ADVERTISEMENT

ಸಿದ್ಧಗಂಗಾ ಶ್ರೀ ಮರೆಯಲಾಗದ ರತ್ನ: ವಿ.ಆರ್.ಸುದರ್ಶನ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 14:54 IST
Last Updated 31 ಜನವರಿ 2019, 14:54 IST
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಗುರುವಾರ ನಡೆದ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪಾಲ್ಗೊಂಡರು.
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಗುರುವಾರ ನಡೆದ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪಾಲ್ಗೊಂಡರು.   

ಕೋಲಾರ: ‘ಅನ್ನ, ಅಕ್ಷರ, ಆಶ್ರಯ ದಾಸೋಹದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶಿವಕುಮಾರ ಸ್ವಾಮೀಜಿಯು ಮೇರು ವ್ಯಕ್ತಿತ್ವದ ಮರೆಯಲಾಗದ ರತ್ನ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ವೇಮಗಲ್‌ನಲ್ಲಿ ವೀರಶೈವ ಸಮುದಾಯದವರು ಹಾಗೂ ಗ್ರಾಮಸ್ಥರು ಗುರುವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶ್ರೀಗಳದು ದೈವಿಸ್ಫೂರ್ತಿಯಿಂದ ಕೂಡಿದ ವ್ಯಕ್ತಿತ್ವ. ಮನುಕುಲಕ್ಕೆ ಸ್ಫೂರ್ತಿಯಾಗಿದ್ದ ಅವರು ಧಾರ್ಮಿಕವಾಗಿ ಶ್ರೇಷ್ಠ ದಾರ್ಶನಿಕರು’ ಎಂದು ಸ್ಮರಿಸಿದರು.

‘ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಮಂದಿಗೆ ಅಕ್ಷರ, ಆಶ್ರಯ ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಕರ್ನಾಟಕದ ದಾಸೋಹದ ಘನತೆಯನ್ನು ಸಮುದಾಯಕ್ಕೆ ತೋರಿಸಿಕೊಟ್ಟ ಮಹನೀಯರು. 12ನೇ ಶತಮಾನದ ಯುಗ ಪುರುಷ ಕ್ರಾಂತಿಕಾರಿ ಬಸವಣ್ಣರ ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಶ್ರೀಗಳು ಮಾನವತಾವಾದಿ’ ಎಂದರು.

ADVERTISEMENT

‘111 ವರ್ಷ ವಯಸ್ಸಾದರೂ ಆರೋಗ್ಯವಾಗಿದ್ದ ಶ್ರೀಗಳು ಇಷ್ಟಲಿಂಗ ಪೂಜೆಯ ಜತೆಗೆ ಮಕ್ಕಳಿಗೆ ಅನ್ನ, ಅಕ್ಷರ ನೀಡುವುದನ್ನು ಎಂದಿಗೂ ಮರೆಯಲಿಲ್ಲ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಮಾನವ ಧರ್ಮವೇ ದೊಡ್ಡದು ಎಂದು ನಂಬಿದ್ದ ಅವರು ದೇಶ ಕಂಡ ಮಹಾನ್ ಚೇತನ. ಅವರು ದೈಹಿಕವಾಗಿ ದೂರವಾಗಿದ್ದರೂ ಅವರ ಆದರ್ಶ, ಸೇವಾಗುಣ ನಮ್ಮೊಂದಿಗೆ ಸದಾ ಇರುತ್ತದೆ’ ಎಂದು ಹೇಳಿದರು.

‘ಶ್ರೀಗಳು ಲಕ್ಷಾಂತರ ಮಂದಿಗೆ ವಿದ್ಯಾ ದಾನ ಮಾಡಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಕಲಿತ ಅನೇಕರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ, ಇಂತಹ ಲಕ್ಷಾಂತರ ಶಿಷ್ಯ ವರ್ಗ ಹೊಂದಿದ್ದ ಸ್ವಾಮೀಜಿಗಳು ಕರ್ನಾಟಕದ ಆದರ್ಶ’ ಎಂದು ಅಭಿಪ್ರಾಯಪಟ್ಟರು.

ವೇಮಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಸದಸ್ಯರಾದ ಕೃಷ್ಣ, ನಾಗರಾಜ್, ರಮೇಶ್, ಸುಶೀಲಾ, ಭಾಗ್ಯಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಬಿ.ಉದಯಶಂಕರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಶಿಕ್ಷಕರಾದ ಸದಾನಂದ, ಜಗದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.