ADVERTISEMENT

ಚನ್ನಯ್ಯರ ಕೊಡುಗೆ ಶಾಶ್ವತವಾಗಿ ಉಳಿಸಿ: ಸಂಸದ ಎಸ್.ಮುನಿಸ್ವಾಮಿ

ಸಂಸದ ಎಸ್.ಮುನಿಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 12:26 IST
Last Updated 18 ಜನವರಿ 2020, 12:26 IST
ಕೋಲಾರದ ನಚಿಕೇತನ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಶನಿವಾರ ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು.
ಕೋಲಾರದ ನಚಿಕೇತನ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಶನಿವಾರ ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು.   

ಕೋಲಾರ: ‘ಜಿಲ್ಲೆಯ ಅಭಿವೃದ್ಧಿಗೆ ಟಿ.ಚನ್ನಯ್ಯ ಅವರು ನೀಡಿರುವ ಕೊಡುಗೆಯನ್ನು ಶಾಶ್ವತವಾಗಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಇಲ್ಲಿನ ನಚಿಕೇತನ ವಿದ್ಯಾರ್ಥಿ ನಿಲಯ ದುರಸ್ತಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ‘ಅಧಿಕಾರದಲ್ಲಿದ್ದು ಮಾಡಿದ ಸಾಧನೆ ಸಮಾಜದಲ್ಲಿ ಶಾಶ್ವತವಾಗಿ ಉಳಿಸಲು ಪ್ರತಿಯೊಬ್ಬರು ಸಹಕಾರ ಅಗತ್ಯ’.‘ಟಿ.ಚನ್ನಯ್ಯ ಅವರು ಅಧಿಕಾರದಲ್ಲಿದಾಗ ನಚಿಕೃತನ ನಿಲಯ, ಸ್ಯಾನಿಟೋರಿಯಂ, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದರು. ಶೈಕ್ಷಣಿಕ, ನಗರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಹಾದಿಯಲ್ಲೆ ಜಿಲ್ಲೆಯನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

‘ನಚಿಕೇತನ ನಿಲಯದಲ್ಲಿ ವಾಸವಿದ್ದು ಓದಿದವರು ಈಗ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆಯ ಹಿಂದೆ ಟಿ.ಚನ್ನಯ್ಯ ಅವರ ಶ್ರಮವಿದೆ. ಅವರ ಕಾಲದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿನಿಲಯವನ್ನು ಈ ನೆಲದಲ್ಲಿ ಶಾಶ್ವತವಾಗಿ ಉಳಿಸಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

‘ಲೋಕಸಭೆ ಚುನಾವಣೆ ಮುಗಿದ ಮೇಲೆ ವಿದ್ಯಾರ್ಥಿನಿಲಯದಲ್ಲಿನ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಶಿಥಿಲಗೊಂಡಿರುವ ಕಟ್ಟಡ ದುರಸ್ತಿಗೆ ₹1.36 ಕೋಟಿ ಅನುದಾನ ಮೀಸಲಿಟ್ಟು, ಕಡಿಮೆ ಅವಧಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ’ ಎಂದರು.

‘ಜನಪ್ರತಿನಿಧಿಗಳು ಅಧಿಕಾರದಲ್ಲಿ ಇದ್ದಾಗ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಮಂಜೂರು ಮಾಡಿಸುತ್ತಾರೆ. ಆ ಹಣದಿಂದ ಕೈಗೊಂಡಿರುವ ಅಭಿವೃದ್ಧಿ ಕೆಲಸ ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತಾಗಬೇಕು. ವಿಧಾನಸಭಾ ಕ್ಷೇತ್ರದಲ್ಲಿ ನೆನೆಗುದಿಗೆ ಬಿದಿದ್ದ 79 ಸಮುದಾಯ ಭವನಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಪಡಿಸಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಶಾಸಕ ಶ್ರೀನಿವಾಸಗೌಡ ಮಾತನಾಡಿ, ‘ಟಿ,ಚನ್ನಯ ಅವರ ಶ್ರಮದಿಂದ ನಗರದಲ್ಲಿ ಯುಜಿಡಿ ಕಲ್ಪಿಸಲಾಯಿತು. ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯಲು ಸಾಧ್ಯವಾಯಿತು’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಗೆ ಅಪಾರ ಕೊಡುಗೆ ನೀಟಿರುವ ಚನ್ನಯ್ಯ ಅವರ ಮಗ ಬಾಲಾಜಿ ಚನ್ನಯ್ಯ ಹಿಂದೆ ಲೋಕಸಭೆ ಚುನಾವಣೆಗೆ ಸ್ಪಂರ್ಧಿಸಿದ್ದಾಗ ಜನ ಸೋಲಿಸಿದರು. ಆದರೆ ಅವರ ಋಣದಲ್ಲಿ ನಾವೆಲ್ಲ ಇದ್ದೆವೆ ಎಂಬ ಯೋಜನೆ ಬಂದಿದ್ದರೆ ಗೆಲುವು ಸಾಧಿಸುತ್ತಿದ್ದ’ ಎಂದರು.

‘ಪ್ರತಿ ಹದಿನೈದು ದಿನಕ್ಕೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ವೀಕ್ಷಿಸಲಾಗುವುದು. ಕಳಪೆ ಗುಣಮಟ್ಟದ ಕಂಡುಬಂದರೆ ಗುತ್ತಿಗೆದಾರ ಸೇರಿದಂತೆ ಎಂಜನಿಯರ್‌ಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ರಾಜಣ್ಣ, ಸಹಾಯಕ ನಿರ್ದೇಶಕ ಬಾಲಾಜಿ, ನಗರಸಭೆ ಆಯುಕ್ತ ಶ್ರೀಕಾಂತ್, ನಗರಸಭೆ ಸದಸ್ಯರಾದ ರಾಕೇಶ್, ಅಂಬರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.