ADVERTISEMENT

ಶಿಕ್ಷಕರು ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸಿ

ಕ್ಲಸ್ಟರ್ ಮಟ್ಟದ ವಿಜ್ಞಾನ ಹಬ್ಬಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 14:39 IST
Last Updated 13 ಡಿಸೆಂಬರ್ 2019, 14:39 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೀರಗಾಸೆ ನೃತ್ಯ ಪ್ರದರ್ಶಿಸಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ಹಬ್ಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೀರಗಾಸೆ ನೃತ್ಯ ಪ್ರದರ್ಶಿಸಿದರು.   

ಕೋಲಾರ: ‘ಶಿಕ್ಷಕರು ಮನಸ್ಥಿತಿಯನ್ನು ಬದಲಾಯಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಶ್ರಮಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಚ್.ನಾಗರಾಜಗೌಡ ತಿಳಿಸಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ‘ಸ್ವರ್ಧಾತ್ಮಕತೆಗೆ ತಕ್ಕ ಬೋಧನಾ ಕ್ರಮ ಜಾರಿಯಾಗಬೇಕು’ ಎಂದರು.

‘ವಿಜ್ಞಾನ ಹಬ್ಬವು ಮಕ್ಕಳ ಜ್ಞಾನಾಭಿವೃದ್ದಿಗೆ ಸಹಕಾರಿಯಾಗುತ್ತದೆ. ದೈನಂದಿನ ಬದುಕಿನ ಪ್ರತಿ ಹಂತದಲ್ಲೂ ವಿಜ್ಞಾನ ಅಡಗಿದೆ. ಮಕ್ಕಳ ಆಲೋಚನೆ ಬದಲಿಸಲು ನಿಮ್ಮ ಬೋಧನೆ ತಾತ್ವಿಕತೆಗೆ ಸೀಮಿತವಾಗದೇ ಪ್ರಾಯೋಗಿಕ ಅಧ್ಯಯನಕ್ಕೆ ಒತ್ತು ನೀಡುವಂತಿರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಪ್ರತಿ ಮಗುವಿನಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಅವರಲ್ಲಿ ಪ್ರಶ್ನೆ ಕೇಳುವ ಧೈರ್ಯ ತುಂಬಬೇಕು. ಕಲಿಕೆಯಲ್ಲಿ ಗೊಂದಲಗಳಿದ್ದರೂ, ಪ್ರಶ್ನೆ ಕೇಳಲು ಭಯದ ವಾತಾವರಣವಿದ್ದರೆ ಮಕ್ಕಳ ಕಲಿಕೆ ಬಲಗೊಳ್ಳುವುದಿಲ್ಲ’ ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ‘ವಿನ್ಞಾನ ನಮ್ಮನ್ನು ಸುಜ್ಞಾನದತ್ತ ಸಾಗುವಂತೆ ಮಾಡುತ್ತದೆ. ವಿಜ್ಞಾನವು ಮಕ್ಕಳಿಗೆ ಯಶಸ್ಸಿನ ದಾರಿ ತೋರಿಸುತ್ತದೆ’ ಎಂದರು.

‘ಮಕ್ಕಳಲ್ಲಿ ವೈಜ್ಞಾನಿಕತೆ ಹೆಚ್ಚಿಸುವುದೆ ವಿಜ್ಞಾನ ಹಬ್ಬದ ಉದ್ದೇಶ. ಸೃಜನಾತ್ಮಕತೆ ಹೊರ ಸೆಳೆಯುವ ಕೆಲಸ ಶಿಕ್ಷಕರು ಮಾಡಬೇಕು. ಪ್ರಶ್ನೆ ಕೇಳುವ ಮನೋಭಾವ ಬೆಳಿಸಿಕೊಳ್ಳಬೇಕು. ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಶಕ್ತಿ, ಪ್ರೇರಣೆ ಬೆಳೆಸಬೇಕು’ ಎಂದು ಹೇಳಿದರು.

ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ಮಾತನಾಡಿ, ‘ವಿಜ್ಞಾನ, ಗಣಿತ ಕಷ್ಟವೆಂಬ ಭಾವನೆ ಹೋಗಲಾಡಿಸಲು ಕಲಿಕಾ ವಿಧಾನದಲ್ಲಿ ಬದಲಾವಣೆ ತರಬೇಕಿದೆ’ ಎಂದು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್‌ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಸಚ್ಚಿದಾನಂದಮೂರ್ತಿ, ಭವಾನಿ, ಸುಗುಣಾ, ಲೀಲಾ, ಫರೀದಾ, ಶ್ರೀನಿವಾಸಲು, ಸುನೀತಾ, ಚಂದ್ರಶೇಖರ್, ವೆಂಕಟಸ್ವಾಮಿರೆಡ್ಡಿ, ಶ್ರೀನಿವಾಸ್, ಟಿ.ವೆಂಕಟರಮಣಪ್ಪ, ಸುಮ, ಭಾರತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.