
ಕೋಲಾರದ ರಂಗಮಂದಿರದ ಆವರಣದಲ್ಲಿ ಟಿ.ಚನ್ನಯ್ಯ ಪುತ್ಥಳಿ ನಿರ್ಮಿಸಲಾಗಿದ್ದು, ಅನಾವರಣಕ್ಕೆ ಸಿದ್ಧಗೊಂಡಿದೆ
ಕೋಲಾರ: ನಗರದ ರಂಗಮಂದಿರ ಆವರಣದಲ್ಲಿ ಕೋಲಾರ ನಗರ ನಿಮಾತೃ ಟಿ.ಚನ್ನಯ್ಯ ಅವರ ಪುತ್ಥಳಿ ಸಿದ್ಧಗೊಂಡಿದ್ದು, ಸದ್ಯದಲ್ಲೇ ಅನಾವರಣಗೊಳ್ಳಲಿದೆ.
ಟಿ.ಚನ್ನಯ್ಯ ಅವರ ಪುತ್ಥಳಿ ಸ್ಥಾಪಿಸಬೇಕೆಂಬುದು ಬಹಳ ವರ್ಷಗಳ ಕೂಗಾಗಿತ್ತು. ಅವರು ಕೋಲಾರ ನಗರಕ್ಕೆ ಬೇಕಾದ ಸೌಲಭ್ಯಗಳ ಕುರಿತು ಕನಸು ಕಂಡಿದ್ದು ಮಾತ್ರವಲ್ಲದೇ; ಸ್ಯಾನಿಟೋರಿಯಂ ಆಸ್ಪತ್ರೆ, ನಚಿಕೇತ ನಿಲಯದಂಥ ಹಾಸ್ಟೆಲ್, ಹಳೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಕಾರಣರಾದವರು. ಕೋಲಾರಕ್ಕೆ ಮೊದಲು ವಿದ್ಯುತ್ ತಂದವರು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಒಡನಾಟ ಹೊಂದಿದ್ದ ಚನ್ನಯ್ಯ, ಭಾರತ ಸಂವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.
ಮುಳಬಾಗಿಲು ಕ್ಷೇತ್ರದಿಂದ ಅವಿರೋಧವಾಗಿ ಗೆದ್ದು ಶಾಸಕರಾಗಿದ್ದ ಅವರು ಕೆಂಗಲ್ ಹನುಮಂತಯ್ಯ ಸರ್ಕಾರದಲ್ಲಿ ಎಂಟು ಖಾತೆಗಳ ಸಚಿವರಾಗಿದ್ದರು. ಕೆಲ ಕಾಲ ತಮಿಳುನಾಡು ರಾಜ್ಯಪಾಲರಾಗಿದ್ದರು. ಅದಕ್ಕೂ ಮೊದಲು ರಾಜ್ಯಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾಗಿದ್ದರು.
ಈಚೆಗೆ ನಡೆದ ಟಿ.ಚನ್ನಯ್ಯ ಅವರ 41ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ಪುತ್ರ ಬಾಲಾಜಿ ಚನ್ನಯ್ಯ ಪುತ್ಥಳಿ ಸ್ಥಾಪಿಸಬೇಕೆಂದು ಆಗ್ರಹಿಸಿದ್ದರು.
ಭಾನುವಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಪುತ್ಥಳಿ ವೀಕ್ಷಿಸಿದರು.
ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಅವರಿಗೆ ಸೂಚಿಸಿದರು.
ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.