ADVERTISEMENT

ಶ್ರೀನಿವಾಸಪುರ | ಬಡವರ ಕೈ ಹಿಡಿದ ಮಾವಿನ ಹೋಳು

ಅನುಪಯುಕ್ತವೆಂದು ಬಿಸಾಕಿದ ಮಾವಿನ ಕಾಯಿಗೂ ಬಂದಿದೆ ಮಾನ್ಯತೆ

ಆರ್.ಚೌಡರೆಡ್ಡಿ
Published 27 ಜೂನ್ 2020, 8:31 IST
Last Updated 27 ಜೂನ್ 2020, 8:31 IST
ಎಪಿಎಂಸಿ ಮಾರುಕಟ್ಟೆ ಸಮೀಪ ಗುಡಿಸಲುಗಳ ಮುಂದೆ ಒಣಗಲು ಹರಡಿರುವ ಮಾವಿನ ಹೋಳು
ಎಪಿಎಂಸಿ ಮಾರುಕಟ್ಟೆ ಸಮೀಪ ಗುಡಿಸಲುಗಳ ಮುಂದೆ ಒಣಗಲು ಹರಡಿರುವ ಮಾವಿನ ಹೋಳು   

ಶ್ರೀನಿವಾಸಪುರ: ಅನುಪಯುಕ್ತವೆಂದು ಬಿಸಾಕಿದ ಮಾವಿನ ಕಾಯಿಗೂ ಮಾನ್ಯತೆ ಬಂದಿದೆ. ಅಂಥ ಮಾವನ್ನು ಹೋಳು ಮಾಡಿ ಬಿಸಿಲಿನಲ್ಲಿ ಒಣಗಿಸಿ ಮಾರುವುದು ಮಾವಿನ ಪಟ್ಟಣವೆಂದು ಕರೆಯುವ ಶ್ರೀನಿವಾಸಪುರದಲ್ಲಿ ಗೃಹ ಉದ್ಯಮವಾಗಿ ಬೆಳೆಯುತ್ತಿದೆ.

ಹಿಂದೆ ಮಾವಿನ ಕಾಯಿ ಮಂಡಿಗಳಲ್ಲಿ ಗ್ರೇಡಿಂಗ್‌ ಮಾಡುವಾಗ ಕಂಡುಬರುವ ಮಚ್ಚೆ ಕಾಯಿ, ಒಡೆದ ಕಾಯಿ, ತೀರಾ ಚಿಕ್ಕ ಗಾತ್ರದ ಕಾಯಿಗಳನ್ನು ಆರಿಸಿ ಮಂಡಿ ಹೊರಗೆ ರಾಶಿ ಹಾಕುತ್ತಿದ್ದರು. ಅದು ಕೊಳೆತು ಹಂದಿಗಳಿಗೆ ಆಹಾರವಾಗುತ್ತಿತ್ತು. ಆದರೆ, ಈಗ ಅಂಥ ಸ್ಥಿತಿ ಇಲ್ಲ.

ಹಿಂದಕ್ಕೆ ಬಿದ್ದ ಕಾಯಿಯನ್ನು ಕೆಲವರು ಅದರಲ್ಲೂ ಹೆಚ್ಚಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಡವರು ಎತ್ತಿಕೊಂಡು ಹೋಗಿ ಕತ್ತರಿಸಿ ಹೋಳು ಮಾಡಿ ಬಟ್ಟೆಗಳ ಮೇಲೆ ಹರಡಿ ಒಣಗಿಸುತ್ತಾರೆ. ಹೀಗೆ ಒಣಗಿದ ಹೋಳನ್ನು ಕೆ.ಜಿ.ಗೆ ₹30ರಿಂದ ₹40ಕ್ಕೆ ಮಾರುತ್ತಾರೆ.

ADVERTISEMENT

‘ಈ ಮಾವಿನ ಹೋಳಿಗೆ ರಾಜ್ಯದ ವ್ಯಾಪಾರಿಗಳಿಂದ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಬೇಡಿಕೆ ಇದೆ. ಚೆನ್ನಾಗಿ ಒಣಗಿದ ಹೋಳು ಉತ್ತಮ ಬೆಲೆಗೆ ಮಾರಾಟವಾಗುತ್ತದೆ. ಈ ಹೋಳನ್ನು ಪುಡಿ ಮಾಡಿ ಬೇರೆ ಬೇರೆ ಉತ್ಪನ್ನಗಳ
ತಯಾರಿಕೆಯಲ್ಲಿ ಬಳಸುತ್ತಾರೆ’ ಎಂದು ಷಬ್ಬೀರ್‌ ಅಹ್ಮದ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಈ ವೃತ್ತಿಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ತೊಡಗಿಕೊಂಡಿದ್ದಾರೆ. ಕೊರೊನಾ ಸಂದರ್ಭ ಎಲ್ಲೂ ಹೋಗದೆ ಮನೆ ಬಾಗಿಲಲ್ಲಿ ಕೆಲಸ ಇರುವುದರಿಂದ ತೊಂದರೆ ಇಲ್ಲ. ಕೆಲವರು ತೋಟಗಳಿಗೆ ತೆರಳಿ ಅಲ್ಲಿ ಉದುರಿದ ಕಾಯಿಯನ್ನು ಆರಿಸಿ ತಂದು ಹೋಳು ಮಾಡುತ್ತಾರೆ. ಕಸದಿಂದ ರಸ ತೆಗೆಯುವ ಕೆಲಸ ನಡೆಯುತ್ತಿದೆ. ಇದು ಬಡವರ ತುತ್ತಿನ ಚೀಲ ತುಂಬುತ್ತಿದೆ. ಇದರ ಸಂಸ್ಕರಣೆ ಸರಳವಾಗಿರುವುದರಿಂದ ಎಲ್ಲ ವಯೋಮಾನದ ವ್ಯಕ್ತಿಗಳೂ ಈ ಕೆಲಸದಲ್ಲಿ ನಿರತರಾಗಿದ್ದಾರೆ’ ಎನ್ನುತ್ತಾರೆ ಬೀಬಿಮಾ.

ಒಡೆದ ಕಾಯಿ ಹಣ್ಣಾಗುವುದಿಲ್ಲ. ಹಾಗೇ ಬಿಟ್ಟರೆ ಕೊಳೆತು ಹೋಗುತ್ತದೆ. ಅಂಥ ಕಾಯಿಯನ್ನು ಅದರಲ್ಲೂ ಬೇನಿಷಾ, ತೋತಾಪುರಿ ಜಾತಿಯ ಅನುಪಯುಕ್ತವೆಂದು ತಿರಸ್ಕರಿಸಿದ ಕಾಯಿಯನ್ನು ಕತ್ತರಿಸಿ ಹೋಳನ್ನು ಒಣಗಿಸಿಟ್ಟು, ಮಾವಿನ ಸುಗ್ಗಿ ಮುಗಿದ ಮೇಲೆ ಉಪ್ಪು ಖಾರ ಹಾಕಿ ಮಾರುತ್ತಾರೆ. ಅದರ ವಿಶಿಷ್ಟ ರುಚಿಗೆ ಮಾರುಹೋದವರು ಹೋಳನ್ನು ಖರೀದಿಸಿ ತಿನ್ನುತ್ತಾರೆ.

ಒಣ ಹೋಳಿಗೆ ಬೇಡಿಕೆ ಇರುವುದರಿಂದ, ಮಂಡಿ ಸಮೀಪದ ಬಡ ಕುಟುಂಬಗಳು ಹೋಳು ಮಾಡುವ ಕಾರ್ಯದಲ್ಲಿ ತೊಡಗಿವೆ. ಕೆಲವು ಸಂದರ್ಭಗಳಲ್ಲಿ ಕಾಯಿ ಉಚಿತವಾಗಿ ಸಿಗುವುದಿಲ್ಲ. ಅಂಥ ಸಂದರ್ಭದಲ್ಲಿ ಕಡಿಮೆ ಬೆಲೆ ಕೊಟ್ಟು ಖರೀದಿಸುವ ಅನಿವಾರ್ಯತೆ ಉಂಟಾಗುತ್ತದೆ. ಆದರೂ ಪರವಾಗಿಲ್ಲ ಎನ್ನುತ್ತಾರೆ ಖಯೂಂ.

ಈ ಬಾರಿ ಮಾವಿನ ಕಾಯಿ ಫಸಲು ಕಡಿಮೆ ಇರುವುದರಿಂದ ಈ ಕೆಲಸಕ್ಕೆ ದೊಡ್ಡ ಪ್ರಮಾಣದಲ್ಲಿ ಕಾಯಿ ಸಿಗುತ್ತಿಲ್ಲ. ಆದರೂ ಇರುವುದರಲ್ಲಿಯೇ ಕಾಯಕ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.