುತ್ತಿವೆ.
ಮಾಲೂರಿನ ಕೂರಂಡಹಳ್ಳಿ ಅರಣ್ಯದಲ್ಲಿ ನಿರ್ಮಾಣ ಮಾಡಿರುವ ಪಾರ್ಕಿನಲ್ಲಿ ಅತ್ಯುತ್ತಮ ಮತ್ತು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳೊಂದಿಗೆ ಕುಟುಂಬದ ಸದಸ್ಯರು ಒಟ್ಟಾಗಿ ಭೇಟಿ ನೀಡಬಹುದು. ಯಾವುದೇ ಶುಲ್ಕವಿಲ್ಲ. ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೂ ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಉತ್ತಮ ವಾತವರಣ, ಸುತ್ತಲೂ ಗಿಡ ಮರಗಳಿಂದ ಕೂಡಿದ್ದು, ಮನಸ್ಸಿಗೆ ಉಲ್ಲಾಸ ಉಂಟಾಗುತ್ತದೆ. ಪಕ್ಕದಲ್ಲೇ ಅರಣ್ಯ ಇಲಾಖೆಗೆ ಸೇರಿದ ನರ್ಸರಿ ಇರುವುದರಿಂದ ಸರ್ಕಾರ ಬೆಲೆಗೆ ಉತ್ತಮ ಸಸಿಗಳನ್ನು ಸಹ ಕೊಳ್ಳಬಹುದು.ಧನಲಕ್ಷ್ಮಿ, ಅರಣ್ಯ ಇಲಾಖೆ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.