ADVERTISEMENT

ಪಾದಯಾತ್ರೆ– 800 ಮಂದಿ ಭಾಗಿ ನಿರೀಕ್ಷೆ

ಸರ್ದಾರ್ @ 150 ಪ್ರಯುಕ್ತ ಕೋಲಾರದಲ್ಲಿ ನ.24ಕ್ಕೆ ಏಕತಾ ಪಾದಯಾತ್ರೆ ಆಯೋಜನೆ: ಸಂಸದ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:28 IST
Last Updated 13 ನವೆಂಬರ್ 2025, 6:28 IST
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಂಸದ ಎಂ.ಮಲ್ಲೇಶ್‌ ಬಾಬು ಮಾತನಾಡಿದರು. ಡಾ.ಮುನಿನಾರಾಯಣ, ರಾಜೇಶ್ ಕಾರಂತ್, ಸುಮಂತ್ ಕೆ.ವಿ., ರಾಜೇಶ್ ಸಿಂಗ್ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಂಸದ ಎಂ.ಮಲ್ಲೇಶ್‌ ಬಾಬು ಮಾತನಾಡಿದರು. ಡಾ.ಮುನಿನಾರಾಯಣ, ರಾಜೇಶ್ ಕಾರಂತ್, ಸುಮಂತ್ ಕೆ.ವಿ., ರಾಜೇಶ್ ಸಿಂಗ್ ಪಾಲ್ಗೊಂಡಿದ್ದರು    

ಕೋಲಾರ: ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದಲ್ಲಿ ರಾಷ್ಟ್ರೀಯ ಏಕತಾ ದಿನ -ಸರ್ದಾರ್ @ 150 ಏಕತಾ ಪಾದಯಾತ್ರೆಯನ್ನು ನ.24 ರಂದು ಆಯೋಜಿಸಲಾಗಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೇರಾ ಯುವ ಭಾರತ್ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಭಾರತ್- ಆತ್ಮ ನಿರ್ಭರ ಭಾರತ್ ಘೋಷಣೆಯಡಿ ಎಲ್ಲಾ ಯುವಕರನ್ನು ಸಂಘಟಿಸಲು ಸೂಚಿಸಿದ್ದಾರೆ’ ಎಂದರು.

ವಿಶ್ವದಲ್ಲಿಯೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ಹೊಂದಿದೆ. ಯುವಕರಿಗೆ ಭವಿಷ್ಯದಲ್ಲಿ ರಾಷ್ಟ್ರದ ನಿರ್ಮಾಣದ ಜವಾಬ್ದಾರಿ, ಏಕತೆ, ದೇಶ ಭಕ್ತಿ ಹಾಗೂ ರಾಷ್ಟ್ರ ಸದೃಢಗೊಳಿಸುವ ಕುರಿತು ಅರಿವು ಮೂಡಿಸುವ ದೆಸೆಯಲ್ಲಿ ಅ.6 ರಂದು ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡವೀಯಾ ಮೈ ಭಾರತ್ ಪೋರ್ಟಲ್‍ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಎಂದು ಹೇಳಿದರು.

ADVERTISEMENT

15 ರಿಂದ 29 ವರ್ಷದೊಳಗಿನ ಯುವಕರಿಗೆ ಸಾಮಾಜಿಕ ಮಾಧ್ಯಮದಲ್ಲಿ ರೀಲ್ ಸ್ಪರ್ಧೆ, ಪ್ರಬಂಧ ಸ್ಪರ್ಧೆಯನ್ನು ಮತ್ತು ಸರ್ದಾರ್ @ 150 ಯುವ ನಾಯಕರ ಕಾರ್ಯಕ್ರಮವನ್ನು ಮೈ ಭಾರತ್ ಪೋರ್ಟಲ್‌ ಮೂಲಕ ಅನ್‌ಲೈನ್‌ನಲ್ಲಿ ಆಯೋಜಿಸಲಾಗಿದೆ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸಲು 15ರೊಳಗೆ ನೋಂದಾಯಿಸಿಕೊಳ್ಳಬೇಕು. ಈ ಕುರಿತು ಪ್ರತಿ ಕಾಲೇಜಿಗೆ ಇ–ಮೇಲ್ ಮೂಲಕ ಮಾಹಿತಿ ನೀಡಲಾಗುವುದು. ಏಕತಾ ಪಾದಯಾತ್ರೆಯನ್ನು 24 ರಂದು ನಗರದ ಪ್ರವಾಸಿ ಮಂದಿರದಿಂದ ಡೂಮ್‌ಲೈಟ್ ಸರ್ಕಲ್, ಕ್ಲಾಕ್ ಟವರ್, ಹೊಸ ಬಸ್ ನಿಲ್ದಾಣ, ಕಾಳಮ್ಮ ಗುಡಿ ರಸ್ತೆ, ಚಂಪಕ್ ವೃತ್ತ ಮೂಲಕ ಗಾಂಧಿವನದವರೆಗೆ ಆಯೋಜಿಸಲಾಗಿದೆ ಎಂದು ಹೇಳಿದರು.

ಪ್ರತಿ ಕಾಲೇಜಿನಿಂದ 10 ವಿದ್ಯಾರ್ಥಿಗಳು ಸೇರಿದಂತೆ 800 ಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಇದರ ಪೂರ್ವಭಾವಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಟೀ ಶರ್ಟ್‌, ಕ್ಯಾಪ್, ಓಆರ್‌ಎಸ್‌ ಹಾಗೂ ಲಘು ಉಪಾಹಾರವನ್ನು ಆಯೋಜಕರು ವಿತರಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವಿವಿದ ಇಲಾಖೆಗಳ ಸಹಯೋಗದಲ್ಲಿ ಸ್ವಚ್ಛತಾ ಶ್ರಮದಾನ, ಯೋಗ ಮುಂತಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲಾ ಯುವಕರು ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಭಾರತ ದೃಷ್ಟಿಕೋನವನ್ನು ಗೌರವಿಸೋಣ ಎಂದು ಕರೆ ನೀಡಿದರು.

ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಕುಲಸಚಿವ ಡಾ.ಮುನಿನಾರಾಯಣ ಮಾತನಾಡಿ, ‘ಏಕತಾ ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಅಕಾಡೆಮಿಯ ಎನ್‌ಎಸ್‌ಎಸ್‌ ಘಟಕದಿಂದ 150 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಯುಜಿಸಿಯಿಂದಲೂ ನಮಗೆ ಸೂಚನೆ ಬಂದಿದೆ ಎಂದರು.

ಮೈ ಭಾರತ್ ಕಚೇರಿಯ ರಾಜೇಶ್ ಕಾರಂತ್ ಮಾತನಾಡಿ, ‘ಯುವಕರು ಸಾಮಾಜಿಕ ಮಾಧ್ಯಮದಲ್ಲಿ ರೀಲ್ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮೈ ಭಾರತ್ ಪೋರ್ಟಲ್‍ನಲ್ಲಿ ವಿವರ ಪಡೆಯಬಹುದಾಗಿದೆ. ದೇಶದ ಯಾವುದೇ ಭಾಷೆಯಲ್ಲಿ ಬರೆಯ‌ಬಹುದಾಗಿದೆ. 250 ಪದ ಮೀರಬಾರದು. ಆಯ್ಕೆಯಾದವರನ್ನು ದೆಹಲಿಯ ಪಾದಯಾತ್ರೆಗೆ ಕರೆದೊಯ್ದು ಪ್ರಮಾಣಪತ್ರ ವಿತರಿಸಲಾಗುವುದು. ವಿವರಗಳಿಗೆ ಸ್ಥಳೀಯ ಕಚೇರಿಯ ಮೊ: 9845407748 ಕರೆ ಮಾಡಿ ಸಂಪರ್ಕಿಸಬಹುದಾಗಿದೆ’ ಎಂದರು.

ಪಾದಯಾತ್ರೆಯಲ್ಲಿ ಸಂಸದ ಮಲ್ಲೇಶ್ ಬಾಬು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾತಿತ ಸಿಇಓ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಎನ್‌ಎಸ್‌ಎಸ್‌ ಸಂಯೋಜಕ ಸುಮಂತ್ ಕೆ.ವಿ. ಹಾಗೂ ಬಿಜೆಪಿ ಕಾರ್ಯದರ್ಶಿ ರಾಜೇಶ್ ಸಿಂಗ್ ಇದ್ದರು.

ದೆಹಲಿ ಪಾದಯಾತ್ರೆಗೆ 150 ಮಂದಿ

ಏಕತಾ ಪಾದಯಾತ್ರೆ ಜೊತೆಗೆ ಆನ್‌ಲೈನ್‌ನಲ್ಲಿ ವಿವಿಧ ಸ್ಪರ್ಧೆ ಆಯೋಜಿಸಿದ್ದು ರಾಜ್ಯದ ವಿವಿಧೆಡೆಯಿಂದ 150 ವಿಜೇತರು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಪಾದಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗುವುದು. ಜಿಲ್ಲೆಯಿಂದ 10 ಮಂದಿಯನ್ನು ಆಯ್ಕೆ ಮಾಡಿ ಕೊಳ್ಳಲಾಗುವುದು. ಅಲ್ಲದೇ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಮಲ್ಲೇಶ್‌ ಬಾಬು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.