ADVERTISEMENT

ತಹಶೀಲ್ದಾರ್‌ಗೆ ₹ 10 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 14:17 IST
Last Updated 12 ಜುಲೈ 2019, 14:17 IST

ಕೋಲಾರ: ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ವಿ.ಲೋಕೇಶ್‌ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸತತವಾಗಿ ಗೈರಾಗಿದ್ದ ಕೋಲಾರ ತಹಶೀಲ್ದಾರ್ ಗಾಯಿತ್ರಿ ಅವರಿಗೆ ಪ್ರಥಮ ಮೇಲ್ಮನವಿ ಪ್ರಾಧಿಕಾರವು ಇತ್ತೀಚೆಗೆ ₹ 10 ಸಾವಿರ ದಂಡ ವಿಧಿಸಿದೆ.

ತಾಲ್ಲೂಕಿನ ಕಾಡಹಳ್ಳಿ ಸರ್ವೆ ನಂಬರ್ 5ರ ಗುಂಡು ತೋಪಿನಲ್ಲಿ 15 ಗುಂಟೆಯನ್ನು ಸರೋಜಮ್ಮ ಎಂಬುವರಿಗೆ ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿದ ಕಡತದ ಪ್ರತಿ ಕೊಡುವಂತೆ ಕೋರಿ ಅದೇ ಗ್ರಾಮದ ಲೋಕೇಶ್‌ 2017ರ ಫೆಬ್ರುವರಿ ತಿಂಗಳಲ್ಲಿ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಲೋಕೇಶ್‌ ಅವರಿಗೆ ತಹಶೀಲ್ದಾರ್‌ ನಿಗದಿತ ಅವಧಿಯೊಳಗೆ ಮಾಹಿತಿ ಕೊಡದೆ ವಿಳಂಬ ಮಾಡಿದ್ದರು. ಜತೆಗೆ ದಿ ಕರ್ನಾಟಕ ಸ್ಟೇಟ್ ರೂಲ್ಸ್ 2013ರ ಪ್ರಕಾರ ಅರ್ಜಿ ವಿಲೇವಾರಿ ಮಾಡಲು ಕೈಗೊಂಡಿರುವ ಕ್ರಮದ ಕುರಿತು ವಿವರಣೆ ಸಲ್ಲಿಸುವಂತೆ ಮಾಹಿತಿ ಹಕ್ಕು ಆಯೋಗವು ಆದೇಶ ನೀಡಿತ್ತು.

ADVERTISEMENT

ಅರ್ಜಿದಾರರು ಕೋರಿರುವ ಮಾಹಿತಿಗೆ ಸಂಬಂಧಪಟ್ಟ ಕಡತ ದೊರಕಿದಲ್ಲಿ ಆರ್‌ಟಿಇ ನಿಯಮದ 2005ರ ಕಲಂ 7(6)ರ ಅನ್ವಯ ಉಚಿತವಾಗಿ ಅಂಚೆ ಮೂಲಕ ಅದರ ಪ್ರತಿ ಕಳುಹಿಸಿ ಕೊಡಬೇಕು. ಕಡತ ದೊರೆಯದಿದ್ದರೆ ತಹಶೀಲ್ದಾರ್ ವಿರುದ್ಧ ದಿ ಕರ್ನಾಟಕ ಸ್ಟೇಟ್ ಪಬ್ಲಿಕ್ ರೆಕಾರ್ಡ್ಸ್‌ ಕಾಯ್ದೆ 2010 ಮತ್ತು ದಿ ಕರ್ನಾಟಕ ಸ್ಟೇಟ್ ರೆಕಾರ್ಡ್ಸ್ ಕಾಯ್ದೆ 2013ರ ಪ್ರಕಾರ ಕ್ರಮ ಜರುಗಿಸುವಂತೆ ಮಾಹಿತಿ ಹಕ್ಕು ಆಯೋಗವು ನಿರ್ದೇಶನ ನೀಡಿತ್ತು.

ಅಲ್ಲದೇ, ಅರ್ಜಿಗೆ ಸಂಬಂಧಿಸಿದಂತೆ ಖುದ್ದು ವಿಚಾರಣೆಗೆ ಹಾಜರಾಗಿ ವಿವರಣೆ ಸಲ್ಲಿಸಬೇಕು ಎಂದು ಸೂಚಿಸಿತ್ತು. ಆದರೆ, ತಹಶಿಲ್ದಾರ್ ಗಾಯಿತ್ರಿ ಅವರು ತಮ್ಮ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಶೈಲಜಾ ಅವರನ್ನು ವಿಚಾರಣೆಗೆ ಕಳುಹಿಸಿದ್ದರು. ಶೈಲಜಾ ಅವರು ವಿಚಾರಣೆ ವೇಳೆ ಸಮರ್ಪಕ ಮಾಹಿತಿ ನೀಡಿರಲಿಲ್ಲ.

ವಿಚಾರಣೆಗೆ ಗೈರಾದ ಕಾರಣಕ್ಕೆ ಹಾಗೂ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಆಯೋಗವು ಕಾರಣ ಕೇಳಿ ತಹಶೀಲ್ದಾರ್‌ಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ತಹಶೀಲ್ದಾರ್ ನೀಡಿದ ವಿವರಣೆಯನ್ನು ಆಯೋಗ ಒಪ್ಪದೆ, ಮಾಹಿತಿ ಹಕ್ಕು ಕಾಯ್ದೆ 2005ರ ಕಲಂ 20(1)ರ ಅನ್ವಯ ಗಾಯಿತ್ರಿ ಅವರಿಗೆ ದಂಡ ವಿಧಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.