ADVERTISEMENT

ವೈಕುಂಠ ಏಕಾದಶಿ: ದೇವಸ್ಥಾನದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 13:32 IST
Last Updated 6 ಜನವರಿ 2020, 13:32 IST
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಕೋಲಾರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಸ್ಥಾನದ ಬಳಿ ಸೋಮವಾರ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಕೋಲಾರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಸ್ಥಾನದ ಬಳಿ ಸೋಮವಾರ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.   

ಕೋಲಾರ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಮುಂಜಾನೆಯೇ ದೇವಸ್ಥಾನಗಳಿಗೆ ತೆರಳಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ದೊಡ್ಡಪೇಟೆಯ ವೆಂಕಟರಮಣಸ್ವಾಮಿ, ಅಮ್ಮವಾರಿಪೇಟೆಯ ವರದರಾಜಸ್ವಾಮಿ, ಕೋಟೆ ಬಡಾವಣೆಯ ಶಾರದಾ ಮಾತೆ ದೇವಾಲಯ, ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಭಕ್ತರ ದೊಡ್ಡ ದಂಡೇ ಕಂಡುಬಂತು. ವೆಂಕಟರಮಣಸ್ವಾಮಿ ದೇವಸ್ಥಾನದ ಬಳಿ ಭಕ್ತರು ದೇವರ ದರ್ಶನಕ್ಕೆ ನಸುಕಿನಿಂದಲೇ ಸಾಲುಗಟ್ಟಿ ನಿಂತಿದ್ದರು.

ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯ­ಗಳನ್ನು ತೋರಣ, ವಿದ್ಯುತ್ ದೀಪ ಮತ್ತು ಹೂವುಗಳಿಂದ ಸಿಂಗರಿಸಲಾಗಿತ್ತು. ವೆಂಕಟರಮಣಸ್ವಾಮಿ ಉತ್ಸವ ಮೂರ್ತಿಯನ್ನು ಮುಖ್ಯದ್ವಾರದಲ್ಲಿ ಉಯ್ಯಾಲೆಯಲ್ಲಿ ಇಟ್ಟು ಅದರ ಕೆಳಗೆ ಭಕ್ತರು ಹಾದು ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ವರದರಾಜಸ್ವಾಮಿ ದೇವಾಲಯದಲ್ಲಿ ದೇವರಿಗೆ ಅಂಬೆಗಾಲು ಕೃಷ್ಣ, ಗೋವರ್ಧನ ಗಿರಿಧಾರಿ ಮತ್ತು ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.

ADVERTISEMENT

ಬೆಳಿಗ್ಗೆ ಅಭಿಷೇಕ, ಘಂಟಾನಾದ, ಸುಪ್ರಭಾತ, ಗೋಪೂಜೆ, ವೈಕುಂಠ­ದ್ವಾರ ಪ್ರವೇಶ ಏರ್ಪಡಿಸ­ಲಾಗಿತ್ತು. ವಜ್ರ ಕವಚಧಾರಣೆ ಮತ್ತು ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ವೈಕುಂಠ ಏಕಾದಶಿ ದಿನ ವೆಂಕಟರಮಣಸ್ವಾಮಿಯ ದರ್ಶನ ಪಡೆದು ವೈಕುಂಠ ದ್ವಾರದ ಮೂಲಕ ಹೋದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಏಕಾದಶಿ ದಿನ ಸ್ವರ್ಗದಲ್ಲಿ ವೈಕುಂಠದ ಬಾಗಿಲು ತೆರೆದಿರುತ್ತದೆ. ಈ ದಿನ ಅತ್ಯಂತ ಪವಿತ್ರ ಎಂಬ ನಂಬಿಕೆ ಜನರಲ್ಲಿ ಬೇರೂರಿದೆ.

ಹೀಗಾಗಿ ಹಲವು ದೇವಾಲಯಗಳಲ್ಲಿ ಹೂವುಗಳಿಂದ ವೈಕುಂಠ ಪ್ರವೇಶದ್ವಾರದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಈ ದ್ವಾರದ ಮೂಲಕ ದೇವಸ್ಥಾನ ಪ್ರವೇಶಿಸಿದರು. ದೇವಸ್ಥಾನಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.