ADVERTISEMENT

ಕೋಲಾರ: ಜಿಲ್ಲೆಯ ಎಪಿಎಂಸಿಗೆ ಭಾನುವಾರ ರಜೆ

ರೈತರು– ಮಂಡಿ ಮಾಲೀಕರು ಸಹಕರಿಸಿ: ಮನವಿ

​ಪ್ರಜಾವಾಣಿ ವಾರ್ತೆ
Published 21 ಮೇ 2020, 13:04 IST
Last Updated 21 ಮೇ 2020, 13:04 IST
ಡಿ.ಎಲ್.ನಾಗರಾಜ್
ಡಿ.ಎಲ್.ನಾಗರಾಜ್   

ಕೋಲಾರ: ‘ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಮೇ 24 ಹಾಗೂ ಮೇ 31ರ ಭಾನುವಾರ ಜಿಲ್ಲೆಯ ಎಲ್ಲಾ ಎಪಿಎಂಸಿಗಳಿಗೆ ರಜೆ ಘೋಷಿಸಲಾಗಿದ್ದು, ರೈತರು, ವರ್ತಕರು ಹಾಗೂ ಮಂಡಿ ಮಾಲೀಕರು ಸಹಕರಿಸಬೇಕು’ ಎಂದು ಕೋಲಾರ ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಮನವಿ ಮಾಡಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿಗಳು ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಕೊರೊನಾ ಸೋಂಕಿನ ತಡೆಗೆ ಕೈಜೋಡಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಎಪಿಎಂಸಿಗಳಿಗೆ 2 ಭಾನುವಾರ ರಜೆ ನೀಡಿ ಆ ದಿನ ಇಡೀ ಮಾರುಕಟ್ಟೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಎಲ್ಲಾ ಎಪಿಎಂಸಿಗಳ ಅಧ್ಯಕ್ಷರ ಸಭೆಯಲ್ಲಿ ಎಪಿಎಂಸಿಗಳಿಗೆ ರಜೆ ನೀಡಲು ನಿರ್ಧರಿಸಲಾಗಿತ್ತು. ರೈತರು ಈ 2 ಭಾನುವಾರದ ಹಿಂದಿನ ಶನಿವಾರ ಮಧ್ಯಾಹ್ನದ ನಂತರ ಮಾರುಕಟ್ಟೆಗೆ ತರಕಾರಿ ತರಬಾರದು’ ಎಂದು ಕೋರಿದರು.

ADVERTISEMENT

‘ಮಂಡಿ ಮಾಲೀಕರು ಮಂಡಿಗಳಲ್ಲಿ ಸ್ಯಾನಿಟೈಸರ್, ಸೋಪು ಮತ್ತು ನೀರು ಇಡಬೇಕು. ಮಂಡಿಯ ಎಲ್ಲಾ ಸಿಬ್ಬಂದಿ, ಮಂಡಿಗೆ ಬರುವ ರೈತರು ಮತ್ತು ಲಾರಿ ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸೂಚಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ₹ 100 ದಂಡ ವಿಧಿಸಲಾಗುತ್ತಿದೆ. 65 ವರ್ಷ ಮೇಲ್ಪಟ್ಟ ಮತ್ತು 10 ವರ್ಷಕ್ಕಿಂತ ಕೆಳಗಿನ ವಯೋಮಿತಿಯವರಿಗೆ ಮಾರುಕಟ್ಟೆಗೆ ಬರದಂತೆ ಮನವಿ ಮಾಡಲಾಗಿದೆ’ ಎಂದರು.

‘ಮೇ 25ರ ನಂತರ ಟೊಮೆಟೊ ಋತುಮಾನ ಆರಂಭವಾಗಲಿದ್ದು, ಪ್ರತಿನಿತ್ಯ ಸುಮಾರು 300 ಸರಕು ಸಾಗಣೆ ವಾಹನಗಳು ಮಾರುಕಟ್ಟೆಗೆ ಬರಲಿವೆ. ಎಪಿಎಂಸಿಯಿಂದ ಪ್ರತಿನಿತ್ಯ ಸದ್ಯ 150 ವಾಹನಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಟೊಮೆಟೊ ಆವಕ ಹೆಚ್ಚುವುದರಿಂದ ಹೆಚ್ಚು ನಿಗಾ ವಹಿಸಬೇಕು. ಪಶ್ಚಿಮ ಬಂಗಾಳ, ಪುಣೆ ಸೇರಿದಂತೆ ಹೊರ ರಾಜ್ಯಗಳಿಗೆ ಹಾಗೂ ಬಾಂಗ್ಲಾ ದೇಶಕ್ಕೆ ಟೊಮೆಟೊ ರಫ್ತಾಗುತ್ತಿದೆ. ಹೊರ ರಾಜ್ಯ ಮತ್ತು ದೇಶಗಳಿಂದ ಬರುವ ಲಾರಿ ಚಾಲಕರು ಹಾಗೂ ಕ್ಲೀನರ್‌ಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ’ ಎಂದು ವಿವರಿಸಿದರು.

ಆರ್‌ಟಿಪಿಸಿಆರ್‌ ಆರಂಭಿಸಿ: ‘ಜಿಲ್ಲೆಯಲ್ಲಿನ ಶಂಕಿತ ಕೊರೊನಾ ಸೋಂಕಿತರ ವೈದ್ಯಕೀಯ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿದೆ. ಆದ ಕಾರಣ ಜಿಲ್ಲೆಯಲ್ಲೇ ರಿವರ್ಸ್‌ ಟ್ರಾನ್ಸ್‌ಕ್ರಿಪ್ಷನ್‌ ಪಾಲಿಮಾರಸ್ ಚೈನ್ ರಿಯಾಕ್ಷನ್ (ಆರ್‌ಟಿಪಿಸಿಆರ್‌)  ಪ್ರಯೋಗಾಲಯ ಆರಂಭಿಸಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಯೋಗಾಲಯವಿದೆ’ ಎಂದು ಹೇಳಿದರು.

ಎಪಿಎಂಸಿ ಉಪಾಧ್ಯಕ್ಷ ರವಿಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.