ಮಾಲೂರು: ನವರಾತ್ರಿ ಪ್ರಯುಕ್ತ ಪಟ್ಟಣದ ಕುಂಬಾರ ಪೇಟೆಯಲ್ಲಿರುವವಿಜಯಲಕ್ಷ್ಮಿ ಅವರ ಮನೆಯಲ್ಲಿ ಪ್ರತಿಷ್ಠಾಪಿಸಿರುವ ಮೈಸೂರು ಸಾಂಪ್ರದಾಯಿಕ ದಸರಾ ಬೊಂಬೆಗಳು ನೋಡುಗರ ಮನ ಸೆಳೆಯುತ್ತಿದೆ.
1950ರಿಂದಲೂ ಬೊಂಬೆಗಳನ್ನು ಕೂರಿಸುವ ಸಂಪ್ರದಾಯವನ್ನುಆಚರಿಸುತ್ತಿರುವ ವಿಜಯಲಕ್ಷ್ಮಿ ಲಕ್ಷ್ಮಿನಾರಾಯಣ್ ಅವರ ಮನೆಯಲ್ಲಿ ಈಗ ಸುಮಾರು 2ಸಾವಿರಕ್ಕೂ ಹೆಚ್ಚು ಗೊಂಬೆಗಳಿವೆ. ಗೊಂಬೆಗಳನ್ನು ಜೋಡಿಸುವುದರಲ್ಲಿ ಪತಿ ಮತ್ತು ಕುಟುಂಬದ ಉತ್ಸಾಹ ಮತ್ತು ಶ್ರದ್ಧೆ ಎದ್ದು ಕಾಣುತ್ತದೆ.
ಬೊಂಬೆಗಳ ಸಿಂಗಾರವಿಲ್ಲದೆ ನವರಾತ್ರಿ ಸಂಭ್ರಮವಿಲ್ಲ. ಪುರಾಣ–ವರ್ತಮಾನಗಳನ್ನು ಬೆಸೆಯುವ ಬೊಂಬೆಗಳು ಆಯುಧ ಪೂಜೆ ಮತ್ತು ವಿಜಯದಶಮಿಯ ಕತೆಗಳನ್ನಷ್ಟೇ ಹೇಳುವುದಿಲ್ಲ. ಬದಲಿಗೆ ಸಮಕಾಲೀನ ಜಗತ್ತಿನ ವ್ಯಾಖ್ಯಾನಕ್ಕೂ ಅವಕಾಶದ ಬಾಗಿಲುಗಳನ್ನು ತೆರೆಯುತ್ತವೆ. ಮಾಲೂರಿನಲ್ಲಿ ಬೊಂಬೆಗಳ ನವರಾತ್ರಿಯ ಸಂಭ್ರಮವೂಕಡಿಮೆ ಏನಿಲ್ಲ. ಕಣ್ಣು ಕೋರೈಸುವಂತೆ ಹೊಳೆಯದಿದ್ದರೂ, ಬೆಳದಿಂಗಳ ತಂಪಿನಂತೆ ಹತ್ತಾರು ಮನೆಗಳು ಬೊಂಬೆ ಮನೆಗಳಾಗಿ ಬದಲಾಗಿವೆ.
ಬೊಂಬೆಗಳ ಸಮ್ಮುಖದಲ್ಲಿ ನವರಾತ್ರಿಯ ಪೂಜೆ ರಂಗೇರಿದೆ. ಕುಂಬಾರ ಪೇಟೆಯಲ್ಲಿರುವ ವಿಜಯಲಕ್ಷ್ಮಿ ಲಕ್ಷ್ಮಿನಾರಾಯಣ್ ಮನೆಗೆ ಬಂದರೆ ಅಲ್ಲಿ ಬೊಂಬೆಗಳ ಲೋಕವೇ ಅನಾವರಣಗೊಂಡಿದೆ. ಭಾರತದ ಹಲವು ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ಸದ್ದಿಲ್ಲದೆ ಹೇಳುತ್ತವೆ. ಪುರಾಣಗಳಿಗೆ ಸಂಬಂಧಿಸಿದ ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಲೀಲೆ, ಗೀತೋಪದೇಶ, ಜಂಬೂಸವಾರಿ, ದಶಾವತಾರದ ಕಥನಗಳನ್ನು ಹೇಳುವ ಬೊಂಬೆಗಳ ಜೊತೆಗೆ, ತಿರುಪತಿಯ 9 ದಿನದ ಬ್ರಹ್ಮೋತ್ಸವ, ಭಾರತೀಯ ಸಮಾಜದ ಕುಟುಂಬ ಜೀವನದ ಚಕ್ರ, ವಿವಿಧ ರಾಜ್ಯಗಳ ಮಹಿಳೆಯರ ಉಡುಪು ವಿಶೇಷಗಳನ್ನು ತೋರುವ ಬೊಂಬೆಗಳಿವೆ.
ಕೈಗಾರಿಕೀಕರಣಕ್ಕೆ ತೆರೆದುಕೊಂಡಿರುವ ತಾಲ್ಲೂಕು ಇಂದು ಮತ್ತು 2025 ವೇಳೆಗೆ ಅದು ಬದಲಾಗಬಹುದಾದ ರೀತಿಯ ಕಲ್ಪನೆಯೂ ಬೊಂಬೆಗಳಲ್ಲಿ ಮೈ ತಳೆದಿದೆ. ಗ್ರಾಮ ಸಂಸ್ಕೃತಿ ಮರೆಯಾಗಿ ಕೈಗಾರಿಕಾ ಸಂಸ್ಕೃತಿವೈಭವೀಕರಿಸುವ ನಗರ ಜೀವನ ಶೈಲಿಯ ಕುರಿತು ಸ್ಪಷ್ಟ ಚಿತ್ರಣ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.