ADVERTISEMENT

ಜಮ್ಮು ಕಾಶ್ಮೀರದಲ್ಲಿ ಸೈನಿಕ ಹುತಾತ್ಮ, ಸಾವಿನ ಬಗ್ಗೆ ಗೊಂದಲ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 14:14 IST
Last Updated 27 ಫೆಬ್ರುವರಿ 2020, 14:14 IST
ಕೆ.ಎನ್.ಪ್ರಶಾಂತ್
ಕೆ.ಎನ್.ಪ್ರಶಾಂತ್   

ಬಂಗಾರಪೇಟೆ: ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದ ತಾಲ್ಲೂಕಿನ ಕಣಿಂಬೆಲೆ ಗ್ರಾಮದ ಸೈನಿಕ ಕೆ.ಎನ್.ಪ್ರಶಾಂತ್ (25) ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಮೃತಪಟ್ಟಿದ್ದು, ಅವರ ಸಾವಿನ ಕಾರಣದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

17ನೇ ಮದ್ರಾಸ್ ರೆಜಿಮೆಂಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಜ್ವರದಿಂದ ಬಳಲುತ್ತಿರುವುದಾಗಿ ಸೇನೆ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಕುಟುಂಬ ಸದಸ್ಯರು ಜಮ್ಮು ಕಾಶ್ಮೀರಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಸೇನೆ ಅಧಿಕಾರಿಗಳು ಬುಧವಾರ ಕುಟುಂಬ ಸದಸ್ಯರಿಗೆ ಕರೆ ಮಾಡಿ ಪ್ರಶಾಂತ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರೆಲ್ಲರೂ ಜಮ್ಮು ಕಾಶ್ಮೀರಕ್ಕೆ ತೆರಳಿದ್ದು, ಮೊಬೈಲ್‌ ಸಂಪರ್ಕಕ್ಕೆ ಲಭ್ಯರಾಗಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜಮ್ಮುವಿನಲ್ಲಿ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಯೋಧ ಪ್ರಶಾಂತ್‌ ನಿಧನಕ್ಕೆ ಸಂತಾಪ ಸೂಚಿಸುವುದಾಗಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಪ್ರಶಾಂತ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಬಂಗಾರಪೇಟೆ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಓದಿದ್ದ ಅವರು 2015ರಲ್ಲಿ ಸೇನೆಗೆ ಸೇರಿದ್ದರು. ತಮಿಳುನಾಡಿನ ಊಟಿಯಲ್ಲಿ ತರಬೇತಿ ಪಡೆದ ಬಳಿಕ ಅವರನ್ನು ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು’ ಎಂದು ಸ್ನೇಹಿತ ಹರೀಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ವರ್ಷಗಳ ಹಿಂದೆ ಪ್ರಶಾಂತ್‌ರ ತಂದೆ ಮೃತಪಟ್ಟಿದ್ದರು. ತಾಯಿ ಲಕ್ಷ್ಮಮ್ಮ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಹುಟ್ಟೂರಿನಲ್ಲಿ ಮನೆ ಕಟ್ಟಿಸುತ್ತಿರುವ ಪ್ರಶಾಂತ್ ಒಂದೂವರೆ ತಿಂಗಳ ಹಿಂದೆ ಗ್ರಾಮಕ್ಕೆ ಬಂದು ಹೋಗಿದ್ದರು’ ಎಂದು ಹೇಳಿದರು.

ಗೊಂದಲವಿದೆ: ‘ಪ್ರಶಾಂತ್‌ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಯೇ ಅಥವಾ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಅವರ ಸಾವಿನ ಕಾರಣದ ಬಗ್ಗೆ ಗೊಂದಲವಿದೆ. ಪಾರ್ಥಿವ ಶರೀರವನ್ನು ಶುಕ್ರವಾರ (ಫೆ.28) ಹುಟ್ಟೂರಿಗೆ ತರುವ ನಿರೀಕ್ಷೆಯಿದೆ. ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ಮಾಡಲಾಗಿದೆ’ ಎಂದು ಪ್ರಭಾರ ಜಿಲ್ಲಾಧಿಕಾರಿ ಎಚ್‌.ವಿ.ದರ್ಶನ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.