ADVERTISEMENT

ಕೋಲಾರ | ಬೀದಿನಾಯಿ ಉಪಟಳ; ಕಡಿವಾಣಕ್ಕೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:20 IST
Last Updated 4 ಸೆಪ್ಟೆಂಬರ್ 2025, 6:20 IST
ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಜಿಲ್ಲಾ ಸರ್ವೇಕ್ಷಣಾ ಸಮನ್ವಯ ಸಮಿತಿ ಸಭೆ ನಡೆಯಿತು
ಕೋಲಾರದಲ್ಲಿ ಬುಧವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಜಿಲ್ಲಾ ಸರ್ವೇಕ್ಷಣಾ ಸಮನ್ವಯ ಸಮಿತಿ ಸಭೆ ನಡೆಯಿತು   

ಕೋಲಾರ: ಬೀದಿನಾಯಿಗಳ ಉಪಟಳ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಸಂತಾನೋತ್ಪತ್ತಿ ನಿಯಂತ್ರಣ ನಿಟ್ಟಿನಲ್ಲಿ ಎಲ್ಲಾ ಬೀದಿನಾಯಿಗಳಿಗೆ ಎಬಿಸಿ (ಪ್ರಾಣಿ ಸಂತಾನ ನಿಯಂತ್ರಣ) ಕಾರ್ಯಕ್ರಮದಡಿ ಲಸಿಕೆ ಹಾಕಿಸಬೇಕೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ, ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಘಟಕದಿಂದ ಆಯೋಜಿಸಿದ್ದ ಜಿಲ್ಲಾ ಸರ್ವೇಕ್ಷಣಾ ಸಮನ್ವಯ ಸಮಿತಿ ಸಭೆಯನ್ನು ಕುರಿತು ಮಾತನಾಡಿದರು.

ಜಿಲ್ಲೆಯಲ್ಲಿ ಈ ವರ್ಷ ಆಗಸ್ಟ್ ತಿಂಗಳ ಅಂತ್ಯದವರೆಗೆ 7,887 ಮಂದಿಗೆ ನಾಯಿ ಕಚ್ಚಿರುವ ಪ್ರಕರಣಗಳು ದಾಖಲಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದರು.

ADVERTISEMENT

ಹುಚ್ಚು ನಾಯಿ ಅಥವಾ ಶಂಕಿತ ರೇಬಿಸ್‍ನಿಂದ ನಾಯಿಗಳು ಮರಣಹೊಂದಿದ ಪ್ರಕರಣಗಳು ಕಂಡುಬಂದಲ್ಲಿ ಮಾಹಿತಿ ನೀಡಬೇಕು. ನಗರಸಭೆ ಸಿಬ್ಬಂದಿ ಜೊತೆ ಸಹಕರಿಸಿ ಬೀದಿನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಬೇಕೆಂದು ಅವರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.  

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು, ನಾಯಿ ಕಡಿತದ ಬಗ್ಗೆ ಮಾಹಿತಿಯುಳ್ಳ ಕರಪತ್ರ, ಬಿತ್ತಿಪತ್ರದ ಮೂಲಕ ನಿರಂತರವಾಗಿ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಬೇಕು. ಹೋಟೆಲ್, ಅಂಗಡಿ, ಚಿಕನ್ ಸೆಂಟರ್‌ಗಳಲ್ಲಿ ಉತ್ಪನ್ನವಾಗುವ ಜೈವಿಕ ತ್ಯಾಜ್ಯ ಹಾಗೂ ಕಸ ವಿಲೇವಾರಿ ಸರಿಯಾಗಿ ನಡೆಯದಿದ್ದರೆ ಬೀದಿನಾಯಿಗಳ ಉಪಟಳ ಹೆಚ್ಚಾಗುತ್ತದೆ. ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಸರಿಯಾದ ರೀತಿ ವಿಲೇವಾರಿ ಮಾಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಹೇಳಿದರು.

ನಾಯಿ ಕಡಿತದ ಬಗ್ಗೆ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡಬೇಕು. ಕೈತೊಳೆಯುವ ವಿಧಾನವನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು. ವೈಯಕ್ತಿಕ ಶುಚಿತ್ವದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಬೇಕು ಎಂದರು.

ಹಾವು ಕಡಿತ, ಕೋತಿ ಕಡಿತ, ಬೆಕ್ಕು ಕಡಿತ, ಇಲಿಯ ಮೂತ್ರದಿಂದ ಆಗುವಂತಹ ತೊಂದರೆಗಳನ್ನು ಸಭೆಯಲ್ಲಿ ಚರ್ಚಿಸಿ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಬೇಕು, ಮನೆಗಳಲ್ಲಿ ಸಾಕು ಪ್ರಾಣಿಗಳಿಗೆ ನಿಯಮಿತ ಹಾಗೂ ನವೀಕೃತ ಲಸಿಕೆ ಮಾಡಿಸುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಅಧಿಕಾರಿಗಳು ತಾಕೀತು ಮಾಡಿದರು.

ರೇಬಿಸ್ ಕಾಯಿಲೆಯು ಹುಚ್ಚು ನಾಯಿ ಕಡಿತದಿಂದ ಉಂಟಾಗಬಹುದಾದ ಕಾಯಿಲೆಯಾಗಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ರೇಬಿಸ್ ನೈಸರ್ಗಿಕ ಅರ್ಥದಲ್ಲಿ ಮನುಷ್ಯರ ಕಾಯಿಲೆಯಲ್ಲ. ರೇಬಿಸ್ ಕಾಯಿಲೆಯನ್ನು ಲಸಿಕೆ ನೀಡುವುದರ ಮೂಲಕ ತಡೆಗಟ್ಟಬಹುದಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ಆರ್‌ಸಿಎಚ್ ಡಾ.ಚಾರಣಿ, ತಾಲ್ಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಇದ್ದರು.

ಜಿಲ್ಲೆಯಲ್ಲಿ ಬೀದಿನಾಯಿಗಳ ಕಾಟ

ಜಿಲ್ಲಾ ಸರ್ವೇಕ್ಷಣಾ ಸಮನ್ವಯ ಸಮಿತಿ ಸಭೆ ಜಿಲ್ಲೆಯಲ್ಲಿ ಈ ವರ್ಷ 7,887 ಮಂದಿಗೆ ನಾಯಿ ಕಚ್ಚಿದ ಪ್ರಕರಣ ಮಾಂಸದ ಅಂಗಡಿಗಳ ತ್ಯಾಜ್ಯ ಸರಿಯಾಗಿ ವಿಲೇ ಮಾಡಲು ಸೂಚನೆ

ಬೀದಿನಾಯಿಗಳ ‘ರೌಡಿಸಂ’!
ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು ರಾತ್ರಿ ಓಡಾಡುವಂತಿಲ್ಲ ಬೈಕ್‌ ಓಡಿಸುವಂತಿಲ್ಲ ಮಕ್ಕಳನ್ನು ಹೊರಗೆ ಬಿಡುವಂತಿಲ್ಲ ಎಂಬ ಪರಿಸ್ಥಿತಿ ನೆಲೆಸಿದೆ. ದಿನೇದಿನೇ ಹೆಚ್ಚುತ್ತಿರುವ ಈ ಶ್ವಾನಗಳ ‘ರೌಡಿಸಂ’ನಿಂದ ಜನರ ಸ್ಥಿತಿ ‘ನಾಯಿ’ಪಾಡಾಗಿದೆ. ‘ಕಳ್ಳರನ್ನಾದರೂ ಎದುರಿಸಬಹುದು ಈ ನಾಯಿ ಕಾಟ ಬೇಡ’ ಎನ್ನುಷ್ಟರ ಮಟ್ಟಿಗೆ ಜನರು ತಲುಪಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ರಸ್ತೆಯಲ್ಲಿ ಓಡಾಡುತ್ತಿರುವ ರೌಡಿಗಳಂತೆ ಈ ಶ್ವಾನಗಳು ವರ್ತಿಸುತ್ತಿವೆ. ಪ್ರತಿ ಗಲ್ಲಿಯಲ್ಲಿಯೂ ಸರಿಸುಮಾರು 50 ರಿಂದ 100 ನಾಯಿಗಳಿವೆ. ನಾಯಿಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರುವವ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2024ರಲ್ಲಿ ಒಂದೇ ವರ್ಷದಲ್ಲಿ ಜಿಲ್ಲೆಯಲ್ಲಿ 8582 ಮಂದಿಗೆ ಬೀದಿನಾಯಿಗಳು ಕಚ್ಚಿವೆ. ಈ ವರ್ಷ ಆಗಸ್ಟ್‌ ಅಂತ್ಯದವರೆಗೆ 7887 ಮಂದಿಗೆ ನಾಯಿ ಕಚ್ಚಿದ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.