ADVERTISEMENT

ವೇಮಗಲ್‌ನಲ್ಲಿ ಹೆಲಿಕಾಪ್ಟರ್‌ ಜೋಡಣಾ ಘಟಕ: 2027ಕ್ಕೆ ಮೊದಲ ಹೆಲಿಕಾಪ್ಟರ್‌ ಸಿದ್ಧ

ವರ್ಷಕ್ಕೆ 10 ಕಾಪ್ಟರ್‌ ಜೋಡಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 23:30 IST
Last Updated 17 ಫೆಬ್ರುವರಿ 2026, 23:30 IST
<div class="paragraphs"><p>ಕೋಲಾರ ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ನಿರ್ಮಿಸಿರುವ ಏರ್‌ಬಸ್‌ ಎಚ್‌ 125 ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕದ ಉದ್ಘಾಟನೆ ಬಳಿಕ ಏರ್‌ಬಸ್‌ ಎಚ್‌ 125 ಹೆಲಿಕಾಪ್ಟರ್‌ ಮುಂದೆ ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್‌ ವಾಟ್ರಿನ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕಾಣಿಸಿಕೊಂಡರು</p></div>

ಕೋಲಾರ ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ನಿರ್ಮಿಸಿರುವ ಏರ್‌ಬಸ್‌ ಎಚ್‌ 125 ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕದ ಉದ್ಘಾಟನೆ ಬಳಿಕ ಏರ್‌ಬಸ್‌ ಎಚ್‌ 125 ಹೆಲಿಕಾಪ್ಟರ್‌ ಮುಂದೆ ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್‌ ವಾಟ್ರಿನ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಕಾಣಿಸಿಕೊಂಡರು

   

ಕೋಲಾರ: ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ (ಟಿಎಎಸ್‌ಎಲ್‌) ನಿರ್ಮಿಸಿರುವ ‘ಏರ್‌ಬಸ್‌ ಎಚ್‌ 125’ ಲಘು ಹೆಲಿಕಾಪ್ಟರ್‌ನ ಜೋಡಣಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌ ಮಂಗಳವಾರ ಚಾಲನೆ ನೀಡಿದರು.

ಮುಂಬೈನಿಂದ ವರ್ಚುವಲ್‌ ವೇದಿಕೆ ಮೂಲಕ ಚಾಲನೆ ನೀಡಿದ್ದು, ವೇಮಗಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರಿನ್‌ ವಾಟ್ರಿನ್ ಇದಕ್ಕೆ ಸಾಕ್ಷಿಯಾದರು.

ADVERTISEMENT

ಉಭಯ ರಕ್ಷಣಾ ಸಚಿವರು ಇದೇ ಸಂದರ್ಭದಲ್ಲಿ ಒಟ್ಟು ₹ 405 ಕೋಟಿ ವೆಚ್ಚದಲ್ಲಿ 17 ಎಕರೆ ಪ್ರದೇಶದಲ್ಲಿ ತಲೆಎತ್ತಿರುವ ಘಟಕದಲ್ಲಿ ಸುತ್ತಾಡಿ ಸೌಲಭ್ಯವನ್ನು ವೀಕ್ಷಿಸಿದರು. 

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನ ಸಿಇಒ ಸುಕರಣ್ ಸಿಂಗ್ ಮಾತನಾಡಿ, ದೇಶದ ರಕ್ಷಣಾ ಇಲಾಖೆಗೆ ಅಗತ್ಯವಿದ್ದಾಗ ಹೆಲಿಕಾಪ್ಟರ್ ಪೂರೈಸಲು ನಾವು ಸಿದ್ಧವಿದ್ದೇವೆ ಎಂದರು.

ಖಾಸಗಿ ವಲಯದಲ್ಲಿ ದೇಶದ ಮೊದಲ ಹೆಲಿಕಾಪ್ಟರ್‌ ಜೋಡಣಾ ಘಟಕ ಇದಾಗಿದೆ. 2027ರ ಆರಂಭದಲ್ಲಿ ಮೊದಲ ಹೆಲಿಕಾಪ್ಟರ್‌ ಹೊರಬರಲಿದೆ. ನಂತರ ವಾರ್ಷಿಕ 10 ಹೆಲಿಕಾಪ್ಟರ್‌ ಜೋಡಣೆ ಆಗಲಿದೆ. 20 ವರ್ಷಗಳಲ್ಲಿ ಸುಮಾರು 500 ಹೆಲಿಕಾಪ್ಟರ್‌ ಸಿದ್ಧವಾಗಲಿವೆ. ಈ ಮೂಲಕ ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಭಾರತ ಮಹತ್ವದ ಹೆಜ್ಜೆ ಇರಿಸಿದೆ.

ಈ ಘಟಕದಲ್ಲಿ ಟಾಟಾ ಹಾಗೂ ಫ್ರಾನ್ಸ್‌ನ ಏರ್‌ಬಸ್‌ ಸಹಭಾಗಿತ್ವದಲ್ಲಿ ಏಕ ಎಂಜಿನ್‌ನ ಎಚ್‌ 125 ಲಘು ಹೆಲಿಕಾಪ್ಟರ್‌ಗೆ ಅಂತಿಮ ಸ್ಪರ್ಶ ನೀಡಿ ಹಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ಗುಣಮಟ್ಟದ ಪರೀಕ್ಷೆ ನಡೆಯಲಿದೆ. ದುರಸ್ತಿ, ನಿರ್ವಹಣೆಗೆ ಒತ್ತು ನೀಡಲಿದ್ದು, ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.

ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು, ರಾಜ್ಯದ ಬೃಹತ್ ಹಾಗೂ ಮಾಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಸಂಸದ ಎಂ.ಮಲ್ಲೇಶ್ ಬಾಬು, ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್ ಎ.ಪಿ.ಸಿಂಗ್‌, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ಏರ್‌ಬಸ್‌ ಹೆಲಿಕಾಪ್ಟರ್‌  ಸಿಇಒ  ಬ್ರೂನೋ ಈವನ್, ಜಿಲ್ಲಾಧಿಕಾರಿ ಎಂ.ಆರ್‌.ರವಿ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ ಹಾಗೂ ಏರ್‌ಬಸ್‌ನ ಅಧಿಕಾರಿಗಳು ಭಾಗವಹಿಸಿದ್ದರು.

ಏರ್‌ಬಸ್‌ ಎಚ್‌ 125 ಹೆಲಿಕಾಪ್ಟರ್‌

ವೈಮಾನಿಕ ಕ್ಷೇತ್ರದಲ್ಲಿ ಭಾರತದ ಮತ್ತೊಂದು ಮಹತ್ವದ ಹೆಜ್ಜೆ ಟಾಟಾ ಹಾಗೂ ಏರ್‌ಬಸ್‌ ಸಂಸ್ಥೆಗಳ ಸಹಭಾಗಿತ್ವ ಖಾಸಗಿ ವಲಯದಲ್ಲಿ ದೇಶದ ಮೊದಲ ಹೆಲಿಕಾಪ್ಟರ್‌ ಜೋಡಣೆ ಘಟಕ

₹1 ಸಾವಿರ ಕೋಟಿಗೂ ಅಧಿಕ ಹೂಡಿಕೆ

ಹೆಲಿಕಾಪ್ಟರ್‌ ಜೋಡಣಾ ಘಟಕ ಸ್ಥಾಪನೆಗೆ ₹ 1 ಸಾವಿರ ಕೋಟಿಗೂ ಅಧಿಕ ಹೂಡಿಕೆ ಆಗುವ ನಿರೀಕ್ಷೆ ಇದೆ. ಕೌಶಲ ಹಾಗೂ ಶ್ರಮಿಕ ಯುವಜನತೆಗೆ ಉದ್ಯೋಗಾವಕಾಶ ದೊರಕಲಿವೆ. ರಕ್ಷಣಾ ರಫ್ತು ಕ್ಷೇತ್ರಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು. ರಕ್ಷಣಾ ರಫ್ತು ಕ್ಷೇತ್ರದಲ್ಲಿ ಭಾರತ ಇತ್ತೀಚಿನ ದಿನಗಳಲ್ಲಿ ವಿಶ್ವದ ಅಗ್ರಮಾನ್ಯ ದೇಶಗಳ ಸಾಲಿಗೆ ಸೇರಿದೆ.  ಈಗ ಖಾಸಗಿ ವಲಯದ ಪಾಲು ರಕ್ಷಣಾ ಉತ್ಪಾದನೆಯಲ್ಲಿ ಶೇ 25ರಷ್ಟು ಇದೆ. ಭಾರತ ಹಾಗೂ ಫ್ರಾನ್ಸ್‌ ನಡುವಿನ ಸಂಬಂಧಕ್ಕೆ ಯಾವುದೇ ಮಿತಿ ಇಲ್ಲ ಎಂದರು.

ಕರ್ನಾಟಕ ದೇಶದ ವೈಮಾನಿಕ ರಾಜಧಾನಿ

‘ಹೆಲಿಕಾಪ್ಟರ್‌ ಅಂತಿನ ಜೋಡಣಾ ಘಟಕಕ್ಕೆ ರಾಜ್ಯ ಸರ್ಕಾರ 17 ಎಕರೆ ಜಾಗ ನೀಡಿದ್ದು ಒಂದೂವರೆ ವರ್ಷದಲ್ಲಿ ಘಟಕ ತಲೆಎತ್ತಿದೆ. ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಇದು ಸಾಕ್ಷಿ. ಕರ್ನಾಟಕ ವೈಮಾನಿಕ ಕ್ಷೇತ್ರದಲ್ಲಿ ದೇಶದ ರಾಜಧಾನಿಯಾಗಿ ಮುಂದುವರಿಯಲಿದೆ’ ಎಂದು ಬೃಹತ್ ಹಾಗೂ ಮಾಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ಆಂಧ್ರಪ್ರದೇಶ ಉತ್ತರ ಪ್ರದೇಶ ಗುಜರಾತ್‌ನ ಪೈಪೋಟಿ ಎದುರಿಸಿ ರಾಜ್ಯಕ್ಕೆ ಈ ಯೋಜನೆ ಸಿಕ್ಕಿದೆ. ಈ ಘಟಕದಲ್ಲಿ ಏವಿಯಾನಿಕ್ಸ್‌ ಹೈಡ್ರಾಲಿಕ್‌ ಸರ್ಕೀಟ್‌ ಬಿಡಿಭಾಗ ಇಂಧನ ವ್ಯವಸ್ಥೆ ಮತ್ತು ಎಂಜಿನ್‌ ತಯಾರಿಕೆ ಸೇರಿ ಮಹತ್ವದ ಚಟುವಟಿಕೆ ನಡೆಯಲಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.