ADVERTISEMENT

ಗುತ್ತಿಗೆದಾರರಿಗೆ ಬೆದರಿಕೆ: ಸಂಭಾಷಣೆ ವೈರಲ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 16:42 IST
Last Updated 17 ಡಿಸೆಂಬರ್ 2020, 16:42 IST
ಚಿನ್ನಸ್ವಾಮಿಗೌಡ
ಚಿನ್ನಸ್ವಾಮಿಗೌಡ   

ಕೋಲಾರ: ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ಆಲ್ ಕಾರ್ಗೋ ಕಂಪನಿ ಕಾರ್ಮಿಕರಿಗೆ ಆಹಾರ ಪೂರೈಸುವ ಗುತ್ತಿಗೆದಾರರಿಗೆ ಜಿ.ಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ ಅವರು ಕರೆ ಮಾಡಿ ಕಮಿಷನ್‌ ಕೊಡುವಂತೆ ಬೆದರಿಕೆ ಹಾಕಿದ್ದು, ಇದಕ್ಕೆ ಸಂಬಂಧಪಟ್ಟ ಸಂಭಾಷಣೆ ತುಣುಕು ವೈರಲ್ ಆಗಿದೆ.

ಚಿನ್ನಸ್ವಾಮಿಗೌಡ ಅವರು ಕಂಪನಿಗೆ ಆಹಾರ ಕೊಂಡೊಯ್ಯುತ್ತಿದ್ದ ವಾಹನ ತಡೆದು ಗುತ್ತಿಗೆದಾರರು ಮತ್ತು ಮೇಲ್ವಿಚಾರಕರ ಮೊಬೈಲ್‌ಗೆ ಕರೆ ಮಾಡಿ, ‘ಕಮಿಷನ್‌ ಕೊಡದಿದ್ದರೆ ವಾಹನಕ್ಕೆ ಬೆಂಕಿ ಹಚ್ಚುತ್ತೇನೆ. ವಾಹನದಲ್ಲಿರುವ ಆಹಾರಕ್ಕೆ ವಿಷ ಬೆರೆಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ.

‘ನಾವು ಲೋಕಲ್, ಎಲ್ಲವನ್ನೂ ನಾವೇ ನೋಡಿಕೊಳ್ಳೋದು, ನೀವು ನಮಗೆ ಕಮಿಷನ್ ಕೊಡುತ್ತಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದೆ. ಚುನಾವಣಾ ಖರ್ಚಿಗೆ ಹಣವಿಲ್ಲ. ಹಣ ಕೊಡದಿದ್ದರೆ ಊಟಕ್ಕೆ ವಿಷ ಹಾಕಿ ಕಳುಹಿಸುತ್ತೇನೆ. ವಿಷಪೂರಿತ ಆಹಾರ ತಿಂದು ಕಾರ್ಮಿಕರು ಸಾಯಲಿ’ ಎಂದು ಬೆದರಿಸಿದ್ದಾರೆ

ADVERTISEMENT

ಆಹಾರ ಸರಬರಾಜಿನ ಗುತ್ತಿಗೆದಾರರು ಮತ್ತು ಮೇಲ್ವಿಚಾರಕರು ವಾಹನ ಬಿಟ್ಟು ಕಳುಹಿಸುವಂತೆ ಪರಿಪರಿಯಾಗಿ ಕೇಳಿದರೂ ಅದಕ್ಕೆ ಒಪ್ಪದ ಚಿನ್ನಸ್ವಾಮಿಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಘಟನೆ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಿನ್ನಸ್ವಾಮಿಗೌಡ, ‘ನಾನು ಬೆದರಿಕೆ ಹಾಕಿರುವುದು ನಿಜ. ಆದರೆ, ಆಲ್ ಕಾರ್ಗೋ ಕಂಪನಿಗೆ ಆಹಾರ ತೆಗೆದುಕೊಂಡು ಹೋಗುವ ವಾಹನ ನನ್ನ ಕಾರಿಗೆ ಗುದ್ದಿತ್ತು. ಈ ವಿಚಾರವಾಗಿ ಗುತ್ತಿಗೆದಾರರು ಮತ್ತು ಮೇಲ್ವಿಚಾರಕರಿಗೆ ಕರೆ ಮಾಡಿ ನಿಂದಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.