ADVERTISEMENT

ವರ್ತೂರು ಪ್ರಕಾಶ್‌ ಅಪಹರಣ: ಸಾಲದ ಶೂಲದಿಂದ ಪಾರಾಗಲು ಅಪಹರಣದ ನಾಟಕ?

ಹಸು ಖರೀದಿ ಸಾಲ ಬಾಕಿ: ವರ್ತೂರು ಪ್ರಕಾಶ್‌ ಮೇಲೆ ಬಾಡಿಗೆ ಗೂಂಡಾಗಳ ಹಲ್ಲೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 14:46 IST
Last Updated 3 ಡಿಸೆಂಬರ್ 2020, 14:46 IST
ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಕೋಲಾರ ತಾಲ್ಲೂಕಿನ ಜಂಗಾಲಹಳ್ಳಿ ರಸ್ತೆಯಲ್ಲಿ ಗುರುವಾರ ಪರಿಶೀಲನೆ ನಡೆಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಕೋಲಾರ ತಾಲ್ಲೂಕಿನ ಜಂಗಾಲಹಳ್ಳಿ ರಸ್ತೆಯಲ್ಲಿ ಗುರುವಾರ ಪರಿಶೀಲನೆ ನಡೆಸಿದರು.   

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಮಾಜಿ ಸಚಿವರು ಸಾಲದ ಶೂಲದಿಂದ ಪಾರಾಗಲು ಅಪಹರಣದ ನಾಟಕವಾಡಿರುವ ಶಂಕೆ ವ್ಯಕ್ತವಾಗಿದೆ.

ವರ್ತೂರು ಪ್ರಕಾಶ್‌ ಸಚಿವರಾಗಿದ್ದಾಗ ಮಹಾರಾಷ್ಟ್ರದಿಂದ ₹ 5 ಕೋಟಿಗೆ ಸುಮಾರು 1 ಸಾವಿರ ಸೀಮೆ ಹಸುಗಳನ್ನು ಖರೀದಿಸಿಕೊಂಡು ಬಂದಿದ್ದರು. ಆದರೆ, ಹಸುಗಳ ಮಾಲೀಕರಿಗೆ ಹಣ ಕೊಟ್ಟಿರಲಿಲ್ಲ. ಆ ಸಾಲದ ಮೇಲಿನ ಬಡ್ಡಿ ಸೇರಿ ₹ 15 ಕೋಟಿ ಕೊಡಬೇಕಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಹಸುಗಳ ಮಾಲೀಕರು ಹಣ ಕೊಡುವಂತೆ ಕೇಳಿದರೂ ವರ್ತೂರು ಪ್ರಕಾಶ್‌ ಹಣ ನೀಡದೆ ಸತಾಯಿಸುತ್ತಿದ್ದರು. ಈ ಕಾರಣಕ್ಕಾಗಿ ಹಸುಗಳ ಮಾಲೀಕರು ಮಹಾರಾಷ್ಟ್ರದಿಂದ ಬಾಡಿಗೆ ಗೂಂಡಾಗಳನ್ನು ಕಳುಹಿಸಿ ಅವರಿಗೆ ಬೆದರಿಕೆ ಹಾಕಿಸಿದ್ದರು. ಆದರೂ ಅವರು ಹಣ ಕೊಟ್ಟಿರಲಿಲ್ಲ ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಹಸುಗಳ ಮಾಲೀಕರ ಸೂಚನೆಯಂತೆ ಗೂಂಡಾಗಳು ನ.25ರಂದು ವರ್ತೂರು ಪ್ರಕಾಶ್‌ ಮತ್ತು ಅವರ ಕಾರು ಚಾಲಕ ಸುನಿಲ್‌ನನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಸಾಲ ವಸೂಲಾತಿಗಾಗಿ ಈ ಕೃತ್ಯ ಎಸಗಿರುವುದು ನಿಜ. ಆದರೆ, ವರ್ತೂರು ಪ್ರಕಾಶ್‌ರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಣ ಪಡೆಯುವುದು ಅವರ ಉದ್ದೇಶವಾಗಿರಲಿಲ್ಲ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಹನಿಟ್ರ್ಯಾಪ್‌ ಅಥವಾ ಮಹಿಳೆಯ ವಿಚಾರವಾಗಿ ಈ ಘಟನೆ ನಡೆದಿಲ್ಲ ಎಂದು ಮೂಲಗಳು ಹೇಳಿವೆ.

ತನಿಖೆಗೆ ಅಸಹಕಾರ: ವರ್ತೂರು ಪ್ರಕಾಶ್ ತಮ್ಮ ಮೇಲೆ ನಡೆದ ಹಲ್ಲೆಯನ್ನೇ ನೆಪವಾಗಿಸಿಕೊಂಡು ಹಸು ಮಾಲೀಕರನ್ನು ಬೆದರಿಸುವ ಉದ್ದೇಶಕ್ಕೆ ಅಪಹರಣದ ನಾಟಕವಾಡಿದ್ದಾರೆ. ಅವರಿಗೆ ಆರೋಪಿಗಳು ಗೊತ್ತಿದ್ದರೂ ಮಾಹಿತಿ ನೀಡದೆ ತನಿಖೆಗೆ ಅಸಹಕಾರ ತೋರುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ವರ್ತೂರು ಪ್ರಕಾಶ್‌ ಘಟನೆ ಸಂಬಂಧ 6 ದಿನ ತಡವಾಗಿ ದೂರು ನೀಡಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಅಪಹರಣಕಾರರು ಕೋಲಾರ ತಾಲ್ಲೂಕಿನ ಜಂಗಾಲಹಳ್ಳಿ ರಸ್ತೆಯಲ್ಲಿನ ನೀಲಗಿರಿ ತೋಪಿನ ಬಳಿ ತಮ್ಮ ಕಾರು ಅಡ್ಡಗಟ್ಟಿ, ಕಣ್ಣಿಗೆ ಕಾರದ ಪುಡಿ ಎರಚಿ ಅಪಹರಿಸಿದರೆಂದು ವರ್ತೂರು ಪ್ರಕಾಶ್‌ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಪೊಲೀಸರು ಆ ಸ್ಥಳದಲ್ಲಿ ಪರಿಶೀಲನೆ ಮಾಡಿದಾಗ ಕೃತ್ಯಕ್ಕೆ ಸಂಬಂಧಪಟ್ಟ ಯಾವುದೇ ಕುರುಹು ಪತ್ತೆಯಾಗಿಲ್ಲ.‌

ಹೇಳಿಕೆ ಬದಲು: ಅಪಹರಣಕಾರರಿಂದ ಹಲ್ಲೆಗೊಳಗಾದ ಚಾಲಕ ಸುನಿಲ್‌, ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವರ್ತೂರು ಪ್ರಕಾಶ್‌ ಬೆಂಗಳೂರಿನ ಕೆ.ಆರ್‌.ಪುರದ ಸತ್ಯಸಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ನಂತರ ಅವರೇ ಸುನಿಲ್‌ರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿಸಿಕೊಂಡು ಹೋಗಿದ್ದರು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಬೆಳ್ಳಂದೂರು ಬಳಿಯ ಸ್ಮಶಾನದಲ್ಲಿ ಡಿ.1ರಂದು ವರ್ತೂರು ಪ್ರಕಾಶ್‌ರ ಕಾರು ಪತ್ತೆಯಾಗಿತ್ತು. ಅವರ ಆಪ್ತರೇ ಆ ಜಾಗದಲ್ಲಿ ಕಾರು ನಿಲ್ಲಿಸಿ ಹೋಗಿರುವ ಸಾಧ್ಯತೆಯಿದೆ. ಅಲ್ಲದೇ, ಅವರೇ ಕಾರಿನೊಳಗೆ ಸೀಟಿನ ಮೇಲೆಲ್ಲಾ ಕಾರದ ಪುಡಿ ಎರಚಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ ವರ್ತೂರು ಪ್ರಕಾಶ್‌ ಅವರು ಪದೇಪದೇ ಹೇಳಿಕೆ ಬದಲಿಸುತ್ತಿದ್ದು, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತನಿಖಾಧಿಖಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.