ಕೋಲಾರ: ಬಹಳ ಕುತೂಹಲ ಮೂಡಿಸಿರುವ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಗೆ ಭಾನುವಾರ ಚುನಾವಣೆ ನಡೆಯಲಿದ್ದು, ಒಟ್ಟು 51 ಅಭ್ಯರ್ಥಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ಆಡಳಿತರೂಢ ಕಾಂಗ್ರೆಸ್ ಸರ್ಕಾರ ಹಾಗೂ ಪ್ರಮುಖ ಪ್ರತಿಪಕ್ಷಗಳಾಗಿರುವ ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಒಟ್ಟು 17 ವಾರ್ಡ್‌ಗಳಿದ್ದು ಎಲ್ಲ ಸ್ಥಾನಗಳಿಗೆ ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ಚುನಾವಣೆ ಘೋಷಣೆಗೆ ಮುಂಚಿನಿಂದ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ಸಿದ್ಧತೆಗಳು ನಡೆದಿವೆ. ಅದರಲ್ಲೂ ಚುನಾವಣೆ ಘೋಷಣೆ ಆದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಕಂದಾಯ ಸಚಿವ ಕೃಷ್ಣಬೈರೇಗೌಡ ಬಂದು ಪ್ರಚಾರ ನಡೆಸಿ ಹೋಗಿದ್ದಾರೆ. ಇನ್ನುಳಿದಂತೆ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಗೂ ಸ್ಥಳೀಯ ಮುಖಂಡರು ವಾರ್ಡ್‌ಗಳನ್ನು ಸುತ್ತಾಡಿ ಮತಬೇಟೆಯಲ್ಲಿ ತೊಡಗಿದ್ದರು.
ಎಂದಿನಂತೆ ಐದು ಗ್ಯಾರಂಟಿಗಳ ಹೆಸರಿನಲ್ಲೇ ಕಾಂಗ್ರೆಸ್ ಮತಯಾಚಿಸಿದ್ದು, ಮತದಾರರು ಮತ್ತೆ ‘ಕೈ’ಹಿಡಿಯುವರೇ ಎಂಬ ಕುತೂಹಲವಿದೆ.
‘17ಕ್ಕೆ 17 ಸ್ಥಾನವನ್ನೂ ನಾವು ಗೆದ್ದು ಅಧಿಕಾರ ಹಿಡಿಯುತ್ತೇವೆ. ಗ್ಯಾರಂಟಿಗಳು ನಮ್ಮ ಕೈಹಿಡಿಯಲಿವೆ. ಕಾಂಗ್ರೆಸ್ ಈ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ’ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಇನ್ನು ಮೈತ್ರಿಪಕ್ಷ ಬಿಜೆಪಿ–ಜೆಡಿಎಸ್‌ಗೆ ಇದು ಮತ್ತೊಂದು ಪರೀಕ್ಷೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಮಣಿಸಿದ್ದ ಈ ಪಕ್ಷಗಳು ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿ ಹಿಡಿಯಲು ಎದುರು ನೋಡುತ್ತಿವೆ.
ಟಿಕೆಟ್ ಹಂಚಿಕೆಯಲ್ಲಿ ತುಸು ಅಸಮಾಧಾನ ಈ ಪಕ್ಷಗಳಲ್ಲಿ ಕಾಣಿಸಿಕೊಂಡಿತ್ತು. ಈ ಹಗ್ಗಜಗ್ಗಾಟದಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಏಕೆಂದರೆ ಬಿಜೆಪಿ 9 ಸ್ಥಾನಗಳಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರೆ, ಜೆಡಿಎಸ್‌ಗೆ ಕೇವಲ 8 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಸೇರಿದಂತೆ ಹಲವರು ಪಟ್ಟಣ ಪಂಚಾಯಿತಿ ಸುತ್ತಾಡಿ ಮತಯಾಚಿಸಿದ್ದಾರೆ.
ಮೈತ್ರಿ ಪಕ್ಷದವರು ಗ್ಯಾರಂಟಿ ಯೋಜನೆ ಟೀಕಿಸುತ್ತಾ, ಶೂನ್ಯ ಅಭಿವೃದ್ಧಿ ಎಂದು ಆರೋಪಿಸುತ್ತ ಪ್ರಚಾರ ಮಾಡಿದ್ದಾರೆ.
‘12ರಿಂದ 13 ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಹೀಗಾಗಿ, ನಾವು ಅಧಿಕಾರ ಹಿಡಿಯುತ್ತೇವೆ’ ಎಂದು ಸಂಸದ ಮಲ್ಲೇಶ್ ಬಾಬು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಕೂಡ ಈ ಬಾರಿ ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಿದೆ. ಈ ಪಕ್ಷದ ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳೀಯವಾಗಿ ಎಎಪಿ ಜಿಲ್ಲಾಧ್ಯಕ್ಷ ವೆಂಕಟಾಚಲಪತಿ ಹಾಗೂ ರಾಜ್ಯ ಕಾರ್ಯದರ್ಶಿ ಸುರೇಶ್ ನೇತೃತ್ವದಲ್ಲಿ ಪ್ರಚಾರ ನಡೆಸಿದ್ದಾರೆ. ಈ ಪಕ್ಷದ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನುಳಿದಂತೆ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆಯೊಡ್ಡಿದ್ದಾರೆ.
ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡ ಮೇಲೆ ಮೊದಲ ಬಾರಿ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಬಹಳ ಕುತೂಹಲ ಮೂಡಿಸುತ್ತಿದೆ.
5 ವಾರ್ಡ್‌ಗಳಲ್ಲಿ ನೇರ ಹಣಾಹಣಿ ಇದೆ. 9 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಹಾಗೂ ಇನ್ನುಳಿದ 3 ವಾರ್ಡ್‌ಗಳಲ್ಲಿ 4 ಮತ್ತು 5 ಜನ ಅಭ್ಯರ್ಥಿಗಳಂತೆ ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಬೆಂಬಲಿಗ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಮತದಾನಕ್ಕಾಗಿ ರಾಜ್ಯ ಚುನಾವಣಾ ಆಯೋಗದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸಲಾಗುತ್ತದೆ. ಈ ಚುನಾವಣೆಯಲ್ಲೀ ‘ನೋಟಾ’ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಒಟ್ಟು 22 ಮತಗಟ್ಟೆ; 100 ಸಿಬ್ಬಂದಿ
ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ 17 ವಾರ್ಡ್‌ಗಳಿದ್ದು 22 ಮತಗಟ್ಟೆ ಸ್ಥಾಪಿಸಲಾಗಿದೆ. ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಒಟ್ಟು 100 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ನಾಲ್ವರು ಸಿಬ್ಬಂದಿ ಇರುತ್ತಾರೆ. ಜೊತೆಗೆ ಮೂರರಿಂದ ನಾಲ್ವರು ಪೊಲೀಸರು ಇರುತ್ತಾರೆ. ಮತ ಎಣಿಕೆಯು ಆ.20ರ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಕೋಲಾರದ ಬಾಲಕಿಯರ ಸರ್ಕಾರಿ ಜೂನಿಯ್ ಕಾಲೇಜಿನಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಎಸ್‌ಪಿ ವೀಕ್ಷಣೆ
ಕೋಲಾರ ನಗರದ ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಮಸ್ಟರಿಂಗ್ ನಡೆಯಿತು. ಚುನಾವಣಾ ಸಿಬ್ಬಂದಿ ಇವಿಎಂಗಳೊಂದಿಗೆ ಮಧ್ಯಾಹ್ನ ವೇಮಗಲ್‌ಗೆ ತೆರಳಿದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ನೀಡಿ ಅಂತಿಮ ಸಿದ್ಧತೆ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್.ಮಂಗಳಾ ತಹಶೀಲ್ದಾರ್ ಡಾ.ನಯನಾ ಕಂದಾಯ ನಿರೀಕ್ಷಿಕ ರಾಜೇಂದ್ರ ಪ್ರಸಾದ್ ಸ್ಥಳದಲ್ಲಿದ್ದು ಚುನಾವಣಾ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿದರು. ಇನ್ನು ಚುನಾವಣೆಗೆ ಭದ್ರತೆ ಒದಗಿಸಲಿರುವ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಲಹೆ ಸೂಚನೆ ನೀಡಿದರು. ಎಎಸ್‌ಪಿ ರವಿಶಂಕರ್ ಹಾಗೂ ಡಿವೈಎಸ್ಪಿ ಎಂ.ಎಚ್.ನಾಗ್ತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.