ADVERTISEMENT

ಶ್ರೀನಿವಾಸಪುರ: ಹೊಗಳಗೆರೆ ಗ್ರಾಮದಲ್ಲಿ ಅನೈರ್ಮಲ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 3:09 IST
Last Updated 21 ಅಕ್ಟೋಬರ್ 2025, 3:09 IST
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಗ್ರಾಮದ ಚರಂಡಿಗಳು ತ್ಯಾಜ್ಯದಿಂದ ಮುಚ್ಚಿ ಹೋಗಿವೆ
ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಗ್ರಾಮದ ಚರಂಡಿಗಳು ತ್ಯಾಜ್ಯದಿಂದ ಮುಚ್ಚಿ ಹೋಗಿವೆ   

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಗಳಗೆರೆ ಗ್ರಾಮದಲ್ಲಿ ಅನೈರ್ಮಲ್ಯ ತಾಂಡಡವಾಡುತ್ತಿದ್ದರೂ ಕೇಳುವವರಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ 150 ಮನೆಗಳಿದ್ದು, ಒಂದು ಸಾವಿರ ಜನಸಂಖ್ಯೆ ಇದೆ. ಸ್ವಚ್ಛತೆ ಹಾಗೂ ನೈರ್ಮಲ್ಯವಿಲ್ಲದೆ ರೋಗ ಭೀತಿ ಎದುರಾಗಿದೆ ಎಂದಿದ್ದಾರೆ.

ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಬರುತ್ತದೆ. ಆದರೆ ನೈರ್ಮಲ್ಯ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಮಳೆ ಹಾಗೂ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಚರಂಡಿಗಳಲ್ಲಿ ಪ್ಲಾಸ್ಟಿಕ್ ಬಾಟಲ್‍ಗಳು ಹಾಗೂ ಇತರೆ ತ್ಯಾಜ್ಯ ತುಂಬುಕೊಂಡಿದೆ. ಚರಂಡಿಗಳು ಬಹುತೇಕ ಮುಚ್ಚಿಹೋಗಿವೆ. ಮಳೆ ನೀರು ಹಾಗೂ ಚರಂಡಿ ಕಶ್ಮಲ ರಸ್ತೆಗೆ ಹರಿಯುತ್ತಿದೆ. ಚರಂಡಿ ನೀರನ್ನು ದಾಟಿಕೊಂಡೇ ಹೋಗಬೇಕಾದ ದುಸ್ಥಿತಿ ಬಂದಿದೆ ಎಂದು ಗ್ರಾಮಸ್ಥರಾದ ಮುನಿರಾಜು, ಗಗನ್, ವೆಂಕಟೇಶಪ್ಪ, ಸುರೇಶ್ , ವೆಂಕಟರಮಣ, ಚಲಪತಿ, ಮುನಿಯಪ್ಪ ಹೇಳಿದ್ದಾರೆ.

ADVERTISEMENT

ಸೊಳ್ಳೆಗಳ ಕಾಟ ಹೆಚ್ಚಿದ್ದು, ಜ್ವರ ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಬರುವ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ದುರ್ನಾತ ಬೀರುತ್ತಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನೆಲೆಸಿದೆ ಎಂದಿದ್ದಾರೆ.

ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಏಕೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಗ್ರಾ.ಪಂ. ಮಾಜಿ ಸದಸ್ಯ ಎಚ್.ಕೆ.ಸೀತಪ್ಪ ಮಾತನಾಡಿ, ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದಿದ್ದಾರೆ. ಇದರಿಂದ ಕೆಲ ರಸ್ತೆಗಳು ಹಾಳಾಗಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.