ADVERTISEMENT

ಆರ್ಯವೈಶ್ಯ ಮಹಾಸಭಾದಿಂದ 22ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭ

ಜಿಲ್ಲಾ ಸಂಘದ ಅಧ್ಯಕ್ಷ ರಾಮಪ್ರಸಾದ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 12:12 IST
Last Updated 18 ಸೆಪ್ಟೆಂಬರ್ 2019, 12:12 IST

ಕೋಲಾರ: ‘ನಗರದಲ್ಲಿ ಸೆ.21ರಂದು ವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಹಾಗೂ ಸೆ.22ರಂದು ರಾಜ್ಯ ಆರ್ಯವೈಶ್ಯ ಮಹಾಸಭಾದ 10ನೇ ವರ್ಷದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ’ ಎಂದು ಜಿಲ್ಲಾ ಆರ್ಯವೈಶ್ಯ ಸಂಘದ ಅಧ್ಯಕ್ಷ ಕೆ.ವಿ.ರಾಮಪ್ರಸಾದ್ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಆರ್ಯವೈಶ್ಯ ಮಹಾಸಭಾ 9 ವರ್ಷದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಿದೆ. ನಗರದಲ್ಲಿ ಆಯೋಜನೆಯಾಗಿರುವ 10ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುತ್ತಾರೆ’ ಎಂದರು.

‘ಜೂನಿಯರ್ ಕಾಲೇಜು ಮೈದಾನದಲ್ಲಿ 2 ದಿನ ಕಾರ್ಯಕ್ರಮ ನಡೆಯಲಿದೆ. ಸೆ.21ರಂದು ಸಂಜೆ ದೇವರ ಸಂಕೀರ್ತನೆ ಹಾಗೂ ನೃತ್ಯ ಪ್ರದರ್ಶನವಿದೆ. ತಿರುಮಲ ತಿರುಪತಿ ದೇವಸ್ಥಾನ ವತಿಯಿಂದ ಕಲ್ಯಾಣೋತ್ಸವ ಹಾಗೂ ಅನ್ನಮಯ್ಯ ವೃಂದದಿಂದ ಅನ್ನಮಯ್ಯ ಸಂಕೀರ್ತನೆ ನಡೆಯುತ್ತದೆ. ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ಆರ್‌.ರಮೇಶ್‌ಕುಮಾರ್, ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಎಂ.ರೂಪಕಲಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭಾಗವಹಿಸುತ್ತಾರೆ’ ಎಂದು ವಿವರಿಸಿದರು.

ADVERTISEMENT

ಮೆರವಣಿಗೆ: ‘ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ನಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳ ಮೆರವಣಿಗೆಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಚಾಲನೆ ನೀಡುತ್ತಾರೆ. ಜಿಲ್ಲಾಧಿಕಾರಿ ಜೆ.ಮಂಜುನಾಥ್ ಧ್ವಜಾರೋಹಣ ನೆರವೇರಿಸುತ್ತಾರೆ. ಆರ್ಯವೈಶ್ಯ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ರವಿಶಂಕರ್ ಹಾಗೂ ಪ್ರತಿಭೋತ್ಸವ ಸಮಿತಿ ಅಧ್ಯಕ್ಷ ಕೆ.ವಿ.ರಾಮ್‌ಪ್ರಸಾದ್ ಅಧ್ಯಕ್ಷತೆ ವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಕನ್ನಿಕಾ ಪರಮೇಶ್ವರಿ ದೇವರ ಮೂರ್ತಿ ಹೊತ್ತ ಅಂಬಾರಿ, ಕುದುರೆ, ಒಂಟೆ, ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. 900ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳ್ಳಿ ಪಲ್ಲಕ್ಕಿ ರಥದಲ್ಲಿ ಮೆರವಣಿಗೆ ಮಾಡಲಾಗುವುದು. ಕಠಾರಿಪಾಳ್ಯ ಸರ್ಕಾರಿ ಶಾಲೆಯಿಂದ ಆರಂಭವಾಗುವ ಮೆರವಣಿಗೆ ಜೂನಿಯರ್ ಕಾಲೇಜು ಮೈದಾನ ತಲುಪುತ್ತದೆ’ ಎಂದು ಹೇಳಿದರು.

ಸಂಧ್ಯಾಶ್ರೀ ಯೋಜನೆ: ‘ಆರ್ಯವೈಶ್ಯ ಜನಾಂಗದಲ್ಲಿನ 65 ವರ್ಷ ಮೀರಿದ ಕಡು ಬಡವರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಸಿ.ಎಸ್‌.ಅಶ್ವತ್ಥನಾರಾಯಣ ಸಂಧ್ಯಾಶ್ರೀ ಯೋಜನೆಗೆ ಚಾಲನೆ ನೀಡುತ್ತಾರೆ. ಈ ಯೋಜನೆಯ ಫಲಾನುಭವಿಗಳಿಗೆ ತಿಂಗಳಿಗೆ ₹ 1,500 ಗೌರವ ಮಾಸಾಶನ ಸಿಗಲಿದೆ. ಈ ಉದ್ದೇಶಕ್ಕಾಗಿ ರಾಜ್ಯ ಆರ್ಯವೈಶ್ಯ ಮಹಾಸಭಾ ₹ 1.50 ಕೋಟಿ ಮೀಸಲಿಟ್ಟಿದೆ’ ಎಂದು ವಿವರಿಸಿದರು.

ಜಿಲ್ಲಾ ಆರ್ಯವೈಶ್ಯ ಸಂಘದ ಪದಾಧಿಕಾರಿಗಳಾದ ವೈ.ಆರ್.ಶಿವಪ್ರಕಾಶ್, ಎನ್.ಸಿ.ಸತೀಶ್, ದೇವರಾಜ್, ಬಿ.ಎಲ್.ವೆಂಕಟೇಶ್, ಎಂ.ಆರ್.ಆನಂದ, ಬಿ.ರಮೇಶ್‌ಮೂರ್ತಿ, ವೆಂಕಟೇಶ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.