
ಬಂಗಾರಪೇಟೆ: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ಶಬ್-ಎ-ಬರಾತ್ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಅವರು ಮಂಗಳವಾರ ರಾತ್ರಿ ಖುದ್ದಾಗಿ ರಸ್ತೆಗಿಳಿದು ವಿಶೇಷ ಗಸ್ತು ನಡೆಸುವ ಮೂಲಕ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಶಬ್-ಎ-ಬರಾತ್ ಎಂದರೆ ಕ್ಷಮೆಯ ರಾತ್ರಿ. ಈ ದಿನದಂದು ಮುಸ್ಲಿಂ ಸಮುದಾಯದವರು ರಾತ್ರಿ ಪ್ರಾರ್ಥನೆ ಸಲ್ಲಿಸಿ, ಸಮಾಧಿಗಳಿಗೆ ಭೇಟಿ ನೀಡಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದು ರೂಢಿ. ಈ ಸಂದರ್ಭದಲ್ಲಿ ನೂರಾರು ಜನರು ಸಮಾಧಿಗಳ ಬಳಿ ಸೇರುವುದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.
ನಗರದಲ್ಲಿ ಈ ಹಿಂದೆ ನಡೆದಿದ್ದ ಈದ್ ಮಿಲಾದ್ ವೇಳೆ ಪ್ಯಾಲೆಸ್ಟೀನ್ ಧ್ವಜ ಹಾರಾಡಿಸಿ ಪುಂಡಾಟಿಕೆ. ಉರುಸ್ ಸಮಯದಲ್ಲಿ ಯುವಕರ ಮೇಲೆ ನಡೆದ ದೌರ್ಜನ್ಯ ಹಾಗೂ ಇತ್ತೀಚಿನ ಹಿಂದೂ ಸಮಾಜೋತ್ಸವ ಹಿನ್ನೆಲೆ ಬಂಗಾರಪೇಟೆ ನಗರವನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿತ್ತು. ಹಾಗಾಗಿ ಎಸ್‌ಪಿ ಅವರು ಗಸ್ತು ನಡೆಸಿದರು.
ನಗರದ ಎಸ್‌ಎನ್ ರೆಸಾರ್ಟ್, ಬೂದಿಕೋಟೆ ರಸ್ತೆ ಮತ್ತು ಸೂಲಿಕುಂಟೆ ರಸ್ತೆಗಳಲ್ಲಿ ವಿಶೇಷ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಪ್ರತಿ ವಾಹನವನ್ನು ತಪಾಸಣೆ ಮಾಡಲಾಯಿತು.
ಕರ್ತವ್ಯನಿರತ ಸಿಬ್ಬಂದಿಗೆ ಸದಾ ಜಾಗರೂಕರಾಗಿರುವಂತೆ ಸೂಚಿಸಿದ್ದು, ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಪೊಲೀಸ್ ಇಲಾಖೆಯ ಬಿಗಿ ಕ್ರಮದಿಂದಾಗಿ ಶಬ್-ಎ-ಬರಾತ್ ಕಾರ್ಯಕ್ರಮಗಳು ಯಾವುದೇ ಅಡೆತಡೆಯಿಲ್ಲದೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಗಸ್ತು ಕಾರ್ಯದಲ್ಲಿ ಡಿವೈಎಸ್‌ಪಿ ಲಕ್ಷ್ಮಯ್ಯ, ಪೊಲೀಸ್ ಇನ್‌ಸ್ಪೆಕ್ಟರ್ ದಯಾನಂದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.