ADVERTISEMENT

ವಿವೇಕಾನಂದರ ಜಯಂತಿಗೆ ಮೀನಮೇಷ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 14:41 IST
Last Updated 25 ಜನವರಿ 2019, 14:41 IST

ಕೋಲಾರ: ‘ರಾಜ್ಯ ಸರ್ಕಾರ ಎಲ್ಲರ ವಿರೋಧದ ನಡುವೆ ಟಿಪ್ಪು ಜಯಂತಿ ಆಚರಿಸುತ್ತದೆ. ಆದರೆ, ಇಡೀ ಜಗತ್ತು ಮೆಚ್ಚಿರುವ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲು ಮೀನಮೇಷ ಎಣಿಸುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಿಡಿಕಾರಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿವೇಕಾನಂದ ಅವರಂತಹ ಮಹನೀಯರ ಜಯಂತಿ ವಿಚಾರವಾಗಿ ಹಗುರವಾಗಿ ಮಾತನಾಡುವುದು ಸರ್ಕಾರಕ್ಕೆ ಶೋಭೆಯಲ್ಲ. ಇದರಿಂದ ಹಿಂದೂ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ. ಸರ್ಕಾರ ತಡ ಮಾಡದೆ ಪ್ರತಿ ವರ್ಷದಂತೆ ಅದ್ಧೂರಿಯಾಗಿ ಜಯಂತಿ ಆಚರಿಸಬೇಕು’ ಎಂದರು.

‘ಕೆ.ಸಿ ವ್ಯಾಲಿ ಯೋಜನೆಗೆ ನಮ್ಮ ವಿರೋಧವಿಲ್ಲ. ಪಕ್ಷ ಬೇರೆಯಾಗಿರಬಹುದು. ಆದರೆ, ಯೋಜನೆ ವಿಚಾರದಲ್ಲಿ ಒಂದೇ ಆಗಿರುತ್ತೇವೆ. ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, 3ನೇ ಹಂತದಲ್ಲಿ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕು. ಸರ್ಕಾರ ರಾಜಕೀಯ ಮಾಡುವುದು ಬಿಟ್ಟು ನೀರಿನ 3ನೇ ಹಂತದ ಸಂಸ್ಕರಣೆಗೆ ನಿರ್ಧಾರ ಕೈಗೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ADVERTISEMENT

‘ಜಿಲ್ಲೆಯ ಜನರ ಭವಿಷ್ಯದ ದೃಷ್ಟಿಯಿಂದ ಹೈಕೋರ್ಟ್‌ ಈ ಹಿಂದೆ ಕೆ.ಸಿ ವ್ಯಾಲಿ ನೀರು ಹರಿಸದಂತೆ ತಡೆಯಾಜ್ಞೆ ನೀಡಿತ್ತು. ಈಗ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದೆ. ಸರ್ಕಾರ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.