ADVERTISEMENT

ಕೊರೊನಾ ಸೋಂಕು: ‘ಸರಿಗಮಪ’ ಸ್ಪರ್ಧಿ ಸುಬ್ರಮಣಿ ಪತ್ನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 21:18 IST
Last Updated 11 ಮೇ 2021, 21:18 IST

ಕೋಲಾರ: ಸರಿಗಮಪ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಸುಬ್ರಮಣಿ ಅವರ ಪತ್ನಿ ಜ್ಯೋತಿ (30) ಅವರು ಖಿನ್ನತೆಯಿಂದ ನಗರದ ಧರ್ಮರಾಯನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಕೆ.ಆರ್‌.ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಬ್ರಮಣಿ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಮೇಡಿಹಳ್ಳಿಯಲ್ಲಿ ವಾಸವಾಗಿದ್ದರು.

ಜ್ಯೋತಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಏಪ್ರಿಲ್‌ನಲ್ಲಿ ದೃಢಪಟ್ಟಿತ್ತು. ನಂತರ ಅವರು ಬೆಂಗಳೂರಿನ ಮೇಡಿಹಳ್ಳಿಯ ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ ಅವರು ಏ.25ರಂದು ಇಬ್ಬರು ಮಕ್ಕಳೊಂದಿಗೆ ಕೋಲಾರದ ಧರ್ಮರಾಯನಗರದಲ್ಲಿನ ತವರು ಮನೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೊರೊನಾ ಸೋಂಕಿನಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಜ್ಯೋತಿ ಅವರು ಮೇ 8ರಂದು ತಂದೆಯ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಸೋಮವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸುಬ್ರಮಣಿ ಅವರ ಹುಟ್ಟೂರಾದ ಕೋಲಾರ ತಾಲ್ಲೂಕಿನ ಶಾನಭೋಗನಹಳ್ಳಿಯಲ್ಲಿ ಕುಟುಂಬ ಸದಸ್ಯರು ಸೋಮವಾರ ಸಂಜೆ ಜ್ಯೋತಿ ಅವರ ಅಂತ್ಯಕ್ರಿಯೆ ನಡೆಸಿದ್ದಾರೆ.

‘ಮಗಳು ಮತ್ತು ಅಳಿಯ ಅನ್ಯೋನ್ಯವಾಗಿದ್ದರು. ಮಗಳು ಕೊರೊನಾ ಸೋಂಕಿನಿಂದ ಖಿನ್ನಳಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಜ್ಯೋತಿ ಅವರ ತಂದೆ ಲಕ್ಷ್ಮೀನಾರಾಯಣ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.