
ಕೋಲಾರ: ಸುಪ್ರೀಂ ಕೋರ್ಟ್‌ನಲ್ಲಿ ಗೆಲುವು ಲಭಿಸಿದ್ದು, ಎರಡೂವರೆ ವರ್ಷಗಳಿಂದ ಮಾನಸಿಕವಾಗಿ ನೋವುಂಡಿದ್ದ ನನಗೆ ಈ ತೀರ್ಪಿನಿಂದಾಗಿ ಈಗ ನೆಮ್ಮದಿ ಸಿಕ್ಕಿದೆ. ಇದು ಸತ್ಯಕ್ಕೆ ಲಭಿಸಿದ ಜಯ. ಮೋಸ ನಡೆದಿದೆ ಎಂದು ಮರು ಮತ ಎಣಿಕೆಗೆ ತಕರಾರು ಅರ್ಜಿ ಸಲ್ಲಿಸಿದ್ದ ಪರಾಜಿತ ಅಭ್ಯರ್ಥಿ ಬಿಜೆಪಿಯ ಕೆ.ಎಸ್.ಮಂಜುನಾಥಗೌಡ ಅವರಿಗೆ ತೀವ್ರ ಮುಖಭಂಗವಾಗಿದೆ ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ನಗರ ಹೊರವಲಯದ ಕೋಮುಲ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ಗೆಲುವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಶಾಸಕನಾಗಿ ಮುಂದುವರಿಯಲು ಹಸಿರು ನಿಶಾನೆ ತೋರಿದೆ. ಮರು ಮತ ಎಣಿಕೆಯಲ್ಲಿ ಒಟ್ಟು 250 ವೋಟು ಲಭಿಸಿದ್ದು, ಹಿಂದಿಗಿಂತ ಎರಡು ವೋಟು ಹೆಚ್ಚಳವಾಗಿದೆ. ಇನ್ನುಳಿದ ಅವಧಿಯಲ್ಲಿ ಧೈರ್ಯವಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸುವೆ’ ಎಂದರು.
ತಕರಾರು ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ಬೆಂಗಳೂರಿನ ಜಯನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಇನ್ನೈದು ತಿಂಗಳಲ್ಲಿ ಶಾಸಕರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಜುನಾಥಗೌಡ ಅವರು ಸಮರ್ಪಕವಾಗಿ ಮತ ಎಣಿಕೆಯಾಗಿಲ್ಲವೆಂದು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಮತ ಎಣಿಕೆ ಮಾಡದೆ ನನ್ನ ಶಾಸಕತ್ವ ಅಸಿಂಧುಗೊಳಿಸಿದ್ದು ತೀವ್ರ ನೋವುಂಟು ಮಾಡಿತ್ತು. ಅಂತಿಮವಾಗಿ ನ್ಯಾಯದೇವತೆಯಿಂದ ನನಗೆ ನ್ಯಾಯ ಲಭಿಸಿದೆ ಎಂದು ಹೇಳಿದರು.
ಮಂಜುನಾಥಗೌಡ ಕ್ಷೇತ್ರದಲ್ಲಿ ನನ್ನ ವಿರುದ್ಧ ಇಷ್ಟು ದಿನ ಸುಳ್ಳು ಪ್ರಚಾರ ಮಾಡಿಕೊಂಡು ಓಡಾಡುತ್ತಿದ್ದರು. ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೊನೆಗೂ ಸತ್ಯಕ್ಕೆ ಗೆಲುವು ಸಿಕ್ಕಿದ್ದು, ಇನ್ನಾದರೂ ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ತೊಂದರೆ ನೀಡುವುದನ್ನು ಅವರು ಬಿಡಬೇಕು. ಜನರಿಂದ ಎರಡು ಬಾರಿ ಗೆಲುವು ಸಾಧಿಸಿದ್ದ ನಾನು ಮಂಜುನಾಥಗೌಡರಿಂದ ಮೂರನೇ ಬಾರಿ ಗೆದ್ದಂತಾಗಿದೆ ಎಂದು ಹರ್ಷ ಖುಷಿ ವ್ಯಕ್ತಪಡಿಸಿದರು.
ವೋಟ್ ಚೋರಿ ನಡೆದಿಲ್ಲ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಆರೋಪ ಮಾಡಿದಂತಹ ಸಂದರ್ಭದಲ್ಲಿ ಬಿಜೆಪಿಯವರು ಮಾಲೂರು ತಾಲ್ಲೂಕಿನಲ್ಲಿಯೇ ವೋಟ್ ಚೋರಿ ಆಗಿದೆ ಎಂದು ಆರೋಪಿಸಿದ್ದರು. ಆದರೆ, ಕಾಂಗ್ರೆಸ್ ಪಕ್ಷ ವೋಟ್ ಚೋರಿ ಮಾಡಿಲ್ಲ ಎಂಬುದು ಇದೀಗ ದೇಶಕ್ಕೆ ಗೊತ್ತಾಗಿದೆ ಎಂದು ನುಡಿದರು.
ಕಾಂಗ್ರೆಸ್ ವರಿಷ್ಠರು ನನಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವ ಭರವಸೆಯಿದೆ. ಸಚಿವ ಸಂಪುಟ ವಿಸ್ತರಣೆಯಾದರೆ ಕೋಲಾರಕ್ಕೆ ಮಂತ್ರಿ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಬಕಾರಿ ಸಚಿವ ತಿಮ್ಮಾಪುರ ಅವರ ರಾಜೀನಾಮೆಗೆ ವಿರೋದ ಪಕ್ಷದವರು ಪಟ್ಟು ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಆರೋಪ ಮಾಡಿ ಪ್ರತಿಭಟನೆ ನಡೆಸಿದರೆ ರಾಜೀನಾಮೆ ಕೊಡಬೇಕೇ? ಹಿಂದಿನ ಸರ್ಕಾರದಲ್ಲಿ ಗೋಪಾಲಯ್ಯ ಮೇಲೂ ಆರೋಪ ಬಂದಿತ್ತು. ಆಗ ರಾಜೀನಾಮೆ ಕೊಟ್ಟಿದ್ದರೇ’ ಎಂದು ಪ್ರಶ್ನಿಸಿದರು.
ಮಾರ್ಚ್ 27ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲೂರಿಗೆ ಭೇಟಿ ನೀಡಲಿದ್ದಾರೆ. ಏಪ್ರಿಲ್‌ನಲ್ಲಿ ಕೋಮುಲ್‌ಗೆ ಭೇಟಿ ನೀಡಿ ಎಂವಿಕೆ ಡೇರಿ ಉದ್ಘಾಟಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೋಮುಲ್ ನಿರ್ದೇಶಕರಾದ ಕೆ.ಕೆ.ಮಂಜುನಾಥ್, ಹನುಮೇಶ್, ಶಂಶೀರ್ ಇದ್ದರು.
ಇದು ಜೀವನದಲ್ಲಿಯೇ ಎಂದೂ ಮರೆಯಲಾರದ ದಿನ. ಕ್ಷೇತ್ರದ ಜನತೆಗೆ ಲಭಿಸಿದ ಗೌರವ. ನಾನು ಮಾಲೂರು ತಾಲ್ಲೂಕಿನ ಪ್ರತಿಯೊಬ್ಬರಿಗೂ ಆಭಾರಿಯಾಗಿರುತ್ತೇನೆಕೆ.ವೈ.ನಂಜೇಗೌಡ ಮಾಲೂರು ಶಾಸಕ
ಭೂಕಬಳಿಕೆ ಆಗಿದ್ದರೆ ಬಿಡುವ ಪ್ರಶ್ನೆಯೇ ಇಲ್ಲ
ಮಾಲೂರು ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳನ್ನು ಅಕ್ರಮ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಚನ್ನಿಗರಾಯಪುರದಲ್ಲಿ 81 ಎಕರೆ ಅಗಲಕೋಟೆಯಲ್ಲಿ ಶಾಲೆಗೆ ಭೂದಾನದ 51 ಎಕರೆ ಹಾಗೂ ಶಿವಾರಪಟ್ಟಣ ಜೀರೋ ಬಿನ್ ಜೀರೋ ಪ್ರಕರಣದ ಜಮೀನು ವಿಚಾರವಾಗಿ ದಾಖಲೆ ನೀಡುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದೇನೆ.
ಜಮೀನು ಕಬಳಿಕೆ ನಡೆದಿರುವುದು ನಿಜವೇ ಆಗಿದ್ದರೆ ಸರ್ಕಾರದ ಸುಪರ್ದಿಗೆ ಪಡೆಯಲಾಗುವುದು ಎಂದು ನಂಜೇಗೌಡ ಹೇಳಿದರು. ಅಗಲಕೋಟೆ ವಿಚಾರವಾಗಿ ಜನರೇ ಏನೇನೋ ಮಾತನಾಡುತ್ತಿದ್ದಾರೆ? ಚಿಕ್ಕಬಳ್ಳಾಪುರದಿಂದ ಏಕೆ ಡಾ.ಕೆ.ಸುಧಾಕರ್ ಅವರನ್ನು ಮಂಜುನಾಥಗೌಡ ಕರೆದುಕೊಂಡು ಬಂದರು ಎಂಬುದನ್ನು ಪ್ರಶ್ನಿಸುತ್ತಿದ್ದಾರೆ ಎಂದರು.
ನಾನು ಕೃಷಿಕ ಅವರದ್ದು ರಿಯಲ್ ಎಸ್ಟೇಟ್ ದಂಧೆ
ಸಂಸದ ಡಾ.ಕೆ.ಸುಧಾಕರ್ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಹಾಗೂ ಮುಖಂಡ ಹೂಡಿ ವಿಜಯಕುಮಾರ್ ರಿಯಲ್ ಎಸ್ಟೇಟ್ ದಂಧೆ ನಡೆಸುವವರು. ನಾನು ರೈತ ಕೃಷಿಕ. ನನ್ನ ಮಕ್ಕಳು ನ್ಯಾಯಯುತವಾಗಿ ವ್ಯಾಪಾರ ಮಾಡಿಕೊಳ್ಳುತ್ತಿದ್ದಾರೆ ಎಂದು ನಂಜೇಗೌಡ ಹೇಳಿದರು.
ಹೊಸಕೋಟೆ ಹಾಗೂ ಮಾಲೂರಿನಲ್ಲಿ ಯಾರದ್ದು ಎಷ್ಟೆಷ್ಟು ಜಮೀನು ಇದೆ ಎಂಬುದು ಗೊತ್ತಿದೆ. ಡಾ.ಕೆ.ಸುಧಾಕರ್ ಜೊತೆ ಮಾತನಾಡಿ ಐದು ವರ್ಷಗಳಾದವು. ನಾನು ರಾಮೇಗೌಡ ಮಂಜುನಾಥಗೌಡ ಹೂಡಿ ವಿಜಯ್ ಕುಮಾರ್ ವಿರುದ್ಧ ಮಾತನಾಡುವುದಿಲ್ಲ. ನನ್ನ ವಿರುದ್ಧ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದರು.
ಯಾರು ಯಾವ ಪಕ್ಷಕ್ಕಾದರೂ ಸೇರಲಿ
ಜೆಡಿಎಸ್ ಪಕ್ಷಕ್ಕೆ ಸೇರುವ ಹಿನ್ನೆಲೆಯಲ್ಲಿ ಮಾಲೂರಿನ ಹೂಡಿ ವಿಜಯ್ ಕುಮಾರ್ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ನಂಜೇಗೌಡರು ‘ಯಾರು ಯಾವ ಪಕ್ಷಕ್ಕಾದರೂ ಸೇರಲಿ ನಮಗೇನು? ಬಿಜೆಪಿ ಪಕ್ಷೇತರ ಜೆಡಿಎಸ್ ಪಕ್ಷಕ್ಕೆ ನನಗೆ ಸಂಬಂಧವಿಲ್ಲ.
ಎಲ್ಲರೂ ಒಂದಾಗಿ ಹೋದಾಗ ಲೋಕಸಭಾ ಚುನಾವಣೆಯಲ್ಲಿ ಮಾಲೂರಿನಿಂದ ಎಷ್ಟು ವೋಟು ಪಡೆದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. 2028 ರ ವಿಧಾನಸಭಾ ಚುನಾವಣೆಗೆ ಅವರೆಲ್ಲರೂ ಒಂದಾದರೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ’ ಎಂದರು. ಮಾಲೂರು ಅಭಿವೃದ್ಧಿ ವಿಚಾರದಲ್ಲಿರಬಹುದು ಅಥವಾ ಬೇರೆ ಯಾವುದೇ ವಿಚಾರದಲ್ಲಿ ಮಂಜುನಾಥಗೌಡ ಜೊತೆ ಕುಳಿತ ಚರ್ಚಿಸಲು ಸಿದ್ಧ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.