ಕೋಲಾರ: ಜಿಲ್ಲೆಯ ಕೆಲವೆಡೆ ಅನುಮತಿ ಇಲ್ಲದೇ ನಡೆಸುತ್ತಿರುವ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳಲ್ಲಿ ಅಕ್ರಮ ದಾಖಲಾತಿಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಸದಸ್ಯರು ಬುಧವಾರ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೆರವಣಿಗೆ ಮೂಲಕ ಡಿಡಿಪಿಐ ಕಚೇರಿಗೆ ತೆರಳಿದರು. ಎಲ್ಲಾ ಖಾಸಗಿ ಶಾಲೆಗಳ ನಾಮಫಲಕದಲ್ಲಿ ಶುಲ್ಕ ಮಾಹಿತಿ, ಸಿಬಿಎಸ್ಇ ಮತ್ತು ಐಸಿಎಸ್‌ಸಿ ಅನುಮೋದನೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಒತ್ತಾಯಿಸಿದರು.
ಸಮಿತಿ ರಾಜ್ಯಾಧ್ಯಕ್ಷ ಗಲ್‌ಪೇಟೆ ಕೆ.ಸಿ.ಸಂತೋಷ್ ಮಾತನಾಡಿ, ‘ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ನಡೆಸಲಾಗುತ್ತಿರುವ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳಲ್ಲಿ ಅಕ್ರಮ ದಾಖಲಾತಿ ಮಾಡಿಕೊಳ್ಳುತ್ತಿದೆ. ಪೋಷಕರಿಗೆ ಶಾಲೆಗಳ ಮಾಹಿತಿ ಕೊರತೆ ಇದೆ. ಶಾಲೆಯ ನಾಮಫಲಕಗಳಲ್ಲಿ ಮಾಹಿತಿ ಹಾಕಬೇಕೆಂದು ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದರೂ ಈವರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿಲ್ಲ’ ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿಬಿಎಸ್‌ಇ 25 ಶಾಲೆಗಳು ಹಾಗೂ ಐಸಿಎಸ್ಇ 10 ಶಾಲೆಗಳು ಮಾತ್ರ ಅನುಮತಿ ಪಡೆದುಕೊಂಡಿದ್ದು ಉಳಿದೆಲ್ಲಾ ಶಾಲೆಗಳು ಪೋಷಕರನ್ನು ವಂಚಿಸುತ್ತಿವೆ ಎಂದು ಆರೋಪಿಸಿ ಕ್ರಮ ಕೈಗೊಳ್ಳಲು ಡಿಡಿಪಿಐಗೆ ಮನವಿ ಸಲ್ಲಿಸಿದರು.
ಸಂಘಟನೆಯ ಯುವ ಘಟಕದ ರಾಜ್ಯ ಅಧ್ಯಕ್ಷ ರವಿ, ಜಿಲ್ಲಾ ಗೌರವಾಧ್ಯಕ್ಷ ಚಂಗಣ್ಣ, ಜಿಲ್ಲಾಧ್ಯಕ್ಷ ಟಮಕ ಶ್ರೀನಾಥ್, ಯುವ ಘಟಕದ ಅಧ್ಯಕ್ಷ ರಂಜಿತ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ನರಸಿಂಹರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸ್ವಾಮಿ, ಮುಖಂಡರಾದ ಕಿರಣ್ ಕುಮಾರ್, ವಿನೋದ್, ಅಮ್ಮು, ಕೆ.ನಟರಾಜ್, ವೆಂಕಟೇಶ್, ಮುನಿರಾಜು, ಜಗನ್ನಾಥ, ವಿಜಯಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.