ADVERTISEMENT

ಜನ ಕಷ್ಟದಲ್ಲಿದ್ದರೂ ವಿಧಾನ ಪರಿಷತ್‌ ಚುನಾವಣೆಯೇ ಬಿಜೆಪಿಗೆ ಆದ್ಯತೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 14:49 IST
Last Updated 21 ನವೆಂಬರ್ 2021, 14:49 IST
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ   

ಕೋಲಾರ: ‘ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಮನೆಗಳು ಬಿದ್ದಿದ್ದು, ಜನ ನೋವಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ವಿಧಾನ ಪರಿಷತ್‌ ಚುನಾವಣೆಯೇ ಮುಖ್ಯವಾಗಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಳೆಯು ರಾಜ್ಯದಲ್ಲಿ ದೊಡ್ಡ ಅವಾಂತರ ಸೃಷ್ಟಿಸಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ, ರಾಜ್ಯ ಸರ್ಕಾರವು ಜನರ ಕಷ್ಟ ಮರೆತು ಚುನಾವಣೆಯನ್ನು ಆದ್ಯತೆಯಾಗಿ ತೆಗೆದುಕೊಂಡಿದೆ’ ಎಂದು ಟೀಕಿಸಿದರು.

‘ಬಿಜೆಪಿಯ ಜನ ಸ್ವರಾಜ್‌ ಸಮಾವೇಶ ಹಾಗೂ ಕಾಂಗ್ರೆಸ್‌ನ ಜನ ಜಾಗೃತಿ ಸಮಾವೇಶಗಳು ವಿಧಾನ ಪರಿಷತ್‌ ಚುನಾವಣೆಯ ಪ್ರಚಾರ ಕಾರ್ಯಕ್ರಮಗಳಾಗಿವೆ. ಆಡಳಿತ ಪಕ್ಷ ಬಿಜೆಪಿಗೆ ಹಾಗೂ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್‌ಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಮುಖ್ಯವಾಗಿದೆ. ನಮ್ಮ ಪಕ್ಷದಿಂದ ನೆರೆ ಪರಿಹಾರದ ಬಗ್ಗೆ ಗಮನ ಹರಿಸುವಂತೆ ಪ್ರತಿನಿತ್ಯ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವೆ’ ಎಂದರು.

ADVERTISEMENT

‘ಕೇಂದ್ರವು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿರುವುದು ಕಾಂಗ್ರೆಸ್ ಸೇರಿದಂತೆ ಯಾರ ಗೆಲುವೂ ಅಲ್ಲ. ಇದು ರೈತ ಸಂಘಟನೆಗಳ ಗೆಲುವು. ವಿರೋಧ ಪಕ್ಷಗಳೂ ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ಯಾರೂ ಬೆನ್ನು ತಟ್ಟಿಕೊಳ್ಳಬೇಕಿಲ್ಲ. ರೈತರ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಈ ಹೋರಾಟದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ತೆಲಂಗಾಣ ಸರ್ಕಾರವು ದೆಹಲಿಯ ಹೋರಾಟದಲ್ಲಿ ಮೃತಪಟ್ಟ 750 ರೈತರ ಕುಟುಂಬಗಳಿಗೆ ತಲಾ ₹ 3 ಲಕ್ಷ ಪರಿಹಾರ ಘೋಷಿಸಿದೆ. ಕೇಂದ್ರ ಸರ್ಕಾರ ಇದೇ ರೀತಿ ಹೃದಯ ವೈಶಾಲ್ಯತೆ ತೋರಿಸಿ ರೈತರ ಪರವೆಂದು ಸಾಬೀತುಪಡಿಸಲು’ ಎಂದು ಸವಾಲು ಹಾಕಿದರು.

‘ಸರ್ಕಾರದ ಕೃಷಿ ಪ್ಯಾಕೇಜ್‌ಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಏಕೆಂದರೆ ರೈತರಿಗೆ ನೀಡುವ ಪ್ಯಾಕೇಜ್‍ಗಳಲ್ಲಿ ಸರ್ಕಾರಕ್ಕೆ ಯಾವುದೇ ರಿಟರ್ನ್ಸ್‌ ಬರುವುದಿಲ್ಲ. ಹೀಗಾಗಿ ಸರ್ಕಾರಗಳು ಬೇರೆ ಪ್ಯಾಕೇಜ್‍ಗಳತ್ತ ಹೆಚ್ಚಿನ ಗಮನ ಹರಿಸುತ್ತವೆ. ಕಮರ್ಷಿಯಲ್ ಪ್ಯಾಕೇಜ್‌ಗಳಾದರೆ ಸರ್ಕಾರಕ್ಕೆ ಬೇಗ ರಿಟರ್ನ್ಸ್‌ ಇದೆ’ ಎಂದು ಲೇವಡಿ ಮಾಡಿದರು.

ಪಟ್ಟಿ ಪ್ರಕಟ: ‘ಕಾಂಗ್ರೆಸ್‍ ಮುಖಂಡರು ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದರು. ಆದರೆ, ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗಿ ಸಚಿವರಾಗಿರುವವರ ಆಪ್ತ ಸಹಾಯಕರೊಬ್ಬರನ್ನು ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಬಿಜೆಪಿಯ ಎ ಟೀಮಾ ಅಥವಾ ಸಿ ಟೀಮಾ?’ ಎಂದು ಪ್ರಶ್ನಿಸಿದರು.

‘ವಿಧಾನ ಪರಿಷತ್ ಚುನಾವಣೆಯು ಪಕ್ಷದ ಚಿಹ್ನೆಯಡಿ ನಡೆಯುತ್ತಿಲ್ಲ. ಇದು ಪಕ್ಷ ಹೊರತುಪಡಿಸಿ ನಡೆಯುವ ಚುನಾವಣೆ. ಅಭ್ಯರ್ಥಿಗಳು ಹೆಸರಿಗಷ್ಟೇ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸುತ್ತಾರೆ. ವಿಧಾನ ಪರಿಷತ್‌ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬೆಂಗಳೂರಿನಲ್ಲಿ ಸೋಮವಾರ ಪ್ರಕಟಿಸುತ್ತೇವೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಯಾವುದೇ ಪ್ರಸ್ತಾವ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದರು. ಅವರಿಗೆ ರಾಜ್ಯದ ಗುತ್ತಿಗೆದಾರರು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಸಂಬಂಧ ಪತ್ರ ಬರೆದಿದ್ದು, ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.