ADVERTISEMENT

ಕೋಲಾರ| 28 ಕೇಂದ್ರಗಳಲ್ಲಿ ದ್ವಿತೀಯ ಪಿಯು ಪರೀಕ್ಷೆ

9 ರಿಂದ ಜಿಲ್ಲೆಯ 28 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 10:23 IST
Last Updated 7 ಮಾರ್ಚ್ 2023, 10:23 IST
ವೆಂಕಟ್‌ ರಾಜಾ
ವೆಂಕಟ್‌ ರಾಜಾ   

ಕೋಲಾರ: ‘ಜಿಲ್ಲೆಯ 28 ಕೇಂದ್ರಗಳಲ್ಲಿ ಮಾರ್ಚ್‌ 9 ರಿಂದ 29 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ 16,559 ಅಭ್ಯರ್ಥಿಗಳು ನೋಂದಾಯಿಸಿದ್ದು, ಸುಗಮ ಪರೀಕ್ಷೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ’ ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ತಿಳಿಸಿದರು.

ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘6,444 ಬಾಲಕರು, 7,291 ಬಾಲಕಿಯರು ಸೇರಿ 13,735 ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪುನರಾವರ್ತಿತ ಅಭ್ಯರ್ಥಿಗಳಲ್ಲಿ 1,379 ಬಾಲಕ, 1,006 ಬಾಲಕಿಯರು ಸೇರಿ 2,385 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಖಾಸಗಿಯಾಗಿ 237 ಬಾಲಕ, 202 ಬಾಲಕಿಯರು ಸೇರಿ 439 ಮಂದಿ ಪರೀಕ್ಷೆಗೆ ಕುಳಿತಿದ್ದಾರೆ’ ಎಂದರು.

‘ಕೋಲಾರ–10, ಬಂಗಾರಪೇಟೆ-3, ಕೆಜಿಎಫ್-3, ಶ್ರೀನಿವಾಸಪುರ-3, ಮುಳಬಾಗಿಲು-5, ಮಾಲೂರು–4 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಪ್ರತಿ ಕೇಂದ್ರಕ್ಕೂ ಒಬ್ಬ ಮುಖ್ಯ ಅಧೀಕ್ಷಕರಿದ್ದು, ಅವರೊಂದಿಗೆ ಜಂಟಿ ಮುಖ್ಯ ಅಧೀಕ್ಷಕರು ಕಾರ್ಯನಿರ್ವಹಿಸುವರು. ಪ್ರಶ್ನೆಪತ್ರಿಕೆಯನ್ನು ಸ್ವೀಕರಿಸಿ, ಮಧ್ಯಾಹ್ನ ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆ ಬಂಡಲ್ ತೆಗೆದುಕೊಂಡು ಹೋಗುವವರಿಗೆ ಇವರು ಅಲ್ಲೇ ಇದ್ದು, ಎಚ್ಚರ ವಹಿಸಬೇಕು’ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಯು) ರಾಮಚಂದ್ರಪ್ಪ, ‘ಮಾರ್ಗಾಧಿಕಾರಿಗಳಾಗಿ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ತಂಡ ಕಾರ್ಯನಿರ್ವಹಿಸಲಿದೆ. ಪ್ರಶ್ನೆಪತ್ರಿಕೆಗಳನ್ನು ಎಲ್ಲಾ 28 ಕೇಂದ್ರಗಳಿಗೆ ಪರೀಕ್ಷೆಗೆ ಮುನ್ನಾ ಖಜಾನೆಯಿಂದ ಪಡೆದು ಸರಬರಾಜು ಮಾಡಲು ಪೊಲೀಸ್ ಬಂದೋಬಸ್ತ್ ಇರುವ 9 ವಾಹನಗಳು 9 ಮಾರ್ಗಗಳಲ್ಲಿ ಸಾಗಲಿವೆ’ ಎಂದು ಹೇಳಿದರು.

‘ಕೋಲಾರದಲ್ಲಿ 3 ಮಾರ್ಗ, ಮುಳಬಾಗಿಲು–2, ಬಂಗಾರಪೇಟೆ, ಕೆಜಿಎಫ್, ಶ್ರೀನಿವಾಸಪುರ, ಮಾಲೂರುಗಳಲ್ಲಿ ತಲಾ ಒಂದೊಂದು ವಾಹನ ಪ್ರಶ್ನೆಪತ್ರಿಕೆಗಳನ್ನು ಕೇಂದ್ರಕ್ಕೆ ತಲುಪಿಸಲಿದೆ. ಈ ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಸಿದ್ದು, ಯಾವುದೇ ಅವ್ಯವಹಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತಿತರ ಸಮಸ್ಯೆಗಳು ಎದುರಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ತಿಳಿಸಿದರು.

‘ಪರೀಕ್ಷಾ ನಕಲು, ಅವ್ಯವಹಾರ ತಡೆಯಲು ಕೇಂದ್ರ ಕಚೇರಿಯ 2 ಜಾಗೃತದಳ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 1, ಉಪನಿರ್ದೇಶಕರ ನೇತೃತ್ವದಲ್ಲಿ 1, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜಾಗೃತದಳಗಳನ್ನು ರಚಿಸಲಾಗಿದೆ’ ಎಂದರು.

‘ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದಲೇ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೊರ ಜಿಲ್ಲೆಗಳ ತಲಾ ಇಬ್ಬರು ಸ್ಥಾನಿಕ ಜಾಗೃತದಳ ಸಿಬ್ಬಂದಿಯನ್ನು ನೇಮಿಸಲಾಗಿದೆ’ ಎಂದು ಹೇಳಿದರು.

‘ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪರೀಕ್ಷೆ ನಡೆಯುವ ದಿನ ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ 200ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಈ ಭಾಗದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ’ ಎಂದರು.

‘ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್, ಇ-ಕ್ಯಾಮೆರಾ, ಲ್ಯಾಪ್‍ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ. ಎಲೆಕ್ಟ್ರಾನಿಕ್, ಮುಳ್ಳಿನ ಕೈಗಡಿಯಾರವನ್ನೂ ತರುವಂತಿಲ್ಲ. ಸೈಂಟಿಫಿಕ್ ಕ್ಯಾಲ್ಯುಕುಲೇಟರ್‌ಗೂ ಅವಕಾಶವಿಲ್ಲ. ಸಾಮಾನ್ಯ ಕ್ಯಾಲ್ಯುಕುಲೇಟರ್ ಬಳಸಲು ಅವಕಾಶವಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಅಮರೇಶ್, ಕೆಜಿಎಫ್ ಎಸ್ಪಿ ಡಾ.ಧರಣೀದೇವಿ ಮಾಲಗತ್ತಿ, ಕೋಲಾರ ಡಿವೈಎಸ್‍ಪಿ ರಮೇಶ್, ತಹಶೀಲ್ದಾರ್ಗಳಾದ ಸಿರಿನ್ ತಾಜ್, ರವಿ, ರಮೇಶ್, ಬಿಇಒಗಳಾದ ಕನ್ನಯ್ಯ, ಉಮಾದೇವಿ, ಚಂದ್ರಶೇಖರ್, ಕೃಷ್ಣಮೂರ್ತಿ, ಗಂಗರಾಮಯ್ಯ, ಪ್ರಾಂಶುಪಾಲ ಬಾಲಕೃಷ್ಣ, ಜಯರಾಂ, ಸುಬ್ರಹ್ಮಣ್ಯ, ಟಿ.ಜಯರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.