ADVERTISEMENT

ಶ್ರೀನಿವಾಸಪುರ ಸಂಪೂರ್ಣ ಬಂದ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 7:14 IST
Last Updated 29 ಸೆಪ್ಟೆಂಬರ್ 2020, 7:14 IST
ಶ್ರೀನಿವಾಸಪುರದಲ್ಲಿ ಸೋಮವಾರ ಬಂದ್‌ ಪ್ರಯುಕ್ತ ಅಂಗಡಿಗಳನ್ನು ಮುಚ್ಚಲಾಗಿತ್ತು
ಶ್ರೀನಿವಾಸಪುರದಲ್ಲಿ ಸೋಮವಾರ ಬಂದ್‌ ಪ್ರಯುಕ್ತ ಅಂಗಡಿಗಳನ್ನು ಮುಚ್ಚಲಾಗಿತ್ತು   

ಶ್ರೀನಿವಾಸಪುರ: ಪಟ್ಟಣದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ಸಂಪೂರ್ಣ ಶಾಂತಿಯುತ ಬಂದ್‌ ಆಚರಿಸಲಾಯಿತು.

ಪಟ್ಟಣದಲ್ಲಿ ಅಂಗಡಿಗಳನ್ನು ಮುಚ್ಚಲಾಗಿತ್ತು. ಯಾವುದೇ ವಾಹನ ಸಂಚಾರ ಇರಲಿಲ್ಲ. ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸಲಿಲ್ಲ. ಸರ್ಕಾರಿ ಕಚೇರಿಗಳು ತೆರೆದಿದ್ದವಾದರೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ ಗ್ರಾಮೀಣ ಪ್ರದೇಶದಿಂದ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗಾಗಿ ಬಂದಿದ್ದ ಜನರು ಸಮೀಪದ ಗ್ರಾಮಗಳಿಗೆ ನಡೆದು ಹೋಗುವ ದೃಶ್ಯ ಕಂಡುಬಂತು.

ತಾಲ್ಲೂಕು ರೈತ, ಕಾರ್ಮಿಕ, ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ADVERTISEMENT

ಕಾರ್ಯಕರ್ತರು ಬೈಕ್‌ ರ‍್ಯಾಲಿ ನಡೆಸಿ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಿದರು.

ತಾಲ್ಲೂಕಿನ ರಾಯಲ್ಪಾಡ್‌, ಗೌನಿಪಲ್ಲಿ, ಸೋಮಯಾಜಲಹಳ್ಳಿ, ಲಕ್ಷ್ಮೀಸಾಗರ, ರೋಜೇನಹಳ್ಳಿ ಕ್ರಾಸ್‌, ರೋಣೂರು, ಯಲ್ದೂರು ಗ್ರಾಮಗಳಲ್ಲಿ ಬಂದ್‌ ಆಚರಿಸಲಾಯಿತು. ಬೆಂಗಳೂರು– ಮದನಪಲ್ಲಿ ರಸ್ತೆ, ಶ್ರೀನಿವಾಸಪುರ– ಮುಳಬಾಗಿಲು ರಸ್ತೆಯಲ್ಲಿ ಕೆಪಿಆರ್‌ಎಸ್‌, ಕೆಆರ್‌ಆರ್‌ಎಸ್‌, ಸಿಐಟಿಯು, ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮುಖಂಡ ಪಿ.ಆರ್‌.ಸೂರ್ಯನಾರಾಯಣ, ಪಾತಕೋಟ ನವೀನ್ ಕುಮಾರ್‌, ಶ್ರೀರಾಮರೆಡ್ಡಿ, ಚಂದ್ರು, ಮೂರ್ತಿ, ಬೈರಾರೆಡ್ಡಿ, ಜನಾರ್ದನಪ್ಪ, ಸುಬ್ರಮಣಿ, ಸಸ್ಲಾಂ, ಉಮಾದೇವಿ, ಜಿ.ಈಶ್ವರಮ್ಮ, ಮಂಜುಳಾ, ಮಮತಾ, ಈಶ್ವರಪ್ಪ, ಅಮರನಾರಾಯಣಪ್ಪ, ಸೈಯದ್‌ ಫಾರುಕ್‌, ನಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.