ADVERTISEMENT

ವಿದ್ಯಾರ್ಥಿನಿ ಸಾವು: ಪೋಷಕರ ಆಕ್ರಂದನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 14:57 IST
Last Updated 24 ಜನವರಿ 2020, 14:57 IST
ಸಿ.ಪೂಜಿತಾ
ಸಿ.ಪೂಜಿತಾ   

ಕೋಲಾರ: ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನ ಟಿ.ಗೊಲ್ಲಹಳ್ಳಿಯ ವಿಮಲಾ ಹೃದಯಾಲಯ ಶಾಲೆಯಲ್ಲಿ ನೃತ್ಯ ತಾಲೀಮಿನ ವೇಳೆ ಹೃದಯಾಘಾತವಾಗಿ ಮೃತಪಟ್ಟ ವಿದ್ಯಾರ್ಥಿನಿ ಸಿ.ಪೂಜಿತಾ ಅವರ ಅಂತ್ಯಕ್ರಿಯೆಯು ಹುಟ್ಟೂರು ಅಲ್ಲಿಕುಂಟೆಯಲ್ಲಿ ಶುಕ್ರವಾರ ನಡೆಯಿತು.

ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಲೆ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಹಪಾಠಿಗಳು ಮೃತ ವಿದ್ಯಾರ್ಥಿನಿಯ ಅಂತಿಮ ದರ್ಶನ ಪಡೆದರು. ಬಳಿಕ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಂಡರು.

ಪೂಜಿತಾ ಗೌರವಾರ್ಥ ಶಾಲೆಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಅಂತ್ಯಸಂಸ್ಕಾರದ ಬಳಿಕ ಶಾಲೆಗೆ ಮರಳಿದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮೌನಾಚರಣೆ ಮಾಡಿ ಪೂಜಿತಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ADVERTISEMENT

‘ಮೃದು ಸ್ವಭಾವದ ಪೂಜಿತಾ ಮಿತಭಾಷಿಯಾಗಿದ್ದಳು. ಸಹಪಾಠಿಗಳ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲ. ಓದಿನಲ್ಲಿ ಸದಾ ಮುಂದಿದ್ದ ಆಕೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಳು’ ಎಂದು ಶಾಲೆ ಶಿಕಕ್ಷರು ಹೇಳಿದರು.

ಆರೋಗ್ಯವಾಗಿದ್ದಳು: ‘ಪೂಜಿತಾಗೆ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲ. ಆಕೆ ಆರೋಗ್ಯವಾಗಿದ್ದಳು. ಪೋಷಕರೊಂದಿಗೆ ಶನಿವಾರ (ಜ.18) ಧರ್ಮಸ್ಥಳಕ್ಕೆ ಹೋಗಿ ಬಂದಿದ್ದ ಆಕೆ ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕಾಗಿ ಶಾಲೆಯಲ್ಲಿ ಸಹಪಾಠಿಗಳೊಂದಿಗೆ 3 ದಿನದಿಂದ ನೃತ್ಯ ತಾಲೀಮು ನಡೆಸುತ್ತಿದ್ದಳು’ ಎಂದು ಸಂಬಂಧಿಯಾದ ಆರ್.ಎಲ್.ಜಾಲಪ್ಪ ಆಸ್ಪತ್ರೆ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಎಂ.ಎಸ್.ಲಕ್ಷ್ಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೃತ್ಯಾಭ್ಯಾಸದ ವೇಳೆ ಪೂಜಿತಾಗೆ ಏಕಾಏಕಿ ಹೃದಯಾಘಾತವಾಗಿದೆ. ಹೀಗಾಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ’ ಎಂದು ಮಾಹಿತಿ ನೀಡಿದರು.

ಪೂಜಿತಾ ಶಾಲಾ ವಾರ್ಷಿಕೋತ್ಸವಕ್ಕಾಗಿ ಸಹಪಾಠಿಗಳೊಂದಿಗೆ ಶಾಲೆಯಲ್ಲಿ ಗುರುವಾರ (ಜ.24) ನೃತ್ಯ ತಾಲೀಮು ನಡೆಸುತ್ತಿದ್ದಾಗ ಹೃದಯಾಘಾತವಾಗಿ ಮೃತಪಟ್ಟಿದ್ದರು. ಅವರ ಸಹೋದರ ಧನುಷ್‌ ಇದೇ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ.

ಶಾಲಾ ಆಡಳಿತ ಮಂಡಳಿಯು ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನೃತ್ಯಾಭ್ಯಾಸ ಮಾಡಿಸಲು ಕೇರಳದಿಂದ ನೃತ್ಯ ಶಿಕ್ಷಕರನ್ನು ಕರೆಸಿತ್ತು. ಶನಿವಾರ (ಜ.25) ನಡೆಯಬೇಕಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪೂಜಿತಾ ಸಾವಿನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲು ಶಾಲಾ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.