ADVERTISEMENT

ವೇಮಗಲ್ | ಟೊಮೆಟೊ ಬೆಲೆ ಕುಸಿತ: ಕಂಗಾಲು

ವೇಮಗಲ್ ಸುತ್ತಮುತ್ತ 130--–160 ಹೆಕ್ಟೇರ್‌ನಲ್ಲಿ ಬೆಳೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:41 IST
Last Updated 6 ಸೆಪ್ಟೆಂಬರ್ 2025, 5:41 IST
<div class="paragraphs"><p>ಚಲ್ಡಿಗಾನಹಳ್ಳಿ ತೋಟದಿಂದ ಮಾರುಕಟ್ಟೆಗೆ ಕಳುಹಿಸಲು ಸಿದ್ಧವಾಗುತ್ತಿರುವ ಟೊಮೆಟೊ ರಾಶಿ</p></div>

ಚಲ್ಡಿಗಾನಹಳ್ಳಿ ತೋಟದಿಂದ ಮಾರುಕಟ್ಟೆಗೆ ಕಳುಹಿಸಲು ಸಿದ್ಧವಾಗುತ್ತಿರುವ ಟೊಮೆಟೊ ರಾಶಿ

   

ವೇಮಗಲ್: ಟೊಮೆಟೊ ಬೆಳೆದ ವೇಮಗಲ್ ಹೋಬಳಿ ರೈತರು ಅಕ್ಷರಶಃ ಕಣ್ಣೀರಿಡುವಂತಾಗಿದೆ. ತಿಂಗಳಿಂದ ಒಳ್ಳೆಯ ಬೆಲೆ ಸಿಗುತ್ತಿಲ್ಲ. ವಾತಾವರಣದಲ್ಲಿ ವ್ಯತ್ಯಯವಾಗಿದ್ದು ಬೆಳೆ ದಿಢೀರ್ ಕುಸಿದಿದೆ. ಬೆಳೆಗಾರರು ಕೆಂಪು ಸುಂದರಿಯನ್ನು ನಂಬಿಕೊಂಡು ನೆಲಕ್ಕೆ ಬೀಳುವಂತಾಗಿದೆ.

ವೇಮಗಲ್ ಹೋಬಳಿಯಾದ್ಯಂತ 130-160 ಹೆಕ್ಟೇರ್‌ ಟೊಮೆಟೊ ಬೆಳೆಯಲಾಗಿದೆ. ಕ್ಯಾಲನೂರು, ಸೀತಿ, ಮದ್ದೇರಿ, ಬೈರಂಡಹಳ್ಳಿ, ಚಲ್ಡಿಗಾನಹಳ್ಳಿ, ಕಡಗಟ್ಟೂರು, ಅಗ್ರಹಾರ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯಲಾಗಿದೆ. ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ 10-15 ದಿನಗಳ ಹಿಂದೆ 15ಕೆ.ಜಿ ತೂಕದ ಒಂದು ಬಾಕ್ಸ್ ಬೆಲೆ ₹750ರಿಂದ 850ಕ್ಕೆ ಮಾರಾಟವಾಗುತ್ತಿತ್ತು. ಆದರೆ, ಎರಡು ಮೂರು ದಿನಗಳಿಂದ ₹100 ರಿಂದ ₹200ಗೆ ಬೆಲೆ
ಕುಸಿಯುತ್ತಿದೆ.

ADVERTISEMENT

ಈ ಹಿಂದೆ ಕೋಲಾರ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ಟೊಮೆಟೊಗೆ ₹2,300 ರಿಂದ 2,600ವರೆಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಈಗ ನೆರೆಯ ರಾಷ್ಟ್ರಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಟೊಮೆಟೊ ಅವಕ ಕಡಿಮೆ ಇದೆ ಎನುತ್ತಾರೆ ವರ್ತಕರು.

ಕರ್ನಾಟಕದಲ್ಲಿ ಟೊಮೆಟೊಗೆ ಯಾವ ಕಾರಣಕ್ಕೆ ಬೆಲೆ ಸಿಗುತ್ತಿಲ್ಲವೋ ತಿಳಿಯುತ್ತಿಲ್ಲ. ಮೊದಲೆಲ್ಲ ಒಂದು ಬಾರಿ ಬೆಲೆ ಏರಿಕೆಯಾದರೆ ತಿಂಗಳುಗಟ್ಟಲೇ ಇರುತ್ತಿತ್ತು. ಆದರೆ, ಈಗ ಪ್ರತಿದಿನ ಬೆಲೆ ಕುಸಿಯುತ್ತಿದೆ. ಮಳೆ ಹಾಗೂ ವಿಪರೀತ ತಂಪು ವಾತಾವರಣ ಇರುವುದರಿಂದ ಟೊಮೆಟೊಗೆ ಬಿಳಿ ನೊಣ, ಅಂಗಮಾರಿ, ಸೊರಗು ರೋಗ ಹೀಗೆ ನಾನಾ ತರದ ರೋಗ
ಕಾಡಲಾರಂಭಿಸಿದೆ. 

ಕಳದೊಂದು ವರ್ಷದಿಂದ ಟೊಮೆಟೊ ಬೆಳೆಗೆ ಉತ್ತಮವಾದ ಬೆಲೆಯೇ ಸಿಕ್ಕಿಲ್ಲ. ಮೂರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದು ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಲಕ್ಷಾಂತರ ರೂಪಾಯಿ ಗೊಬ್ಬರ, ಔಷಧಿಗೆ ಖರ್ಚಾಗಿದೆ. ಹಾಕಿರುವ ಬಂಡವಾಳ ಸಿಗುವುದೇ ಅನುಮಾನ ಎನ್ನುತ್ತಾರೆ ಚಲ್ಡಿಗಾನಹಳ್ಳಿ ಪ್ರಗತಿಪರ ಯುವ ರೈತ ಆನಂದ್‌ ಗೌಡ. 

ಟೊಮೆಟೊ ಬೆಳೆಯಿಂದ ತಯಾರಿಸಲಾಗುವ ವಿವಿಧ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸುವುದರಿಂದ ಬೆಳೆಗಾರರಿಗೆ ಹೆಚ್ಚಿನ ಸಹಾಯ ನೀಡಿದಂತಾಗುತ್ತದೆ. ಕೈಗಾರಿಕಾ ಸ್ಥಾಪನೆಗಳಿಗೆ ಒಲವು ತೋರಿಸುತ್ತಿರುವ ಜಿಲ್ಲಾಡಳಿತ ಕೃಷಿ ಸಂಬಂಧಿಸಿದ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮ ಶಿವಣ್ಣ ಒತ್ತಾಯಿಸಿದ್ದಾರೆ.

ಟೊಮೆಟೊ ಬೆಳೆಗೆ ಸೊರಗು ರೋಗ ಬರುವ ಸಾಧ್ಯತೆ ಇದೆ. ಅಗತ್ಯ ಔಷೋಧಪಚಾರ ಕೈಗೊಳ್ಳಲು ರೈತರು ಇಲಾಖೆ ಸಂರ್ಪಕಿಸಬೇಕು
ಲಾವಣ್ಯ, ಸಹಾಯಕ ತೋಟಗಾರಿಕೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.