ADVERTISEMENT

ಕೋಲಾರ: 1.30 ಲಕ್ಷ ಮೌಲ್ಯದ 13.29 ಕೆ.ಜಿ ತೂಕದ ಶ್ರೀಗಂಧ ವಶ

ಗೋವಿಂದಪ್ಪ ತೋಟದಿಂದ ಕಳುವಾಗಿದ್ದ ₹ 1.30 ಲಕ್ಷ ಮೌಲ್ಯದ ಶ್ರೀಗಂಧ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 7:06 IST
Last Updated 12 ಸೆಪ್ಟೆಂಬರ್ 2025, 7:06 IST
ಪೊಲೀಸರು ಆರೋಪಿ ಹಾಗೂ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ
ಪೊಲೀಸರು ಆರೋಪಿ ಹಾಗೂ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ   

ಕೋಲಾರ: 1.30 ಲಕ್ಷ ಮೌಲ್ಯದ 13.29 ಕೆ.ಜಿ ತೂಕದ ಶ್ರೀಗಂಧ ತುಂಡುಗಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಆರೋಪಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಹೋಬಳಿಯ ಎಂ.ತುಮ್ಮಲಪಲ್ಲಿ ಗ್ರಾಮದ ವಿನೋದ ಬಂಧಿತ ಆರೋಪಿ.

ಕೋಲಾರ ತಾಲ್ಲೂಕಿನ ಚೆಲುವನಹಳ್ಳಿ ಗ್ರಾಮದ ಗೋವಿಂದಪ್ಪ 6 ವರ್ಷಗಳ ಹಿಂದೆ ಶ್ರೀಗಂಧ ಗಿಡಗಳನ್ನು ನಾಟಿ ಮಾಡಿದ್ದರು. ಸೆ.2ರಂದು ರಾತ್ರಿ ಕಳ್ಳರು ಸುಮಾರು ₹ 20 ಲಕ್ಷ ಬೆಲೆ ಬಾಳುವ 20 ಮರಗಳನ್ನು ಕಡಿದು ಆ ಪೈಕಿ ₹ 5 ಲಕ್ಷ ಬೆಲೆಯ 5 ಮರಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಎಎಸ್ಪಿಗಳಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಸ್.ನಾಗ್ತೆ ನೇತೃತ್ವದಲ್ಲಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕೆ.ಕಾಂತರಾಜ್, ಅಪರಾಧ ದಳದ ಸಿಬ್ಬಂದಿ ಶೇಕ್ ಸಾದಿಕ್ ಪಾಷ, ರಾಘವೇಂದ್ರ, ಆಂಜಿನಪ್ಪ, ನವೀನ್‍ಕುಮಾರ್, ಸತೀಶ್ ತಂಡವು ಕಾರ್ಯಾಚರಣೆ ನಡೆಸಿತ್ತು.

ಮೂರಾಂಡಹಳ್ಳಿ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಯನ್ನು ಬಂಧಿಸಿ ಆತನಿಂದ ₹ 1.30 ಲಕ್ಷ ಮೌಲ್ಯದ 13.29 ಕೆಜಿ ತೂಕದ ಶ್ರೀಗಂಧ ತುಂಡುಗಳು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಯನ್ನು ಎಸ್ಪಿ ನಿಖಿಲ್ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.