ADVERTISEMENT

ಸಂಕ್ರಾಂತಿ ಸಡಗರ; ಖರೀದಿ ಭರಾಟೆ

ಮಾರುಕಟ್ಟೆಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಗೆಣಸು, ಶೇಂಗಾ ಮಾರಾಟ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 6:26 IST
Last Updated 15 ಜನವರಿ 2023, 6:26 IST
ಕೋಲಾರದ ಟೇಕಲ್ ರಸ್ತೆಯಲ್ಲಿ ಸಂಕ್ರಾಂತಿ ಸಡಗರಕ್ಕಾಗಿ ಶನಿವಾರ ಕಬ್ಬು ಖರೀದಿಯಲ್ಲಿ ತೊಡಗಿದ್ದ ಸಾರ್ವಜನಿಕರು(ಎಡಚಿತ್ರ). ಎಳ್ಳು, ಬೆಲ್ಲ ಹಾಗೂ ಇತರೆ ವಸ್ತು ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು
ಕೋಲಾರದ ಟೇಕಲ್ ರಸ್ತೆಯಲ್ಲಿ ಸಂಕ್ರಾಂತಿ ಸಡಗರಕ್ಕಾಗಿ ಶನಿವಾರ ಕಬ್ಬು ಖರೀದಿಯಲ್ಲಿ ತೊಡಗಿದ್ದ ಸಾರ್ವಜನಿಕರು(ಎಡಚಿತ್ರ). ಎಳ್ಳು, ಬೆಲ್ಲ ಹಾಗೂ ಇತರೆ ವಸ್ತು ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು   

ಕೋಲಾರ: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಭಾನುವಾರ ಸಡಗರದಿಂದ ಆಚರಿಸಲು ಜಿಲ್ಲೆಯ ನಗರ, ಪಟ್ಟಣ ಹಾಗೂ ಹಳ್ಳಿ ಜನರು ಸಜ್ಜುಗೊಂಡಿದ್ದಾರೆ. ಈ ಅಂಗವಾಗಿ ಶನಿವಾರ ಖರೀದಿ ಭರಾಟೆ ಜೋರಾಗಿತ್ತು.

ಗ್ರಾಮೀಣ ಜನರು ಭೂದೇವಿಗೆ, ಫಸಲಿನ ರಾಶಿಗೆ ನೈವೇದ್ಯ ಇಟ್ಟು, ನಮನ ಸಲ್ಲಿಸುವ ಸುದಿನ ಸಂಕ್ರಾಂತಿ. ಸೂರ್ಯನ ಪ್ರಥಮ ಕಿರಣಗಳ ಸ್ಪರ್ಶದಿಂದ ವಾತಾವರಣ ಮಹಾ ಚೈತನ್ಯವನ್ನು ಹೊಂದುವ ಕ್ಷಣ ಕೂಡ.

ಕೋವಿಡ್ ಆತಂಕ ದೂರವಾದ ನಂತರ ನಡೆಯುತ್ತಿರುವ ಮೊದಲ ಸಂಕ್ರಾಂತಿ ಆಚರಣೆಗೆ ಬೆಲೆ ಏರಿಕೆ ನಡುವೆಯೇ ಭರದ ಸಿದ್ಧತೆ ನಡೆದಿವೆ.

ADVERTISEMENT

ಹೊಸ ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ ಬಳಿಯ ಮಾರುಕಟ್ಟೆ, ರಂಗಮಂದಿರ ಮುಂಭಾಗ, ಟೇಕಲ್‌ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಹೂವು, ಗೆಣಸು, ಶೇಂಗಾ, ಎಳ್ಳು, ಬೆಲ್ಲ, ಕಬ್ಬು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿ ನಡೆದಿದೆ.

ನಗರದ ಟೇಕಲ್‍ ರಸ್ತೆ ಬದಿ ತಮಿಳುನಾಡಿನಿಂದ ಕಬ್ಬು ರಾಶಿಯಾಗಿ ತಂದು ಹಾಕಿದ್ದು, ಮಾರಾಟದ ಭರಾಟೆ ಜೋರಾಗಿಯೇ ನಡೆದಿದೆ. ಪ್ರತಿ ಜಲ್ಲೆ ಕಬ್ಬು ₹ 40 ರಿಂದ ₹ 50ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷದ ದರಕ್ಕೆ ಹೋಲಿಸಿದರೆ ಈ ಬಾರಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.

ಎಳ್ಳು, ಬೆಲ್ಲ, ಶೇಂಗಾ ಬೆಲೆಯೂ ಹೆಚ್ಚಿದ್ದು, ಪ್ರತಿ ಕೆ.ಜಿ ಎಳ್ಳು ₹ 320, ಶೇಂಗಾ ಬೀಜಕ್ಕೆ ₹ 160 ಇದೆ.

ಕೆಲ ಅಂಗಡಿಗಳಲ್ಲಿ ಗ್ರಾಹಕರಿಗೆ ಸುಲಭವಾಗಲು ಎಳ್ಳು, ಬೆಲ್ಲ ಮಿಶ್ರಣ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆ.ಜಿ ಎಳ್ಳು, ಬೆಲ್ಲವನ್ನು ₹ 180ಕ್ಕೆ ಮಾರುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಹೊಟ್ಟು ತೆಗೆದು ಸಿದ್ಧಪಡಿಸಿದ ಕಡ್ಲೆಬೀಜ, ಕೊಬ್ಬರಿ ಚೂರುಗಳು, ಕಳ್ಳೆಪಪ್ಪು, ಬೆಲ್ಲದ ಚೂರುಗಳನ್ನು ಪ್ರತ್ಯೇಕವಾಗಿ ಕವರ್ ಮಾಡಿ ಮಾರಾಟ ಮಾಡಲಾಗುತ್ತಿದೆ.

ಸಂಕ್ರಾಂತಿ ಆಚರಣೆಗೆ ಪೊಂಗಲ್ ಜತೆಗೆ ಅವರೆ ಹಿತುಕಿದ ಬೇಳೆ ಸಾರಿಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾರೆ. ಅವರೆ ಕಾಯಿ ಬೆಲೆಯೂ ಹೆಚ್ಚಿದ್ದು, ಪ್ರತಿ ಕೆ.ಜಿ ಅವರೆಕಾಯಿ ₹ 60ಕ್ಕೆ ಮಾರಾಟ
ವಾಗುತ್ತಿದೆ.

ಸಂಕ್ರಾಂತಿ ಜತೆಗೆ ಧನುರ್ಮಾಸದ ಪೂಜೆ, ಮುಂಜಾನೆಯ ಭಜನೆ, ಮೆರವಣಿಗೆಯ ಸಂಪ್ರದಾಯವೂ ಮುಂದುವರಿಯಲಿದೆ. ಕಿಲಾರಿ ಪೇಟೆ, ಗಲ್‍ಪೇಟೆ ಮತ್ತಿತರ ಬಡಾವಣೆಗಳ ನಾಗರಿಕರು ಸಂಕ್ರಾಂತಿಯಂದು ವಿವಿಧ ಸ್ಪರ್ಧೆ ಆಯೋಜಿಸಿ ಮಕ್ಕಳಿಗೆ ಬಹುಮಾನ ವಿತರಿಸುವ ಕಾರ್ಯವನ್ನೂ ಶನಿವಾರವೇ
ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.