ADVERTISEMENT

ಚಿನ್ನದ ಗಣಿ ಆರಂಭ: ಇನ್ನೂ ಈಡೇರದ ನಿರೀಕ್ಷೆ

ಬಿಜಿಎಂಎಲ್‌ ಮುಚ್ಚಿ ಇಂದಿಗೆ ಎರಡು ದಶಕ: ಬಿಗಡಾಯಿಸಿದ ಆರ್ಥಿಕ, ಸಾಮಾಜಿಕ ಸ್ಥಿತಿ

ಕೃಷ್ಣಮೂರ್ತಿ
Published 1 ಮಾರ್ಚ್ 2021, 4:51 IST
Last Updated 1 ಮಾರ್ಚ್ 2021, 4:51 IST
ಕೆಜಿಎಫ್‌ ಬಿಜಿಎಂಎಲ್‌ ಫಲಕ
ಕೆಜಿಎಫ್‌ ಬಿಜಿಎಂಎಲ್‌ ಫಲಕ   

ಕೆಜಿಎಫ್: ವಿಶ್ವವಿಖ್ಯಾತ ಚಿನ್ನದ ಗಣಿ (ಬಿಜಿಎಂಎಲ್) ಮುಚ್ಚಿ ಇಂದಿಗೆ (ಮಾರ್ಚ್‌ 1) ಇಪ್ಪತ್ತು ದಾಟಿ ಇಪ್ಪತ್ತೊಂದನೇ ವರ್ಷಕ್ಕೆ ಕಾಲಿಟ್ಟಿದೆ. ಅಂದಿನಿಂದಲೂಇಂದಿನವರೆಗೂ ಗಣಿ ಯಾವಾಗ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಇರುವ ನಗರದ ಜನತೆಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಗಣಿ ಮುಚ್ಚಿದ ನಂತರ ಉಂಟಾದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಮೈನಿಂಗ್ ಕಾಲೋನಿಗಳಲ್ಲಿ ಕೊಂಚ ಬದಲಾವಣೆಗಳು ಕಂಡಿದ್ದರೂ, ಜೀವನ ಶೈಲಿ ಬದಲಾಯಿಸುವ ವಾತಾವರಣ ಕಂಡು ಬಂದಿಲ್ಲ.

ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳು ಜೊತೆಗೆ ಪೆಂಡಾಲಿಯಂ ಲೋಹ ಸಿಗುತ್ತದೆ ಎಂಬ ನಿರೀಕ್ಷೆಯಡಿ ಈಚೆಗೆ ಎಂಇಸಿಎಲ್ ಕಂಪನಿ ಶೋಧ ಕಾರ್ಯ ನಡೆಸಿತು. ಅದರ ವರದಿ ಇನ್ನೂ ಬಂದಿಲ್ಲ. ಬಿಜಿಎಂಎಲ್‌ನಲ್ಲಿ ಚಿನ್ನದ ನಿಕ್ಷೇಪಗಳು ಕಂಡು ಬಂದಲ್ಲಿ, ಪುನಃ ಚಿನ್ನದ ಗಣಿಯನ್ನು ಸ್ಥಾಪನೆ ಮಾಡುವ ಬಗ್ಗೆ ಗಣಿ ಸಚಿವಪ್ರಹ್ಲಾದ ಜೋಷಿ ಈಚೆಗೆ ಹೇಳಿಕೆ ನೀಡಿದ್ದರು. ಇಲ್ಲವಾದಲ್ಲಿ ಸುಮಾರು 3,500 ಎಕರೆ ಪ್ರದೇಶವನ್ನು ಕೈಗಾರಿಕೆ ಅಭಿವೃದ್ಧಿಗೆ ಬಳಸುವ ಸೂಚನೆಯನ್ನು ಅವರು ನೀಡಿದ್ದರು. ಆದರೆ ಇದುವರೆಗೂ ಯಾವುದೇ ಆಶಾಕಿರಣ ಸರ್ಕಾರದ ಕಡೆಯಿಂದ ಬಂದಿಲ್ಲ.

1880ರಲ್ಲಿ ಜಾನ್ ಟೇಲರ್ ತಮ್ಮ ಕಂಪನಿ ಮೂಲಕ ಆಧುನಿಕ ಗಣಿಗಾರಿಕೆಯನ್ನು ಪ್ರಾರಂಭಿಸಿ, ಚಿನ್ನವನ್ನು ಉತ್ಪಾದನೆ ಮಾಡಲು ಪ್ರಯತ್ನಿಸಿದ ನಂತರ ಸುಮಾರು ನೂರಾ ಇಪ್ಪತ್ತು ವರ್ಷಗಳ ಕಾಲ ದೇಶಕ್ಕೆ ಚಿನ್ನವನ್ನು ನೀಡುತ್ತ ಬಂದಿದ್ದ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ನ್ನು 12ನೇ ಜೂನ್ 2000 ದಂದು ಬಿಐಎಫ್ಆರ್ ಮುಚ್ಚಲು ಆದೇಶಿಸಿತು. ನಂತರ ಕಾರ್ಮಿಕ ಇಲಾಖೆ 2001ನೇ ಮಾರ್ಚ್‌ 1ನೇ ತಾರೀಕಿನಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತು. ಅದರಂತೆ 2001ನೇ ಮಾರ್ಚ್‌ 1ನೇ ತಾರೀಕಿನಿಂದ ಕಾರ್ಮಿಕರಿಗೆ ವಿಶೇಷ ಭತ್ಯೆ ನೀಡಿ ಕೆಲಸದಿಂದ ವಜಾ ಮಾಡಲಾಯಿತು. ಅಂದಿನಿಂದ ಅನೇಕ ಹೋರಾಟಗಳು ನಡೆದು ಗಣಿಗಾರಿಕೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಹಲವಾರು ನಿಯೋಗಗಳು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ADVERTISEMENT

2006ರಲ್ಲಿ ಕೇಂದ್ರ ಸರ್ಕಾರವು ಬಿಜಿಎಂಎಲ್ ಆಸ್ತಿಯನ್ನು ಜಾಗತಿಕ ಟೆಂಡರ್ ಮೂಲಕ ಹರಾಜು ಹಾಕಲು ಒಪ್ಪಿಗೆ ಸೂಚಿಸಿತು. ಆದರೆ ಕಾರ್ಮಿಕ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಸರ್ಕಾರಿ ಮಟ್ಟದಲ್ಲಿ ಯಾವುದೇ ಕೆಲಸಗಳು ನಡೆಯಲಿಲ್ಲ.2013ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಸಂಪುಟ ಸಭೆ ತೆಗೆದುಕೊಂಡಿದ್ದ ನಿರ್ಣಯವನ್ನು ಎತ್ತಿ ಹಿಡಿಯಿತು. ಆದರೆ ನಷ್ಟದಲ್ಲಿರುವ ಕೇಂದ್ರ ಸರ್ಕಾರಿ ಉದ್ಯಮವನ್ನು ಪುನಃ ಪುನರಾರಂಭಿಸಬೇಕಾದರೆ ಬೇಕಾದ ರಾಜಕೀಯ ಒತ್ತಡ ಅಥವ ಲಾಬಿ ಮಾಡಲು ಸಾಧ್ಯವಾಗಲಿಲ್ಲ. ಅಷ್ಟರೊಳಗೆ 2015ರಲ್ಲಿ ಮೈನ್ಸ್ ಮತ್ತು ಮಿನರಲ್ (ಡೆವಲಂಪ್ಮೆಂಟ್ ಮತ್ತು ರೆಗ್ಯುಲೇಷನ್) ತಿದ್ದುಪಡಿ ಕಾಯಿದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು.

ಇದರಂತೆ ಚಿನ್ನದ ಉದ್ದಿಮೆ ರಾಜ್ಯ ಸರ್ಕಾರದ ಸುಪರ್ದಿಗೆ ಬಂದಿತು. ರಾಜ್ಯ ಸರ್ಕಾರ ಗಣಿಗಾರಿಕೆಯನ್ನು ಮುಂದವರೆಸಬೇಕೇ ಅಥವಾ ಬದಲಿ ಕೈಗಾರಿಕೆ ಸ್ಥಾಪಿಸಬೇಕೇ ಎಂಬ ಜಿಜ್ಞಾಸೆಯಲ್ಲಿ ತೊಡಗಿರುವುದರಿಂದ ಇದುವರೆಗೂ ಬಿಜಿಎಂಎಲ್ ಪುನರಾರಂಭದ ಬಗ್ಗೆ ಖಚಿತ ನಿರ್ಧಾರ ಪ್ರಕಟವಾಗಿಲ್ಲ.

ಜೊತೆಗೆ ಕರ್ನಾಟಕ ಸರ್ಕಾರ ಗಣಿಗಾರಿಕೆಗೆ ನೀಡಲಾಗಿದ್ದ ಲೀಸ್ ವಿಸ್ತರಣೆ ಮಾಡಲಿಲ್ಲ. 2013ಕ್ಕೆ ಕೊನೆಯಾಗಿರುವ ಗಣಿಗಾರಿಕೆ ಲೀಸ್‌ಗೆ ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.

ಈ ಮಧ್ಯೆ ಗಣಿ ಮುಚ್ಚಿದಾಗ ಇದ್ದ 3,100 ಕಾರ್ಮಿಕರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಬೇಕು. ಗಣಿಗಾರಿಕೆಯನ್ನು ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಬೇಕು, ಗಣಿ ಪ್ರದೇಶದಲ್ಲಿ ಎರಡು ಮೂರು ತಲೆಮಾರುಗಳಿಂದ ವಾಸವಾಗಿರುವ ಬಂದಿರುವ ಗಣಿ ಕಾರ್ಮಿಕರ ಕುಟುಂಬಗಳಿಗೆ ಅವರು ವಾಸವಾಗಿರುವ ಮನೆಯನ್ನು ನೀಡಬೇಕು ಎಂಬ ಬೇಡಿಕೆಗಳು ಬಹಳ ವರ್ಷಗಳಿಂದ ಬರುತ್ತಲೇ ಇದೆ. ರಾಜಕೀಯ ಪಕ್ಷಗಳು ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸಮಸ್ಯೆಯನ್ನು ಬಳಸಿಕೊಳ್ಳುತ್ತಲೇ ಇದೆ. ಆದರೆ ಪರಿಹಾರ ಮಾತ್ರ ಇದುವರೆಗೂ ಸಿಕ್ಕಿಲ್ಲ.

ಈಗಲೂ ಮೈನಿಂಗ್ ಪ್ರದೇಶದಲ್ಲಿರುವ 16 ವಾರ್ಡ್‌ಗಳು ನಗರಸಭೆ ವ್ಯಾಪ್ತಿಯಲ್ಲಿ ಬಂದರೂ, ಅಲ್ಲಿ ಯಾವುದಾದರೂ ಮೂಲ ಸೌಕರ್ಯ ಕಲ್ಪಿಸಬೇಕಾದರೂ ಗಣಿ ಅಧಿಕಾರಿಗಳ ಒಪ್ಪಿಗೆ ಪಡೆಯಬೇಕು. ಬಿಜಿಎಂಎಲ್ ಮುಚ್ಚಿದ ನಂತರ ನಗರಸಭೆಗೆ ಮೂಲ ಸೌಕರ್ಯ ನೀಡುವ ಹೊಣೆಗಾರಿಕೆಯನ್ನು ನೀಡಲಾಯಿತು. ವರ್ಷಕ್ಕೆ ₹16 ಲಕ್ಷ ನಗರಸಭೆಗೆ ನೀಡಬೇಕಾಗಿತ್ತು. ಆದರೆ ಅದನ್ನು ನಿಯಮಿತವಾಗಿ ಪಾವತಿ ಮಾಡುತ್ತಿಲ್ಲ.

ಸಂಪಾದನೆಗೆ ಕುತ್ತು: ಚಿನ್ನದ ಗಣಿ ಮುಚ್ಚಿದ ಸಂದರ್ಭದಲ್ಲಿ ನಗರದ ಜನ ಭಾವನಾತ್ಮಕವಾಗಿ ನೊಂದಿದ್ದರು. ಒಂದೆಡೆ ಕಾರ್ಮಿಕರು ನಿರುದ್ಯೋಗಿಗಳಾದರೆ, ಗಣಿಗಾರಿಕೆ ಬಿಟ್ಟು ಬೇರೆ ಕೆಲಸ ತಿಳಿಯದ ಸಾವಿರಾರು ಮಂದಿ ಜೀವನಾಧಾರಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಚಿಂತಾಕ್ರಾಂತರಾದರು. ಗಣಿ ಪುನರಾರಂಭ ಮಾಡಬೇಕು ಎಂಬ ಹೋರಾಟಗಳು ತೀವ್ರವಾಗಿ ನಡೆದರೂ, ದಿನಕಳೆದಂತೆ ಹೋರಾಟ ತನ್ನ ಛಾಪನ್ನು ಕಳೆದುಕೊಂಡಿತು. ಸಾವಿರಾರು ಮಂದಿ ತಮಿಳುನಾಡಿಗೆ ವಲಸೆ ಹೋದರು. ಕಾರ್ಮಿಕ ಮುಖಂಡರು ಕೂಡ ತೆಪ್ಪಗಾದರು. ಇಲ್ಲಿಯೇ ಉಳಿದುಕೊಳ್ಳಬೇಕೆನ್ನುವವರು ಪ್ರತಿನಿತ್ಯ ಬೆಂಗಳೂರಿಗೆ ರೈಲಿನಲ್ಲಿ ಹೋಗಿ ಸಂಪಾದನೆ ಕಂಡುಕೊಂಡರು. ಆದರೆ ಕೋವಿಡ್‌ನಿಂದಾಗಿ ಹಲವಾರು ರೈಲುಗಳು ಸ್ಥಗಿತಗೊಂಡಿರುವುದರಿಂದ ಸಂಪಾದನೆಗೆ ಕೂಡ ಕುತ್ತು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.