ADVERTISEMENT

ಶಿವರಾತ್ರಿ; ಕೋಟಿಲಿಂಗದಲ್ಲಿ ಕ್ಷೀರಾಭಿಷೇಕ

ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆ; ಪ್ರಮುಖ ಸ್ಥಳಗಳಲ್ಲಿ ಸಿಂಗಾರ

ಕೃಷ್ಣಮೂರ್ತಿ
Published 20 ಫೆಬ್ರುವರಿ 2020, 14:32 IST
Last Updated 20 ಫೆಬ್ರುವರಿ 2020, 14:32 IST
ಕೋಟಿಲಿಂಗೇಶ್ವರ ದೇವಾಲಯ ಪ್ರಮುಖ ಆಕರ್ಷಣೆಯಾದ ಬೃಹತ್ ಶಿವಲಿಂಗ ಮತ್ತು ನಂದಿ.
ಕೋಟಿಲಿಂಗೇಶ್ವರ ದೇವಾಲಯ ಪ್ರಮುಖ ಆಕರ್ಷಣೆಯಾದ ಬೃಹತ್ ಶಿವಲಿಂಗ ಮತ್ತು ನಂದಿ.   

ಕೆಜಿಎಫ್‌ (ಕೋಲಾರ ಜಿಲ್ಲೆ): 1970ರ ದಶಕದಲ್ಲಿ ಕಮ್ಮಸಂದ್ರ ಎಂಬ ಕುಗ್ರಾಮದಲ್ಲಿ ಒಂದು ಸಣ್ಣ ದೇವಾಲಯ ಸ್ಥಾಪಿಸಿದ ಸಾಂಬಶಿವಮೂರ್ತಿ ಸ್ವಾಮೀಜಿ ಅವರಿಗೆ ಮುಂದೆ ಈ ದೇವಾಲಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆ ಆಗುತ್ತದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ಅವರ ಶ್ರಮದಿಂದಾಗಿ ಇಂದು ಕೋಟಿಲಿಂಗೇಶ್ವರ ದೇವಾಲಯ ಜನಪ್ರಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ.

ಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯ ಲಕ್ಷಾಂತರ ಭಕ್ತರನ್ನು ಸ್ವಾಗತಿಸಲು ಸಜ್ಜಾಗಿದೆ. ದೇವಾಲಯದ ಪ್ರಮುಖ ಸ್ಥಳಗಳನ್ನು ಸಿಂಗರಿಸಲಾಗಿದೆ. ನೆರೆಯ ರಾಜ್ಯಗಳಿಂದ ಟನ್‌ ಗಟ್ಟಲೆ ಹೂ ಬಂದಿದೆ. 108 ಅಡಿಗಳ ಬೃಹತ್ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡಲು ಕಟಕಟೆ ನಿರ್ಮಿಸಲಾಗಿದೆ.

ಮಂಜುನಾಥ ಸ್ವಾಮಿ ಇಲ್ಲಿನ ಪ್ರಮುಖ ದೇವಸ್ಥಾನ. ಸಾವಿರಾರು ಶಿವಲಿಂಗಗಳ ಮಧ್ಯೆ ಇರುವ ಅತ್ಯಂತ ಹಳೆಯ ದೇವಾಲಯವಾಗಿದೆ. ದೇವಾಲಯದ ಮತ್ತೊಂದು ವಿಶೇಷವೆಂದರೆ ಒಮ್ಮೆ ದೇವಾಲಯದ ಸಂಕೀರ್ಣವನ್ನು ಪ್ರವೇಶಿಸಿದರೆ ಹಲವಾರು ಇಷ್ಟದೈವಗಳನ್ನು ಕಾಣಬಹುದು. ಆರಾಧಿಸಬಹುದು.

ADVERTISEMENT
ಕೋಟಿಲಿಂಗೇಶ್ವರ ದೇವಾಲಯ ಸಂಸ್ಥಾಪಕ ಸಾಂಬಶಿವಮೂರ್ತಿ ಸ್ವಾಮಿ

ಬ್ರಹ್ಮ ವಿಷ್ಣು, ಮಹೇಶ್ವರ, ವೆಂಕಟರಮಣಸ್ವಾಮಿ, ಕನ್ನಿಕಾ ಪರಮೇಶ್ವರಿ, ರಾಘವೇಂದ್ರ ಸ್ವಾಮಿ, ಅಯ್ಯಪ್ಪ ಸ್ವಾಮಿ, ಸಂತೋಷಿ ಮಾತಾ, ಪಾಂಡುರಂಗ, ಪಂಚಮುಖಿ ಗಣಪತಿ, ಪಂಚಮುಖಿ ಆಂಜನೇಯ, ರಾಮ, ಲಕ್ಷ್ಮಣ ಸಮೇತ ಸೀತೆಯ ಗುಡಿ, 108 ಅಡಿಗಳ ಲಿಂಗ, ಅದರ ಮುಂದೆ ಪ್ರತಿಷ್ಠಾಪಿತವಾಗಿರುವ ಬೃಹತ್ ನಂದಿ, ಅಷ್ಟ ಶಕ್ತಿ ಪೀಠಗಳು, ಶನಿ ಸಿಂಗಾಪುರ ದೇವಾಲಯ, ಕರುಮಾರಿಯಮ್ಮ ಮತ್ತು ಈಚೆಗೆ ನಿಧನರಾದ ಸಾಂಬಶಿವಮೂರ್ತಿ ಸ್ವಾಮೀಜಿ ಅವರ ಮುಕ್ತಿ ಮಂದಿರ ಪ್ರಮುಖ ಆಕರ್ಷಣೆ ಆಗಿದೆ.

ಶಿವರಾತ್ರಿ ಅಂಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಅಹೋರಾತ್ರಿ ನಡೆಯುತ್ತವೆ. ಹರಿಕಥೆ, ಭಜನೆ, ಪಾರಾಯಣಗಳನ್ನು ಏರ್ಪಡಿಸಲಾಗಿದೆ. ಮುಂಜಾನೆ ಕೋಟಿಲಿಂಗಸ್ವಾಮಿ ಉತ್ಸವ ಮೂರ್ತಿಯ ರಥೋತ್ಸವ ನೆರವೇರಲಿದೆ. ದೇವಾಲಯ ಮತ್ತೊಂದು ವಿಶೇಷವೆಂದರೆ ಲಿಂಗ ಪ್ರತಿಷ್ಠಾಪನೆ. ದೇವಾಲಯವು ನಿಗದಿ ಮಾಡಿರುವ ಶುಲ್ಕ ಪಾವತಿಸಿ ಲಿಂಗವನ್ನು ಪ್ರತಿಷ್ಠಾಪಿಸಬಹುದು. ಪ್ರತಿ ವರ್ಷ ದೇವಾಲಯಕ್ಕೆ ಬಂದು ಲಿಂಗಕ್ಕೆ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ಶಿವರಾತ್ರಿಗೆ ಬರುವ ಭಕ್ತರಿಗೆ ವಾಹನ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ. ಸ್ಥಳಾವಕಾಶದ ಕೊರತೆ ಇರುವುದರಿಂದ ದೇವಾಲಯದ ಹೊರಭಾಗದಲ್ಲಿಯೇ ವಾಹನಗಳನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ದೇಗುಲಕ್ಕೆ ತೆರಳಬೇಕು.

ಹೀಗೆ ತೆರಳಬಹುದು

ಬೆಂಗಳೂರಿನಿಂದ ಕೋಟಿಲಿಂಗ 96 ಕಿ.ಮೀ ದೂರ ಇದೆ. ಸಾಕಷ್ಟು ಬಸ್‌ಗಳ ವ್ಯವಸ್ಥೆ ಇದೆ. ಕೋಲಾರ– ಬಂಗಾರಪೇಟೆ– ಬೆಮಲ್‌ ಆಲದ ಮರ ಮಾರ್ಗದ ಮೂಲಕ ಕೋಟಿಲಿಂಗ ದೇವಾಲಯಕ್ಕೆ ತಲುಪಬಹುದು. ಇಲ್ಲವೇ ಕೋಲಾರ– ಬೇತಮಂಗಲ ರಸ್ತೆಯ ಅಯ್ಯಪಲ್ಲಿ ಮಾರ್ಗದಲ್ಲೂ ಬರಬಹುದು. ಮುಳಬಾಗಿಲು ಕಡೆಯಿಂದ ಬರಬೇಕಾದವರು ಬಂಗಾರು ತಿರುಪತಿ ಮಾರ್ಗವಾಗಿ ತಲುಪಬಹುದು. ಬೆಂಗಳೂರಿನಿಂದ ರೈಲುಗಳು ಸಾಕಷ್ಟು ಇವೆ. ಬಂಗಾರಪೇಟೆಗೆ ಬಂದು ಅಲ್ಲಿಂದ ಬಸ್ಸಿನಲ್ಲಿ ದೇವಾಲಯ ಸೇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.