ADVERTISEMENT

ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರರಿಗೆ ಸಿಮ್‌ ನೀಡಿದ್ದ ಕೋಲಾರ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 20:05 IST
Last Updated 9 ಜುಲೈ 2025, 20:05 IST
<div class="paragraphs"><p>ಸತೀಶ್‌ ಗೌಡ</p></div>

ಸತೀಶ್‌ ಗೌಡ

   

ಕೋಲಾರ: ಶಂಕಿತ ಉಗ್ರರಿಗೆ ಮೊಬೈಲ್‌ ಸಿಮ್‌ ಮಾರಿದ್ದ ಆರೋಪ ಎದುರಿಸುತ್ತಿರುವ ಕೋಲಾರದ ಎಸ್‌.ಎನ್‌.ಸತೀಶ್‌ ಗೌಡ ಬೆಂಗಳೂರಿನ ಇಂದಿರಾನಗರದಲ್ಲಿರುವ ಎನ್‌ಐಎ ಶಾಖಾ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. 

ಕೋಲಾರ ತಾಲ್ಲೂಕಿನ ಭಟ್ರಹಳ್ಳಿಯ ಮನೆ ಮೇಲೆ ಮಂಗಳವಾರ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದಾಗ ಸುಳಿವು ಅರಿತು ಆರೋಪಿ ಸತೀಶ್‌ ಗೌಡ ಪರಾರಿಯಾಗಿದ್ದರು. 

ADVERTISEMENT

ಸತೀಶ್‌ ಫೋಟೊ ಸಮೇತ ಬಂದಿದ್ದ ಅಧಿಕಾರಿಗಳು ಗ್ರಾಮದಲ್ಲಿ ತೋರಿಸಿ ವಿಚಾರಿಸಿದರು. ಬೆಂಗಳೂರಿನ ಎನ್‌ಐಎ ಕಚೇರಿಗೆ ಜುಲೈ 9ರಂದು ಬೆಳಗ್ಗೆ 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಮನೆಯಲ್ಲಿ ನೋಟಿಸ್‌ ನೀಡಿ ತೆರಳಿದ್ದರು.   

ತಾಲ್ಲೂಕಿನ ವಾನರಾಶಿ ಗ್ರಾಮದ ಸತೀಶ್ ಹಿಂದೆ ಬೆಂಗಳೂರಿನ ಕೋರಮಂಗಲದ ಮೊಬೈಲ್‌ ಸೇವಾದಾತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷದ ಹಿಂದೆ ಕೆಲಸ ಬಿಟ್ಟು ಪತ್ನಿಯೊಂದಿಗೆ ಭಟ್ರಹಳ್ಳಿಯ ಅತ್ತೆ ಮನೆಯಲ್ಲಿ ನೆಲಸಿದ್ದರು.

ಎನ್‌ಐಎ ದಾಳಿ ನಡೆಸಿ ಶೋಧಿಸಿದ ಕೋಲಾರ ತಾಲ್ಲೂಕಿನ ಭಟ್ರಹಳ್ಳಿ ನಿವಾಸ 

‘ಶಂಕಿತ ಉಗ್ರರಿಗೆ ಸಿಮ್‌ ನೀಡಿದ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳು ಮನೆ ಶೋಧಿಸಿದರು. ಮೂರು ವರ್ಷಗಳಿಂದ ಮನೆಯಲ್ಲೇ ಇದ್ದಾರೆ. ಸಿಮ್‌ ಆ್ಯಕ್ಟಿವೇಟ್‌ ಅವರ ಆಗಿನ ಕೆಲಸವಾಗಿತ್ತು’ ಎಂದು ಸತೀಶ್‌ ಪತ್ನಿ ಸುದ್ದಿಗಾರರಿಗೆ ತಿಳಿಸಿದರು.

‘ಅಳಿಯನ ತಂದೆ, ತಾಯಿ ಮೃತಪಟ್ಟಿದ್ದು, ಮೂರು ವರ್ಷಗಳಿಂದ ನಮ್ಮ ಮನೆಯಲ್ಲಿದ್ದಾರೆ. ಈಚೆಗೆ ಡೇರಿ ಕೆಲಸ ಬಿಟ್ಟಿದ್ದರು’ ಎಂದು ಅವರ ಅತ್ತೆ ಹೇಳಿದರು.

ಇದು ಮೂರನೇ ನೋಟಿಸ್‌: ಎನ್‌ಎಐ ಅಧಿಕಾರಿಗಳು 2023ರಲ್ಲಿ ತನಿಖೆಗೆ ಕರೆದಿದ್ದರು. ಆಗ ಸತೀಶ್‌ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಸಿಕ್ಕಿರಲಿಲ್ಲ. ಈವರೆಗೆ ಎನ್‌ಐಎ ಮೂರು ನೋಟಿಸ್‌ ನೀಡಿದೆ. ಎನ್‌ಐಎ ಅಧಿಕಾರಿಗಳು ಮಂಗಳವಾರ ಭಟ್ರಹಳ್ಳಿ ಸತೀಶ್‌ ಮನೆಯಲ್ಲಿ ನಾಲ್ಕು ತಾಸು ಶೋಧಿಸಿದ್ದಾರೆ.

ಬಂಧಿತ ಮನೋವೈದ್ಯನಿಗೆ ಚಿಂತಾಮಣಿ ನಂಟು

ಚಿಂತಾಮಣಿ (ಚಿಕ್ಕಬಳ್ಳಾಪುರ): ಎನ್‌ಐಎ ಬೆಂಗಳೂರಿನಲ್ಲಿ ಬಂಧಿಸಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ನಾಗರಾಜ್ ಚಿಂತಾಮಣಿಯವರು.  ಅವರ ತಂದೆ ನಗರಸಭೆ ನಿವೃತ್ತ ನೌಕರ ತಾಯಿ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ‘ಡಿ’ ಗ್ರೂಪ್ ನೌಕರರಾಗಿದ್ದರು. ಪತ್ನಿ ಕೃಷಿ ಇಲಾಖೆಯ ನಿವಾಸಿ.   ಇಲ್ಲಿಯ ಕೆಜಿಎನ್ ವಾಣಿ ಶಾಲೆ ಮತ್ತು ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಿತ ನಾಗರಾಜ್ ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದರು. ಬಾಗೇಪಲ್ಲಿ ವೃತ್ತದ ಬಳಿ ಕ್ಲಿನಿಕ್ ನಡೆಸಿ ನಂತರ ಸರ್ಕಾರಿ ಉದ್ಯೋಗಕ್ಕೆ ಸೇರಿದರು. ಕೆ.ಆರ್.ಬಡಾವಣೆಯ ನಾರೆಪ್ಪಕುಂಟೆಯಲ್ಲಿ ಕುಟುಂಬ ವಾಸಿಸುತ್ತಿತ್ತು. ನಂತರ ಫಿಲ್ಟರ್ ಬೆಡ್ ವೃತ್ತ ಅಂಜನಿ ಬಡಾವಣೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬಳಿಕ ಕೋಲಾರದಲ್ಲಿ ಮನೆ ಮಾಡಿದ್ದರು. ಸದ್ಯ ಅವರ ಕುಟುಂಬದ ಯಾರೂ ಈಗ ಚಿಂತಾಮಣಿಯಲ್ಲಿ ವಾಸವಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.