ADVERTISEMENT

ಹಣತೆ ಹಚ್ಚಿ ಹೋರಾಟಕ್ಕೆ ಬೆಂಬಲ

ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದ ಜಿಲ್ಲೆಯ ಜನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:42 IST
Last Updated 5 ಏಪ್ರಿಲ್ 2020, 16:42 IST
ಕೋಲಾರದ ಗಲ್‌ಪೇಟೆ ನಿವಾಸಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂದಿಸಿ ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ಮೊಬೈಲ್‌ ಟಾರ್ಚ್ ಬೆಳಗಿಸಿದರು.
ಕೋಲಾರದ ಗಲ್‌ಪೇಟೆ ನಿವಾಸಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂದಿಸಿ ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ಮೊಬೈಲ್‌ ಟಾರ್ಚ್ ಬೆಳಗಿಸಿದರು.   

ಕೋಲಾರ: ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿದ ಜಿಲ್ಲೆಯ ಜನರು ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಮನೆಯಲ್ಲಿನ ವಿದ್ಯುತ್‌ ದೀಪಗಳನ್ನು ಆರಿಸಿ ಹಣತೆ ಹಚ್ಚಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕೆಲ ಮನೆಗಳಲ್ಲಿ ನಾಗರಿಕರು ದೀಪ, ಮೇಣದ ಬತ್ತಿ ಹಚ್ಚಿದರು. ಮತ್ತೆ ಕೆಲ ಮನೆಗಳಲ್ಲಿ ಬ್ಯಾಟರಿ, ಲಾಟೀನು, ಮೊಬೈಲ್‌ ಟಾರ್ಚ್‌ ಬೆಳಗಿಸಿದರು. ಹಲವು ಬಡಾವಣೆಗಳಲ್ಲಿ ಪಟಾಕಿ ಸಿಡಿಸಲಾಯಿತು. ಮನೆ ಮಂದಿಯೆಲ್ಲಾ ಬಾಲ್ಕನಿಯಲ್ಲಿ ನಿಂತು ದೀಪ ಬೆಳಗಿ ಕೊರೊನಾ ಸೋಂಕಿನಿಂದ ದೇಶಕ್ಕೆ ಮುಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಕೆಲ ಬಡಾವಣೆಗಳಲ್ಲಿ ಮಹಿಳೆಯರು ಸಂಜೆಯೇ ಮನೆಯ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದರು. ರಸ್ತೆಗಳಲ್ಲಿ ರಂಗೋಲಿ, ಭಾರತದ ನಕಾಶೆ ಬಿಡಿಸಿ ಮಧ್ಯ ಭಾಗದಲ್ಲಿ ಹಣತೆಯಿಟ್ಟು ಗಮನ ಸೆಳೆದರು. ಅನೇಕರು ಮನೆಯಂಗಳ, ಬಾಲ್ಕನಿಯಲ್ಲಿ ದೀಪ ಬೆಳಗಿಸಿದರು.

ADVERTISEMENT

ನಗರದ ಗಲ್‌ಪೇಟೆ ನಿವಾಸಿಗಳು ಚಾಮುಂಡೇಶ್ವರಿ ದೇವಾಲಯ ಮುಂಭಾಗದಲ್ಲಿ ದೊಡ್ಡ ರಂಗೋಲಿ ಬಿಡಿಸಿ ಮಧ್ಯೆ ದೀಪ ಹಚ್ಚಿದರು. ರಂಗೋಲಿಯ ಮಧ್ಯೆ ‘ಹಚ್ಚೇವು ಕನ್ನಡದ ದೀಪ ಆರೋಗ್ಯದ ದೀಪ ಕರುನಾಡ ದೀಪ’ ಎಂದು ಬರೆದು ಸರ್ವರಿಗೂ ಆರೋಗ್ಯ ಭಾಗ್ಯ ಕೋರಿದರು.

ರಂಗೋಲಿ ನಡುವೆ ‘ಎಲ್ಲರೂ ಒಳಗಿರೋಣ ಕೊರೊನಾ ಹೊರಗಿಡೋಣ’ ಎಂಬ ಸಂದೇಶ ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಮಹಿಳೆಯರು ಗಲ್‌ಪೇಟೆ ಮುಖ್ಯ ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ದೀಪಗಳನ್ನು ಹಚ್ಚಿ ಲೋಕ ಕಲ್ಯಾಣ ಬಯಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.