ADVERTISEMENT

ಅಗತ್ಯ ವಸ್ತು ಪೂರೈಕೆಗೆ ತಂಡ ರಚನೆ

ಕೊರೊನಾ ಸೋಂಕು ತಡೆಗೆ ನಗರಸಭೆ ಕ್ರಮ: ಮನೆ ಬಾಗಿಲಿಗೆ ಸೇವೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:33 IST
Last Updated 28 ಮಾರ್ಚ್ 2020, 14:33 IST

ಕೋಲಾರ: ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರ ಬರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಿನಬಳಕೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಹಾಗೂ ಏ.14ರವರೆಗೆ ಸಾರ್ವಜನಿಕರು ಮನೆಯಿಂದ ಹೊರ ಬರದಂತೆ ತಡೆಯುವ ಉದ್ದೇಶಕ್ಕೆ ನಗರಸಭೆ ಸಿಬ್ಬಂದಿ, ಮೇಸ್ತ್ರಿಗಳು, ವಾಲ್‌ಮನ್‌ಗಳು, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ತಂಡಗಳು ಜನರಿಗೆ ಅತ್ಯಗತ್ಯವಾಗಿ ಬೇಕಾದ ಆಹಾರ ಪದಾರ್ಥ, ತರಕಾರಿ, ಹಾಲು ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳನ್ನು ಪೂರೈಸಲಿವೆ. ಅಗತ್ಯ ವಸ್ತುಗಳ ಸೇವೆಯಲ್ಲಿ ವ್ಯತ್ಯಯವಾಗದಂತೆ ಈ ತಂಡಗಳು ಎಚ್ಚರ ವಹಿಸಲಿವೆ. ನಗರವಾಸಿಗಳು ಈ ತಂಡಗಳ ಮುಖ್ಯಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸೇವೆ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ನಗರಸಭೆಯ 1ನೇ ವಾರ್ಡ್‌ನಿಂದ 5ನೇ ವಾರ್ಡ್‌ವರೆಗಿನ ತಂಡದ ಮುಖ್ಯಸ್ಥರನ್ನಾಗಿ ಕೋಲಾರ ನಗರಸಭೆ ಕಚೇರಿ ವ್ಯವಸ್ಥಾಪಕ ಎಸ್.ಮಂಜುನಾಥ್- ಅವರನ್ನು ನಿಯೋಜಿಸಲಾಗಿದ್ದು, ಈ ವಾರ್ಡ್‌ಗಳ ವ್ಯಾಪ್ತಿಯ ನಿವಾಸಿಗಳು ಅಗತ್ಯ ಸೇವೆಗೆ ಅವರ ಮೊಬೈಲ್‌ ಸಂಖ್ಯೆ 9008114127 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಅದೇ ರೀತಿ 6ನೇ ವಾರ್ಡ್‌ನಿಂದ 10ನೇ ವಾರ್ಡ್‌ವರೆಗಿನ ತಂಡಕ್ಕೆ ನಗರಸಭೆ ಸಮುದಾಯ ಸಂಘಟನಾಧಿಕಾರಿ ಜೆ.ಶಿವಪ್ರಕಾಶ್ ಮುಖ್ಯಸ್ಥರಾಗಿದ್ದು, ಜನರು 8660909357 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ನಗರಸಭೆ ಪರಿಸರ ಎಂಜಿನಿಯತ್‌ ಎಂ.ಎಸ್.ಪುನೀತ್‌ 11ನೇ ವಾರ್ಡ್‌ನಿಂದ 15ನೇ ವಾರ್ಡ್‌ವರೆಗಿನ ತಂಡದ  ಮುಖ್ಯಸ್ಥರಾಗಿದ್ದು, ಜನರು 9008269081 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು ಎಂದು ವಿವರಿಸಿದ್ದಾರೆ.

16ನೇ ವಾರ್ಡ್‌ನಿಂದ 19ನೇ ವಾರ್ಡ್‌ವರೆಗಿನ ತಂಡಕ್ಕೆ ನಗರಸಭೆಯ ಕಂದಾಯ ಅಧಿಕಾರಿ ಎಂ.ಚಂದ್ರು ಮುಖ್ಯಸ್ಥರಾಗಿದ್ದು, ಸ್ಥಳೀಯರು ಅಗತ್ಯ ವಸ್ತುಗಳಿಗೆ ಮೊಬೈಲ್‌ ಸಂಖ್ಯೆ 9731907098ಕ್ಕೆ ಕರೆ ಮಾಡಬಹುದು. 20ನೇ ವಾರ್ಡ್‌ನಿಂದ 23ನೇ ವಾರ್ಡ್‌ವರೆಗಿನ ತಂಡಕ್ಕೆ ನಗರಸಭೆ ಕಂದಾಯ ನಿರೀಕ್ಷಕ ಸಿ.ತ್ಯಾಗರಾಜ್ ಮುಖ್ಯಸ್ಥರಾಗಿದ್ದು, ಜನರು 9535474035 ಮೊಬೈಲ್‌ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

24ನೇ ವಾರ್ಡ್‌ನಿಂದ 27ನೇ ವಾರ್ಡ್‌ವರೆಗಿನ ತಂಡದ ಮುಖ್ಯಸ್ಥರಾಗಿ ನಗರಸಭೆ ಕಂದಾಯ ನಿರೀಕ್ಷಕಿ ಆರ್.ವಿದ್ಯಾ ನಿಯೋಜನೆಗೊಂಡಿದ್ದು, ಈ ಭಾಗದ ಜನರು 7892067173 ಮೊಬೈಲ್‌ ಸಂಖ್ಯೆಗೆ ಕರೆ ಮಾಡಬೇಕು. 28ನೇ ವಾರ್ಡ್‌ನಿಂದ 31ನೇ ವಾರ್ಡ್‌ವರೆಗಿನ ತಂಡದ ಮುಖ್ಯಸ್ಥರನ್ನಾಗಿ ನಗರಸಭೆ ಕಂದಾಯ ನಿರೀಕ್ಷಕ ಎಂ.ನಾಗರಾಜ್ ಅವರನ್ನು ನಿಯೋಜಿಸಲಾಗಿದ್ದು, ಜನರು 8710868036 ಮೊಬೈಲ್‌ ಸಂಖ್ಯೆಗೆ ಕರೆ ಮಾಡಬಹುದು. 32ನೇ ವಾರ್ಡ್‌ನಿಂದ 35ನೇ ವಾರ್ಡ್‌ವರೆಗಿನ ತಂಡದ ಮುಖ್ಯಸ್ಥರಾಗಿ ನಗರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ ಮರಿಯಾ ಅವರನ್ನು ನೇಮಿಸಲಾಗಿದ್ದು, 7353333623 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.