ADVERTISEMENT

ಕೋಲಾರ: ಚೇತರಿಕೆ ಕಾಣದ ‘ಜಿಮ್’ ಉದ್ಯಮ

ದೂರವಾಗದ ಕೊರೊನಾ ಸೋಂಕಿನ ಭಯ: ‘ಕಸರತ್ತಿ’ಗೆ ಜನರ ನಿರಾಸಕ್ತಿ

ಜೆ.ಆರ್.ಗಿರೀಶ್
Published 6 ನವೆಂಬರ್ 2020, 20:00 IST
Last Updated 6 ನವೆಂಬರ್ 2020, 20:00 IST
ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಕೋಲಾರದ ಜಿಮ್‌ ಕೇಂದ್ರವೊಂದು ಬಳಕೆದಾರರಿಲ್ಲದೆ ಭಣಗೊಡುತ್ತಿರುವುದು.
ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಕೋಲಾರದ ಜಿಮ್‌ ಕೇಂದ್ರವೊಂದು ಬಳಕೆದಾರರಿಲ್ಲದೆ ಭಣಗೊಡುತ್ತಿರುವುದು.   

ಕೋಲಾರ: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಜಿಲ್ಲೆಯಲ್ಲಿ ಬಂದ್‌ ಆಗಿದ್ದ ಜಿಮ್‌ ಕೇಂದ್ರಗಳು ಪುನರಾರಂಭವಾಗಿ 3 ತಿಂಗಳು ಕಳೆದರೂ ಜಿಮ್‌ ಉದ್ಯಮ ಮೊದಲಿನಂತೆ ಚೇತರಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ ಸುಮಾರು 160 ಜಿಮ್‌ ಸೆಂಟರ್‌ಗಳಿವೆ. ಲಾಕ್‌ಡೌನ್ ಅವಧಿಯಲ್ಲಿ ಜಿಮ್‌ಗಳನ್ನು ಮುಚ್ಚಿದ್ದರಿಂದ ಅವುಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಬಾಡಿಗೆ ಸಹ ಕಟ್ಟಲಾಗದೆ ತೊಂದರೆ ಅನುಭವಿಸಿದ್ದರು. ನಾಲ್ಕೈದು ತಿಂಗಳು ನಯಾ ಪೈಸೆ ಆದಾಯ ಇಲ್ಲದೆ ಜಿಮ್‌ ಉದ್ಯಮ ನೆಲಕಚ್ಚಿತ್ತು.

ನಂತರ ಸರ್ಕಾರ ಸುರಕ್ಷತಾ ಮಾರ್ಗಸೂಚಿ ನಿಗದಿಪಡಿಸಿ ಆ.5ರಿಂದ ಜಿಮ್‌ಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿತ್ತು. ಬಳಿಕ ಜಿಲ್ಲೆಯಾದ್ಯಂತ ಒಂದು ವಾರ ಶೇ 50ರಷ್ಟು ಜಿಮ್‌ಗಳು ಮಾತ್ರ ತೆರೆದವು. ನಿಧಾನವಾಗಿ ಎಲ್ಲಾ ಜಿಮ್‌ಗಳು ಆರಂಭವಾಗಿವೆ.

ADVERTISEMENT

ಆದರೆ, ಜನರು ಮೊದಲಿನಂತೆ ಜಿಮ್‌ಗಳಿಗೆ ಬರಲು ಆಸಕ್ತಿ ತೋರುತ್ತಿಲ್ಲ. ಕೊರೊನಾ ಸೋಂಕಿನ ಆತಂಕ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಜನರು ‘ಕಸರತ್ತು’ ನಡೆಸಲು ಜಿಮ್‌ಗಳಿಗೆ ಬರುವ ಮನಸ್ಸು ಮಾಡುತ್ತಿಲ್ಲ.ಬಹುತೇಕ ಜಿಮ್‌ಗಳಲ್ಲಿ ಮೊದಲಿಗಿಂತ ಕಾಲು ಭಾಗದಷ್ಟು ಜನರು ಮಾತ್ರ ಬರುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಿಮ್‌ ತೆರೆದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾರ್ಗಸೂಚಿ ಪಾಲನೆ: ಕೊರೊನಾ ಭೀತಿಯಿಂದ ಜನರು ಜಿಮ್‌ನಿಂದ ದೂರ ಉಳಿಯಬಾರದೆಂಬ ಕಾರಣಕ್ಕೆ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಜಿಮ್‌ಗೆ ಬರುವವರಿಗೆ ಸ್ಟ್ರೀನಿಂಗ್‌ ಮಾಡಿ, ಆಕ್ಸಿಮೀಟರ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಪರೀಕ್ಷೆಗಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡುಬಾರದಿದ್ದರೆ ಮಾತ್ರ ಜಿಮ್‌ನೊಳಗೆ ಪ್ರವೇಶ.

ಜ್ವರ, ಕೆಮ್ಮು, ಶೀತದ ಲಕ್ಷಣ ಹೊಂದಿರುವವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಬಳಕೆದಾರರ ನಡುವೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಬಳಕೆದಾರರು ಕೈಗಳಿಗೆ ಸ್ಯಾನಿಟೈಸರ್‌ ಹಚ್ಚಿಕೊಂಡು, ಮಾಸ್ಕ್‌ ಧರಿಸಿ ದೈಹಿಕ ಕಸರತ್ತು ನಡೆಸಬೇಕಿದೆ.

ಆರೋಗ್ಯ ಇಲಾಖೆ ಸೂಚನೆಯಂತೆ ಕೆಲ ಜಿಮ್‌ಗಳಲ್ಲಿ ಬಳಕೆದಾರರ ಸಂಪೂರ್ಣ ವಿಳಾಸ, ಮೊಬೈಲ್‌ ಸಂಖ್ಯೆ, ವಯಸ್ಸು ಸೇರಿದಂತೆ ವೈಯಕ್ತಿಕ ವಿವರ ದಾಖಲಿಸಿಕೊಳ್ಳಲಾಗುತ್ತಿದೆ. ಜಿಮ್‌ ಉಪಕರಣಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. ಪ್ರತಿ ಬ್ಯಾಚ್ ವ್ಯಾಯಾಮ ಮಗಿಸಿದ ನಂತರ ಜಿಮ್ ಸ್ವಚ್ಚಗೊಳಿಸಿ, ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಆದರೂ ಮಾಲೀಕರ ಸಂಕಷ್ಟ ದೂರವಾಗಿಲ್ಲ.

ಸಂಖ್ಯೆ ಕಡಿತ: ಲಾಕ್‌ಡೌನ್ ಪೂರ್ವದಲ್ಲಿ ಒಂದು ಬ್ಯಾಚ್‌ಗೆ 15ರಿಂದ 20 ಮಂದಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಜಿಮ್‌ಗೆ ಬೆಳಗಿನ ಬ್ಯಾಚ್‌ಗಳಲ್ಲಿ ಕನಿಷ್ಠ 60 ಮಂದಿ ಬರುತ್ತಿದ್ದರು. ಸಂಜೆಯ ಬ್ಯಾಚ್‌ಗಳಲ್ಲೂ ಅಷ್ಟೇ ಸಂಖ್ಯೆಯ ಜನರಿರುತ್ತಿದ್ದರು. ಆಗ ಮಾಲೀಕರಿಗೆ ಜಿಮ್‌ಗಳ ನಿರ್ವಹಣೆಯು ಕಷ್ಟವಾಗಿರಲಿಲ್ಲ.

ಈಗ ಪ್ರತಿ ಬ್ಯಾಚ್‌ಗೆ 6ರಿಂದ 8 ಜನರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕಾಗಿ ಜಿಮ್‌ ಬಳಕೆದಾರರ ಸಂಖ್ಯೆ ಕಡಿತಗೊಳಿಸಲಾಗಿದೆ. ಇದರಿಂದ ಆದಾಯ ಗಣನೀಯವಾಗಿ ಕಡಿಮೆಯಾಗಿದೆ.

ಕಟ್ಟಡ ಬಾಡಿಗೆ, ಜಿಮ್‌ ತರಬೇತುದಾರರ ವೇತನ, ವಿದ್ಯುತ್ ಬಿಲ್, ಸ್ವಚ್ಛತೆ ಸೇರಿದಂತೆ ಜಿಮ್‌ಗಳ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ಅಲ್ಪ ಆದಾಯದಲ್ಲೇ ಎಲ್ಲಾ ಖರ್ಚು ನಿಭಾಯಿಸುತ್ತಿರುವ ಮಾಲೀಕರು ಭವಿಷ್ಯದಲ್ಲಿ ಜಿಮ್‌ ಉದ್ಯಮ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.