ADVERTISEMENT

ಕೆಜಿಎಫ್‌: ‘ಜ್ಞಾನದ ದಿಕ್ಕು ತೋರಿದ ಸಾವಿತ್ರಿಬಾಯಿ ಫುಲೆ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:37 IST
Last Updated 23 ಜನವರಿ 2021, 1:37 IST
ಕೆಜಿಎಫ್ ಬೆಮಲ್‌ ನಗರದಲ್ಲಿ ಶುಕ್ರವಾರ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು
ಕೆಜಿಎಫ್ ಬೆಮಲ್‌ ನಗರದಲ್ಲಿ ಶುಕ್ರವಾರ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿಯಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು   

ಕೆಜಿಎಫ್‌: ಅಕ್ಷರ ಜ್ಞಾನದಿಂದಾಗಿ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಗೆ ಪ್ರಾಧಾನ್ಯತೆ ಸಿಗುತ್ತಿದೆ. ಇಂತಹ ಜ್ಞಾನದ ಪೀಠಿಕೆಯನ್ನು ದೇಶದಲ್ಲಿ ಸಾವಿತ್ರಿ ಬಾಯಿ ಫುಲೆ ಮೊದಲು ಹಾಕಿದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಹೇಳಿದರು.

ಬೆಮಲ್‌ ಕಲಾ ಕ್ಷೇತ್ರದಲ್ಲಿ ಶುಕ್ರವಾರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದಿಂದ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕರು ಸಾವಿತ್ರಿಬಾಯಿ ಫುಲೆ ಹಾಕಿದ ಜವಾಬ್ದಾರಿಯನ್ನು ಹೊತ್ತು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಶಿಕ್ಷಕರ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಶಿಕ್ಷಣ ನೀಡುವ ಮೂಲಕ ಶಿಕ್ಷಕಿಯರು ಜ್ಞಾನಧಾತೆಯಾಗಿದ್ದಾರೆ. ಸರ್ಕಾರಿ ಶಾಲೆ ಬಡ ಮತ್ತು ಶೋಷಿತ ಮಕ್ಕಳಿಗೆ ಜ್ಞಾನದ ಕೇಂದ್ರವಾಗಬೇಕು ಎಂದರು.

ADVERTISEMENT

ಗುರುಗಳು ತಮ್ಮ ಎಲ್ಲಕೌಶಲವನ್ನು ಮಕ್ಕಳಿಗೆ ಹೇಳಿಕೊಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ಅವರಲ್ಲಿರುವ ಸುಪ್ತ ಚೇತನ ಹೊರತೆಗೆಯಬೇಕು. ದೇಶದ ಸಂಪತ್ತಾಗುವ ಶಿಷ್ಯಕೋಟಿಯನ್ನು ತಯಾರು ಮಾಡಬೇಕು ಎಂದು ತಿಳಿಸಿದರು.

ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಯ್ಯಗೌಡ ಮಾತನಾಡಿ, ಸಾವಿತ್ರಿಬಾಯಿ ಫುಲೆ ಹುಟ್ಟು ಹೋರಾಟಗಾರ್ತಿಯಾಗಿದ್ದರು. ಅನೇಕ ಕಟ್ಟುಪಾಡುಗಳಿದ್ದ ಸಮಯದಲ್ಲಿ ಶಿಕ್ಷಣಕ್ಕಾಗಿ ಹೋರಾಟ ಮಾಡಿ, ಮಹಿಳೆಯರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡಿಸಿದರು. ಮಹಿಳೆಯನ್ನು ಸಮಾಜದ ಮುಖ್ಯವೇದಿಕೆಗೆ ಕರೆತರಲು ಪ್ರಯತ್ನಿಸಿದರು ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿರೆಡ್ಡಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ ಬಾಬು, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿನೋದ್ ಬಾಬು, ಮುಖಂಡ ಎಸ್‌.ಚೌಡಪ್ಪ, ನರಸಿಂಹಮೂರ್ತಿ, ನಾರಾಯಣಸ್ವಾಮಿ, ವಿನೋದ್ ಬಾಬು, ಎನ್‌ಪಿಎಸ್ ಸಂಘದ ಅಧ್ಯಕ್ಷ ಪ್ರಶಾಂತ್‌, ಉರ್ದು ಸಂಘದ ಅಧ್ಯಕ್ಷ ಯಾಸ್ಮಿನ್ ತಾಜ್‌, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಕೆ.ಬಾಬು, ಸಮನ್ವಯ ಅಧಿಕಾರಿ ನಾರಾಯಣಸ್ವಾಮಿ ಇದ್ದರು. ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.