ADVERTISEMENT

ಪಠ್ಯದಿಂದ ಟಿಪ್ಪು ವಿಚಾರ ತೆಗೆಯುವ ಸರ್ಕಾರದ ನಿರ್ಧಾರಕ್ಕೆ ವಿರೋಧವಿಲ್ಲ: ನಾಗೇಶ್‌

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:26 IST
Last Updated 1 ನವೆಂಬರ್ 2019, 15:26 IST

ಕೋಲಾರ: ‘ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಜನಪರವಾಗಿರುತ್ತದೆ. ಅದಕ್ಕೆ ನನ್ನ ವಿರೋಧವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಶಾಲಾ ಪಠ್ಯದಲ್ಲಿರುವ ಟಿಪ್ಪು ಸುಲ್ತಾನ್‌ ಪರಿಚಯಿಸುವ ಪಾಠಗಳನ್ನು ತೆಗೆಯುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆ ನೀಡಿರುವುದಕ್ಕೆ ಇಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಸಚಿವರು, ‘ಬಿಜೆಪಿ ಸರ್ಕಾರದಲ್ಲಿ ನಾನು ಸಚಿವನಾಗಿದ್ದೇನೆ. ಹೀಗಾಗಿ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರಬೇಕು’ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಸುಲ್ತಾನ್‌ ಜಾತ್ಯಾತೀತ ವಾದಿಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಉತ್ತರಿಸಲು ನಿರಾಕರಿಸಿದ ಸಚಿವರು, ‘ಆ ಬಗ್ಗೆ ಹೆಚ್ಚು ಮಾತನಾಡುವಿದಿಲ್ಲ. ರಾಜ್ಯ ಸರ್ಕಾರ ಕೈಗೊಳ್ಳುವ ಪ್ರತಿ ನಿರ್ಧಾರಕ್ಕೂ ನನ್ನ ಸಮ್ಮತಿಯಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಬಿಜೆಪಿ ಮೂರೂವರೆ ವರ್ಷ ಸುಭದ್ರವಾಗಿರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಅನರ್ಹಗೊಂಡಿರುವ ಶಾಸಕರೆಲ್ಲರೂ ಉಪ ಚುನಾವಣೆಯಲ್ಲಿ ಖಂಡಿತ ಗೆಲುವು ಸಾಧಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಂಗ್ರೆಸ್, ಜೆಡಿಎಸ್‌ ಪಕ್ಷದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳಿಲ್ಲ. ಆದರೆ, ಬಿಜೆಪಿಗೆ ಆ ಪರಿಸ್ಥಿತಿಯಿಲ್ಲ. ಅನರ್ಹ ಶಾಸಕರೆಲ್ಲರಿಗೂ ಬಿಜೆಪಿಯ ಟಿಕೆಟ್ ನೀಡಿ ಮುಖ್ಯಮಂತ್ರಿಗಳು ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುತ್ತಾರೆ’ ಎಂದು ತಿಳಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯು ಹಿಂದುಳಿದಿದ್ದು, ಸರ್ಕಾರವು ಅಲ್ಲಿಗೆ ವೈದ್ಯಕೀಯ ಕಾಲೇಜು ನೀಡಿರುವ ಕ್ರಮ ಸರಿಯಿದೆ. ಅದೇ ರೀತಿ ಕೋಲಾರ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಆಸ್ಪತ್ರೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.