ಕೋಲಾರ: ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ ಕೋಲಾರ ಜಿಲ್ಲೆಗೆ ಸಂಬಂದಪಟ್ಟಂತೆ ಸುಮಾರು ₹ 20 ಕೋಟಿ ಮೊತ್ತದ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ನೀಡದೆ ಪ್ಯಾಕೇಜ್ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಾರ್ಜೇನಹಳ್ಳಿ ಬಾಬು ದೂರಿದರು.
ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘₹ 20 ಕೋಟಿ ಮೊತ್ತದ ಕಾಮಗಾರಿಯನ್ನು ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೂ ಈ ವಿಚಾರ ಚರ್ಚೆ ಮಾಡಲಾಗಿದೆ’ ಎಂದರು.
ಮುಂದಿನ ನಿರ್ಧಾರಗಳನ್ನು ನೋಡಿಕೊಂಡು ನಂತರ ಜಿಲ್ಲಾ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದಿಂದ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್ ಮಾತನಾಡಿ, ‘ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಮೀಸಲಾತಿ ಇದ್ದರೂ ಕೆಲ ಅಧಿಕಾರಿಗಳು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಒಂದು ಕಾಮಗಾರಿಗೆ ನಾಲ್ಕೈದು ಕಾಮಗಾರಿ ಸೇರಿಸಿ ಪ್ಯಾಕೇಜ್ ಮಾಡುವ ಮೂಲಕ ಮೀಸಲಾತಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಮಂಗಳವಾರ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಕಾರ್ಯಪಾಲಕ ಎಂಜಿನಿಯರ್ ₹ 2 ಕೋಟಿ ವರೆಗಿನ ಕಾಮಗಾರಿ ಸಂಬಂಧ ಪೂರ್ವಭಾವಿ ಸಭೆ ಕರೆದಿದ್ದಾರೆ. ಅಲ್ಲಿಗೆ ನಮ್ಮ ನಿಯೋಗ ಹೋಗಲಿದ್ದು, ನಮ್ಮ ವಾದ ಮಂಡಿಸಲಿದ್ದೇವೆ. ಈ ವರೆಗೆ ಕರೆದಿರುವ ಟೆಂಡರ್ ರದ್ದು ಮಾಡಬೇಕು, ಮೀಸಲಾತಿ ಪ್ರಕಾರ ₹ 1 ಕೋಟಿವರೆಗಿನ ಕಾಮಗಾರಿಯನ್ನು ನಮಗೆ ಕೊಡಬೇಕು ಎಂಬ ಆಗ್ರಹ ಮಂಡಿಸಲಿದ್ದೇವೆ’ ಎಂದರು.
ಜಿಲ್ಲಾ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ರಮೇಶ್, ಮೋಹನ್, ವೆಂಕಟರೆಡ್ಡಿ, ಕೃಷ್ಣಪ್ಪ, ಮೋಹನ್, ಅಬ್ಬಿ ಮಂಜುನಾಥ್, ಅಮ್ಮೇರಹಳ್ಳಿ ರವಿ, ಸಾಗರ್, ಜಿಲ್ಲಾ ಓಬಿಸಿ ಗುತ್ತಿಗೆದಾರರ ಅಧ್ಯಕ್ಷ ಜಯರಾಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.