ADVERTISEMENT

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸೂಚನೆ

ಪರೀಕ್ಷೆಗೆ ಸಿದ್ಧತೆ: ಬರೀ ಬಾಯಿಮಾತಿನ ಬೋಧನೆ ಬೇಡ, ಕಾರ್ಯಸಿದ್ಧಿ ಕ್ರಿಯಾ ಯೋಜನೆ ಜಾರಿಗೊಳಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:51 IST
Last Updated 11 ಡಿಸೆಂಬರ್ 2025, 6:51 IST
ಕೋಲಾರದಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ ನೀಡಿದರು
ಕೋಲಾರದಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಚಾಲನೆ ನೀಡಿದರು    

ಕೋಲಾರ: ಕೇವಲ ಬಾಯಿಮಾತಿನ ಬೋಧನೆ ಮತ್ತು ಸಾಮಾನ್ಯ ಕಾರ್ಯತಂತ್ರ ಬಿಟ್ಟು ಶೈಕ್ಷಣಿಕ ಫಲಿತಾಂಶ ಸುಧಾರಣೆಗಾಗಿ ಪರಿಣಾಮಕಾರಿ ಮತ್ತು ಅನುಷ್ಠಾನ ಯೋಗ್ಯವಾದ ಮೈಕ್ರೋ ಯೋಜನೆ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರದಲ್ಲಿ ಮಾತನಾಡಿ, ಕಡಿಮೆ ಫಲಿತಾಂಶದ ಸಮಸ್ಯೆಗಳನ್ನು ನಿಭಾಯಿಸಲು ಇಲಾಖೆ ರೂಪಿಸಿರುವ ಕಾರ್ಯತಂತ್ರಗಳ ಪರಿಶೀಲಿಸಿದರು.

ಇಲಾಖೆಯ ಕಳೆದ ವರ್ಷದ ಕಾರ್ಯವಿಧಾನಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇವಲ ಮಾತುಗಳ ಬದಲು ಅನುಷ್ಠಾನ ಯೋಗ್ಯವಾದ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನಕ್ಕೆ ತರುವಂತೆ ತಾಕೀತು ಮಾಡಿದರು.

ADVERTISEMENT

ಕಳೆದ ವರ್ಷದ ಪರೀಕ್ಷಾ ಫಲಿತಾಂಶದಿಂದ ಇಲಾಖೆ ಕಲಿತ ಪಾಠಗಳೇನು? ಮಾಡಿದ ಲೋಪಗಳನ್ನು ಗುರುತಿಸಿ ತಿದ್ದಿಕೊಳ್ಳುವ ಆತ್ಮಾವಲೋಕನ ಆಗದಿದ್ದರೆ ಅದೇ ತಪ್ಪುಗಳು ಪುನರಾವರ್ತನೆಯಾಗುತ್ತವೆ. ಸಮಸ್ಯೆಯ ಮೂಲವನ್ನು ಗುರಿಯಾಗಿಸಿ ಕಾರ್ಯನಿರ್ವಹಿಸಬೇಕು. ಇಲಾಖೆಯ ಸಾಮಾನ್ಯ ವಿಧಾನ ಸರಿ ಇಲ್ಲ ಎಂದರು.

ಇಲಾಖೆ ರೂಪಿಸಿರುವ ಕ್ರಿಯಾ ಯೋಜನೆಯು ಶೇ 89ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳ ಬಗ್ಗೆ ಮಾತ್ರ ಮಾತನಾಡುತ್ತಿದೆ. ಆದರೆ, ಅನುತ್ತೀರ್ಣರಾದ ಸುಮಾರು 1,865 ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಏನು ಕಾರ್ಯತಂತ್ರವಿದೆ ಎಂದು ಪ್ರಶ್ನಿಸಿದರು.

ಯಾವ ವಿಷಯದಲ್ಲಿ, ಯಾವ ಕಾರಣಕ್ಕೆ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸುತ್ತಿದ್ದಾರೆ ಎಂಬುದರ ವಿಷಯವಾರು ಆಳವಾದ ವಿಶ್ಲೇಷಣೆ ನಡೆಸಬೇಕು. ಸಾಮಾಜಿಕ, ಆರ್ಥಿಕ ಹಿನ್ನಲೆಯುಳ್ಳ ಅಥವಾ ಗಡಿ ಪ್ರದೇಶಗಳಲ್ಲಿನ ಭಾಷಾ ಸಮಸ್ಯೆಗಳಿಂದ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತವಾದ ಮಾರ್ಗೋಪಾಯಗಳನ್ನು ಒದಗಿಸಬೇಕು. ಪ್ರತಿ ಶಾಲೆಯಲ್ಲೂ ತಮ್ಮದೇ ಆದ ಮೈಕ್ರೋ ಮಟ್ಟದ ಯೋಜನೆಯನ್ನು ತಯಾರಿಸಿ ಅನುಷ್ಠಾನಗೊಳಿಸುವುದು ಕಡ್ಡಾಯ ಎಂದರು.

ಪರೀಕ್ಷಾ ಫಲಿತಾಂಶಕ್ಕಿಂತ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸುವ ಸಕಾರಾತ್ಮಕ ಆತ್ಮಸ್ಥೈರ್ಯ ಬೆಳೆಸುವುದು ಮುಖ್ಯ. ಆಡಳಿತಶಾಹಿಗಳು, ಶಿಕ್ಷಕರು ಅಥವಾ ಮುಖ್ಯ ಶಿಕ್ಷಕರಂತೆ ವರ್ತಿಸುವುದನ್ನು ಮರೆತು, ಮೊದಲಿಗೆ ಪೋಷಕರಂತೆ ಮತ್ತು ನಂತರ ಸೌಲಭ್ಯ ಒದಗಿಸುವವರಂತೆ ವರ್ತಿಸಿ ಸಲಹೆ ನೀಡಿದರು.

ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳನ್ನು ಸಹ ಉತ್ತರದಾಯಿತ್ವಕ್ಕೆ ಮತ್ತು ಹೊಣೆಗಾರಿಕೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ‘ಡಿಡಿಪಿಐ ಈಗಾಗಲೇ ಫಲಿತಾಂಶ ಸುಧಾರಣೆಗೆ ಬೇಕಾದ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ನಿರ್ದಿಷ್ಟವಾಗಿ 29 ಅಂಶಗಳ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ಶಿಕ್ಷಕರ ಪ್ರಾಮಾಣಿಕ ಪ್ರಯತ್ನವನ್ನು ಅವಲಂಬಿಸಿರುತ್ತದೆ’ ಎಂದು ಹೇಳಿದರು.

ಕ್ರೈಸ್‌ ವಸತಿ ಶಾಲೆಗಳಲ್ಲಿ ಶೇ 90ಕ್ಕಿಂತ ಹೆಚ್ಚಿನ ಫಲಿತಾಂಶ ಬಂದಿದೆ. ಉತ್ತಮ ಸೌಲಭ್ಯಗಳು, ಆಹಾರ, ಗ್ರಂಥಾಲಯದ ಜೊತೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಮಯ ಅಧ್ಯಯನಕ್ಕೆ ಮೀಸಲಿಡುವುದರಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದರು.

ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ಮಾತನಾಡಿ, ಶೇ 100ರಷ್ಟು ಫಲಿತಾಂಶದ ಗುರಿ ತಲುಪಲು ಇಲಾಖೆಯು ರೂಪಿಸಿರುವ ನಡೆಯುತ್ತಿರುವ ಮತ್ತು ಹೊಸ ಉಪಕ್ರಮಗಳನ್ನು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಧಿಕಾರಿ ಮೈಲಾರಪ್ಪ, ಡಯಟ್ ಪ್ರಾಂಶುಪಾಲ ಕೃಷ್ಣಮೂರ್ತಿ, ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನ್ಯಾಸಕರು, ನೋಡಲ್ ಅಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

ಪರೀಕ್ಷೆಗೆ 18160 ವಿದ್ಯಾರ್ಥಿ ನೋಂದಣಿ

ಜಿಲ್ಲೆಯಲ್ಲಿ 396 ಶಾಲೆಗಳಿಂದ ಒಟ್ಟು 18160 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಪೋಷಕರು ಹಾಗೂ ಶಿಕ್ಷಕರ ಸಭೆಗಳನ್ನು ನಡೆಸಲಾಗಿದೆ. ಪರೀಕ್ಷಾ ಸಿದ್ಧತೆಗಾಗಿ ಕನಿಷ್ಠ ಮೂರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪತ್ರಿಕೆಗಳಲ್ಲಿ ಯಶಸ್ವಿಯಾದಲ್ಲಿ ಶೇ 100ರಷ್ಟು ಫಲಿತಾಂಶ ಬರುವ ಭರವಸೆ ಇದೆ ಎಂದು ಡಿಡಿಪಿಐ ಅಲ್ಮಾಸ್ ಪರ್ವೀನ್ ತಾಜ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.