ಕೋಲಾರ: ‘ವರ್ಷದ ಹಿಂದೆಯೇ ಪ್ರಾಥಮಿಕ ಅಧಿಸೂಚನೆ ಆಗಿರುವ ಶ್ರೀನಿವಾಸಪುರ ತಾಲ್ಲೂಕಿನ ಎದುರೂರು ಕೈಗಾರಿಕಾ ವಲಯ ಯೋಜನೆ ಇಷ್ಟೊತ್ತಿಗೆ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಕುತಂತ್ರದಿಂದ ತಡೆ ಆಗುತ್ತಿದೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲಗಳು ಹೆಚ್ಚು’ ಎಂದು ಕಾಂಗ್ರೆಸ್ ಮುಖಂಡ ಶೇಷಾಪುರ ಗೋಪಾಲ್ ಆರೋಪಿಸಿದ್ದಾರೆ.
‘ಸ್ಥಳೀಯರು ತಪ್ಪು ಮಾಹಿತಿ ನೀಡಿ ಕೆಐಎಡಿಬಿನಿಂದ ಅಧಿಸೂಚನೆ ಮಾಡಿಸಲು ಕಾರಣರಾಗಿದ್ದಾರೆ ಎನ್ನುವುದಾದರೆ ಅಂಥವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸಿ. ಈ ವಿಷಯದಲ್ಲಿ ತಮಗೇನಾದರೂ ಪ್ರಾಮಾಣಿಕತೆ ಇದ್ದರೆ ಮೂರು ತಿಂಗಳೊಳಗೆ ಯೋಜನೆ ಅನುಷ್ಠಾನಗೊಳಿಸಿ. ಇಲ್ಲದಿದ್ದರೆ ಈ ಎಲ್ಲಾ ಜಮೀನುಗಳನ್ನು ಅಧಿಸೂಚನೆಯಿಂದ ಮುಕ್ತಿಗೊಳಿಸುವುದಾಗಿ ಸಾರ್ವಜನಿಕವಾಗಿ ಹೇಳಿ’ ಎಂದು ಸವಾಲು ಹಾಕಿದ್ದಾರೆ.
‘ಎಂಟು ವರ್ಷಗಳ ಹಿಂದೆ ರಮೇಶ್ ಕುಮಾರ್ ಶಾಸಕ, ಮಂತ್ರಿ ಆಗಿದ್ದ ಸಮಯದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ 600 ಎಕರೆಗೂ ಮಿಗಿಲಾದ ಜಮೀನನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಅದಕ್ಕೆ ಪೂರಕವಾದ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸಹ ಉಪವಿಭಾಗಾಧಿಕಾರಿ ಹಂತದಲ್ಲಿ ಮುಕ್ತಾಯಗೊಳಿಸಿದ್ದರು. ಆ ಸಮಯದಲ್ಲಿ ರಮೇಶ್ ಕುಮಾರ್ ಸುತ್ತ ನಿಂತಿದ್ದ ದೊಡ್ಡ ನಾಯಕರು ರೈತರ ಜಮೀನನ್ನು ಕೈಗಾರಿಕೆಗಾಗಿ ಕೊಡಲು ಅತಿ ಉತ್ಸುಕರಾಗಿದ್ದರು. ಕೆ.ಎಚ್.ಮುನಿಯಪ್ಪ ಅವರ ಸುತ್ತು ಓಡಾಡಿದ್ದನ್ನು ಎಲ್ಲರೂ ಕಂಡಿದ್ದೇವೆ. ಸರ್ವೇ ಮತ್ತು ವಿಲೇಜ್ ಮ್ಯಾಪ್‍ಗಳನ್ನು ಹಿಡಿದುಕೊಂಡು ಕೋಲಾರ ಪ್ರವಾಸಿ ಮಂದಿರದಲ್ಲಿ ಮುನಿಯಪ್ಪ ಅವರ ಮೇಲೆ ಜಮೀನು ತೆಗೆದುಕೊಳ್ಳಲು ಒತ್ತಡ ಹೇರಿದ್ದನ್ನೂ ಕಣ್ಣಾರೆ ಕಂಡಿದ್ದೇವೆ’ ಎಂದು ಹೇಳಿದ್ದಾರೆ.
‘ಎದುರೂರು ಕೈಗಾರಿಕಾ ವಲಯ ಸ್ಥಾಪನೆಗೆ ಬಲವಂತದಿಂದ ರೈತರ ಜಮೀನನ್ನು ವಶಪಡಿಸಿಕೊಳ್ಳಿ ಎಂದು ಯಾರೂ ಹೇಳುತ್ತಿಲ್ಲ. ಕೆಐಎಡಿಬಿಯಿಂದ ಕೈಗಾರಿಕಾ ವಲಯ ವಿಸ್ತರಣೆ ಹಾಗೂ ಅಭಿವೃದ್ಧಿಯ ಕಾರ್ಯಕ್ರಮದಡಿಯಲ್ಲಿ ಸಹಜ ಪ್ರಕ್ರಿಯೆಯನ್ನು ಶುರು ಮಾಡಲಾಗಿದೆ. ಇದರಲ್ಲಿ ಕ್ಷೇತ್ರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಪ್ರಯತ್ನವೂ ಇದೆ. ಇದು ಕೆಐಎಡಿಬಿಯ ಭೂಸ್ವಾಧೀನ ಪ್ರಕ್ರಿಯೆ ಅಡಿಯಲ್ಲಿ ಆಗಬೇಕೇ ಹೊರತು ಅದನ್ನು ಹೊರತುಪಡಿಸಿ ಬೇರೆ ಏನೂ ಮಾಡಲು ಆಗುವುದಿಲ್ಲ. ಭೂಸ್ವಾಧೀನ ಪಡಿಸಿಕೊಳ್ಳುವ ಮೊದಲು ರೈತರ ಅಭಿಪ್ರಾಯ ತೆಗೆದುಕೊಳ್ಳಲಿ ಎಂದು ಹೇಳಿದ್ದೇ ವೆಂಕಟಶಿವಾರೆಡ್ಡಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.