ADVERTISEMENT

ಮುಳಬಾಗಿಲು | ಟೊಮೊಟೊ ಮಾರುಕಟ್ಟೆ: ತ್ಯಾಜ್ಯ ವಿಲೇವಾರಿಗಿಲ್ಲ ಸ್ಥಳ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಐದು ವರ್ಷ ಕಳೆದರೂ ಘಟಕವಿಲ್ಲ

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 22 ಸೆಪ್ಟೆಂಬರ್ 2025, 5:42 IST
Last Updated 22 ಸೆಪ್ಟೆಂಬರ್ 2025, 5:42 IST
ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಯ ಕಸ ವಿಲೇವಾರಿ ಘಟಕಕ್ಕೆ ಗುರುತಿಸಲಾಗಿರುವ ಸ್ಥಳದಲ್ಲಿ ಗಿಡಗಂಟೆಗಳು ಬೆಳೆದಿರುವುದು
ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಉಪ ಮಾರುಕಟ್ಟೆಯ ಕಸ ವಿಲೇವಾರಿ ಘಟಕಕ್ಕೆ ಗುರುತಿಸಲಾಗಿರುವ ಸ್ಥಳದಲ್ಲಿ ಗಿಡಗಂಟೆಗಳು ಬೆಳೆದಿರುವುದು   

ಮುಳಬಾಗಿಲು: ತಾಲ್ಲೂಕಿನ ಎನ್.ವಡ್ಡಹಳ್ಳಿಯ ಎಪಿಎಂಸಿ ಟೊಮೆಟೊ ಉಪ ಮಾರುಕಟ್ಟೆಯಲ್ಲಿ ಬೀಳುವ ಕಸ ಸುರಿಯಲು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸುಮಾರು 5 ವರ್ಷಗಳ ಹಿಂದೆಯೇ ಸ್ಥಳ ನಿಗದಿಯಾಗಿದ್ದರೂ, ಇನ್ನೂ ಘಟಕ ಪ್ರಾರಂಭವಾಗಿಲ್ಲ.

ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿ ಎಪಿಎಂಸಿ ಟೊಮೆಟೊ ಉಪ ಮಾರುಕಟ್ಟೆ ರಾಜ್ಯದಲ್ಲಿಯೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ‌. ಆದರೆ, ಪ್ರತಿನಿತ್ಯ ಲಕ್ಷಾಂತರ ವ್ಯಾಪಾರ ವಹಿವಾಟು ನಡೆಯುವ ಮಾರುಕಟ್ಟೆಗೆ  ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.

ನೆರೆಯ ತಮಿಳುನಾಡಿನ ಚೆನ್ನೈ ಟೊಮೆಟೊ ಮಾರುಕಟ್ಟೆಗೆ ಕೇವಲ ನೂರಾರು ಕಿ.ಮೀ ಅಂತರದಲ್ಲಿ ಇರುವ ಮಾರುಕಟ್ಟೆಯಲ್ಲಿ ಸುಮಾರು 50 ಟೊಮೆಟೊ ಮಂಡಿಗಳಿದ್ದು (ಅಂಗಡಿಗಳು) ಟೊಮೆಟೊ ಋತುವಿನಲ್ಲಿ ಪ್ರತಿನಿತ್ಯ ಸುಮಾರು 50 ಸಾವಿರ ಬಾಕ್ಸ್‌ ಟೊಮೆಟೊ ಹಾಗೂ ಇತರೆ ಕಾಲದಲ್ಲಿ ಸರಾಸರಿ ಸುಮಾರು 30 ಸಾವಿರಕ್ಕೂ ಹೆಚ್ಚು ಬಾಕ್ಸ್‌ ಮಾರುಕಟ್ಟೆಗೆ ಬರುತ್ತದೆ. ಹೀಗಿರುವಾಗ ವ್ಯಾಪಾರ ವಹಿವಾಟು ನಡೆಯುವಾಗ ಕೆಳಗೆ ಬೀಳುವ ಟೊಮೆಟೊ, ಕಸ ಕಡ್ಡಿ, ಬಾಕ್ಸ್‌ಗಳಿಗೆ ಹಾಕುವ ಪೇಪರ್ ಮತ್ತಿತರರ ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕಲು ಸೂಕ್ತ ಕಸ ವಿಲೇವಾರಿ ಘಟಕ ಇಲ್ಲದೆ ರಾಷ್ಟ್ರೀಯ ಹೆದ್ದಾರಿ 75, ಆಲಂಗೂರು ರಸ್ತೆ, ಕೆರೆ ಕುಂಟೆಗಳ ಬಳಿ ಮತ್ತಿತರರ ಕಡೆಗಳಲ್ಲಿ ತ್ಯಾಜ್ಯವನ್ನು ಸುರಿಯುವಂತಾಗಿದೆ.

ADVERTISEMENT

ಈ ಸಮಸ್ಯೆ ಪರಿಹರಿಸಲು ಮಾಜಿ ಶಾಸಕ ಎಚ್.ನಾಗೇಶ್ ಘಟಕ ಮಂಜೂರಾತಿಗೆ ಕ್ರಮ ಕೈಗೊಂಡಿದ್ದರೂ, ಐದು ವರ್ಷಗಳು ಕಳೆಯುತ್ತಿದ್ದರೂ ಘಟಕ ಪ್ರಾರಂಭಕ್ಕೆ ಕಾಲ ಕೂಡಿ ಬಂದಿಲ್ಲ.

ಎನ್.ವಡ್ಡಹಳ್ಳಿ ಮಾರುಕಟ್ಟೆಗೆ ರಾಜ್ಯ ಹಾಗೂ ಹೊರ ರಾಜ್ಯದವರೂ ಟೊಮೊಟೊ ಮಾರುಕಟ್ಟೆಗೆ ಬಂದು ಲಕ್ಷಾಂತ ವ್ಯಾಪಾರ ವಹಿವಾಟು ನಡೆಸುತ್ತಾರೆ. ಜೊತೆಗೆ ಕೆಲ ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿಯೇ ವ್ಯಾಪಾರ ನಡೆಸುತ್ತಾರೆ. ಆದರೆ, ಇಂತಹ ದೊಡ್ಡ ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ಕಸದ ಸಮಸ್ಯೆ ತೀವ್ರವಾಗುತ್ತಿದೆ. ಮಾರುಕಟ್ಟೆಯ ಸುತ್ತಲಿನ ರಸ್ತೆಗಳು ಕಸದಿಂದ ಆವೃತವಾಗುತ್ತಿದ್ದು, ಎನ್.ವಡ್ಡಹಳ್ಳಿ ಕಸದ ಗ್ರಾಮವಾಗಿ ಬದಲಾಗುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದೆ.

ಸಾಮಾನ್ಯವಾಗಿ ಟೊಮೆಟೊ ಬೆಲೆ ಹೆಚ್ಚಿದ್ದಾಗ ವ್ಯಾಪಾರಿಗಳು ವಾಹನಗಳಿಗೆ ತುಂಬಿಸುವಾಗ ನೆಲಕ್ಕೆ ಬೀಳುವ ಟೊಮೊಟೊ ಸಹ ಇತರೆ ಬಾಕ್ಸ್‌ಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಇದರಿಂದ ಬೆಲೆ ಹೆಚ್ಚಳದ ಸಮಯದಲ್ಲಿ ಟೊಮೆಟೊ ತ್ಯಾಜ್ಯ ಹೆಚ್ಚಾಗಿ ಕಂಡು ಬರುವುದಿಲ್ಲ. ಆದರೆ, ಬೆಲೆ ಕ್ಷೀಣಿಸಿದಾಗ ಟೊಮೆಟೊ ಖರೀದಿಸಲು ವ್ಯಾಪಾರಿಗಳು ಮಾರುಕಟ್ಟೆಗೆ ಸರಿಯಾಗಿ ಬರುವುದೂ ಇಲ್ಲ. ಜೊತೆಗೆ ಮಾರುಕಟ್ಟೆಯಲ್ಲಿ ಕೆಳಗೆ ಬೀಳುವ ಹಣ್ಣುಗಳನ್ನು ಸಹ ಯಾರೂ ಮುಟ್ಟುವುದೂ ಇಲ್ಲ. ಹಾಗಾಗಿ ಬೆಲೆ ಕಡಿಮೆಯಾದಾಗ ತ್ಯಾಜ್ಯದ ಸಮಸ್ಯೆ ಹೆಚ್ಚಾಗುತ್ತದೆ ಎಂಬುದು ಸ್ಥಳೀಯರ ಮಾತಾಗಿದೆ.

ಸಮಸ್ಯೆಗೆ ಸ್ಪಂದಿಸಿದ್ದ ಶಾಸಕರ ಶ್ರಮ ವ್ಯರ್ಥ: ಮಾರುಕಟ್ಟೆಗೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಮಾಜಿ ಶಾಸಕ ಎಚ್.ನಾಗೇಶ್ ಅವರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭಟ್ರಹಳ್ಳಿ ಸಮೀಕ್ಷೆಯಲ್ಲಿ ಐದು ಎಕರೆ ಜಮೀನನ್ನು ಮಂಜೂರು ಮಾಡಿಸಿ, ಭೂಮಿ ಪೂಜೆ ನೇರವೇರಿಸಿದ್ದರು. ನಂತರ ಅತಿವೇಗವಾಗಿ ಕಾಮಗಾರಿ ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಯಾವ ಕೆಲಸವೂ ಆಗಿಲ್ಲ ಎಂಬುದು ವಿಪರ್ಯಾಸ.

ಅಧಿಕಾರಿಗಳ ಜಾಣ ನಡೆ: ತ್ಯಾಜ್ಯ ವಿಲೇವಾರಿ ಘಟಕದ ಐದು ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳಿಗೆ ₹35 ಲಕ್ಷ ಪಾವತಿಸಿ ಜಮೀನನ್ನು ಎಪಿಎಂಸಿ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದರು. ಆದರೆ, ಈಗ ವಿಚಾರಿಸಿದರೆ ತ್ಯಾಜ್ಯ ಘಟಕಕ್ಕೆ ಐದು ಎಕರೆಯಷ್ಟು ದೊಡ್ಡ ಮಟ್ಟದ ಭೂಮಿ ಬೇಕಾಗಿಲ್ಲ. ಕೇವಲ ಎರಡು ಎಕರೆ ಸಾಕು ಎಂದು ಎಪಿಎಂಸಿ ಕೇಂದ್ರ ಕಚೇರಿಯ ಅಧಿಕಾರಿಗಳು ತಿಳಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇನ್ನು ಕಸ ವಿಲೇವಾರಿ ಘಟಕಕ್ಕೆ ಗುರುತಿಸಿರುವ ಆಲಂಗೂರು ರಸ್ತೆಯ ಭಟ್ರಹಳ್ಳಿ ಬಳಿಯ ಜಾಗದಲ್ಲಿ ಗಿಡಗಂಟೆಗಳು ಪೊದೆಗಳಂತೆ ಬೆಳೆದಿದ್ದರೆ, ಕಲ್ಲು ಬಂಡೆಗಳಿಂದ ಆವರಿಸಿದೆ.

ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ರಸ್ತೆಯ ಬದಿಗಳಲ್ಲಿ ಮಾರುಕಟ್ಟೆ ತ್ಯಾಜ್ಯ ಸುರಿದಿರುವುದು
ಎನ್.ವಡ್ಡಹಳ್ಳಿ ಮಾರುಕಟ್ಟೆ ಪ್ರಾರಂಭವಾಗಿ ಅರ್ಧ ಶತಮಾನ ಸಮೀಪಿಸುತ್ತಿದ್ದರೂ ಇನ್ನೂ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ವಿಷಾಧನೀಯ.
ನಗವಾರ ಎನ್.ಆರ್.ಸತ್ಯಣ್ಣ ಮಂಡಿ ಮಾಲೀಕರು
ತ್ಯಾಜ್ಯ ವಿಲೇವಾರಿ ಘಟಕದ ಐದು ಎಕರೆ ಪ್ರದೇಶವನ್ನು ಕೇಂದ್ರ ಕಚೇರಿಯ ಅಧಿಕಾರಿಗಳು ಪರಿಶೀಲಿಸಿದ್ದು ಸಮಸ್ಯೆ ನಿವಾರಣೆಯಾಗಲಿದೆ.
ಎಪಿಎಂಸಿ ಸಿಬ್ಬಂದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.