ADVERTISEMENT

ಬರದ ಜಿಲ್ಲೆಯಲ್ಲಿ ನೀರು ಅಮೃತಕ್ಕೆ ಸಮ

ವಿಶ್ವ ಜಲ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 13:53 IST
Last Updated 22 ಮಾರ್ಚ್ 2019, 13:53 IST
ಜಿಲ್ಲಾಡಳಿತವು ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಯ ಭಾಗವಾಗಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಅಧಿಕಾರಿಗಳು ವೇಣುಗೋಪಾಲಸ್ವಾಮಿ ಪುಷ್ಕರಣಿ ಸ್ವಚ್ಛಗೊಳಿಸಿದರು.
ಜಿಲ್ಲಾಡಳಿತವು ಕೋಲಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಯ ಭಾಗವಾಗಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಅಧಿಕಾರಿಗಳು ವೇಣುಗೋಪಾಲಸ್ವಾಮಿ ಪುಷ್ಕರಣಿ ಸ್ವಚ್ಛಗೊಳಿಸಿದರು.   

ಕೋಲಾರ: ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವ ಮೂಲಕ ಸಮಸ್ಯೆ ನಿವಾರಣೆಗೆ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಮಂಜುನಾಥ್ ಮನವಿ ಮಾಡಿದರು.

ಜಿಲ್ಲಾಡಳಿತವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿ, ‘ನೀರಿಲ್ಲದೆ ಕಷ್ಟ ಅನುಭವಿಸುತ್ತಿರುವ ಜಿಲ್ಲೆಯ ಜನರಿಗೆ ನೀರಿನ ಮಹತ್ವ ಏನೆಂದು ಗೊತ್ತಿದೆ. ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ನೀರು ಅಮೃತಕ್ಕೆ ಸಮ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯ ಜನಸಂಖ್ಯೆ 17 ಲಕ್ಷವಿದೆ. ಜನಸಂಖ್ಯೆಯ ಬೇಡಿಕೆಗೆ ಅನುಗುಣವಾಗಿ ನೀರು ಒದಗಿಸಲು ಶಾಶ್ವತ ನೀರಿನ ವ್ಯವಸ್ಥೆಯಿಲ್ಲ. ಸಣ್ಣ ನೀರಾವರಿ ಇಲಾಖೆಯ 138 ಕೆರೆಗಳು ಸೇರಿ 2,448 ಕೆರೆಗಳಿದ್ದರೂ ನೀರಿಲ್ಲ. ಹಿಂದಿನ 15 ವರ್ಷಗಳಲ್ಲಿ ಜಿಲ್ಲೆಯು 12 ವರ್ಷ ಬರಗಾಲಕ್ಕೆ ತುತ್ತಾಗಿದೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 746 ಮಿಲಿ ಮೀಟರ್‌ ಇದ್ದು, ಜನರು ಮಳೆ ನೀರು ಸಂರಕ್ಷಿಸಿ ಅಂತರ್ಜಲ ವೃದ್ಧಿಸಬೇಕು. ಪ್ರತಿ ಹನಿ ಮಳೆ ನೀರನ್ನು ಸಂರಕ್ಷಿಸಬೇಕು. ಕೃಷಿ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಗಿಡ ಮರ ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೂ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

‘ಅರಣ್ಯ ನಾಶವೇ ಬರ ಪರಿಸ್ಥಿತಿಗೆ ಮುಖ್ಯ ಕಾರಣ. ಬರ ಪರಿಸ್ಥಿತಿ ಎದುರಾಗದಂತೆ ಎಚ್ಚರ ವಹಿಸಿ ಗಿಡ ಮರ ಬೆಳೆಸಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅಭಿಪ್ರಾಯಪಟ್ಟರು.

ಕೋಟಿ ನಾಟಿ ಆಂದೋಲನ: ‘ಜಿಲ್ಲೆಯಲ್ಲಿ ಕೋಟಿ ನಾಟಿ ಆಂದೋಲನದಡಿ ಸಸಿ ನೆಡಲು 25 ಲಕ್ಷ ಸಸಿ ಬೆಳೆಸಲಾಗುತ್ತಿದೆ. ಶಾಲಾ ಮಕ್ಕಳನ್ನು ಬಳಸಿಕೊಂಡು ಬೆಟ್ಟ ಗುಡ್ಡಗಳಲ್ಲಿ 1 ಲಕ್ಷ ಬೀಜ ಬಿತ್ತಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು’ ಎಂದು ಕೋರಿದರು.

‘ಜಿಲ್ಲೆಯಲ್ಲಿ ಬಿದ್ದ ಮಳೆ ನೀರಿನ ಒಂದು ಹನಿಯೂ ವ್ಯರ್ಥವಾಗದಂತೆ ಸಂರಕ್ಷಿಸಲು ಜಿ.ಪಂ ವತಿಯಿಂದ 1 ಸಾವಿರ ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದೆ. ಜತೆಗೆ 400ಕ್ಕೂ ಹೆಚ್ಚು ಕಡೆ ಬಹು ಕಮಾನು ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ನೀರು ಶೇಖರಣೆಯಾದರೆ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದರು.

ಅತ್ಯಮೂಲ್ಯ ಸಂಪತ್ತು: ‘ಜಿಲ್ಲೆಯ ಜನ ನೀರಿನ ಸಮಸ್ಯೆ ಗಂಭೀರತೆ ಅರಿತು ನೀರಿನ ಸಂರಕ್ಷಣೆ ಮಾಡದಿದ್ದರೆ ಜಿಲ್ಲೆ ಮರು ಭೂಮಿಯಾಗಿ ಜೀವನ ನಿರ್ವಹಣೆಗೆ ವಲಸೆ ಹೋಗಬೇಕಾಗುತ್ತದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್‌ ಎಚ್ಚರಿಸಿದರು.

‘ದೇಶದ ಜನಸಂಖ್ಯೆಗೆ ಅನುಗುಣವಾಗಿ ಅವಶ್ಯವಿರುವ ನೀರು ಕಲ್ಪಿಸುವ ಮಟ್ಟಿಗೆ ತಂತ್ರಜ್ಞಾನ ಬೆಳೆದಿಲ್ಲ. ಭೂಮಿಯಲ್ಲಿ ಕುಡಿಯಲು ಯೋಗ್ಯವಾಗಿರುವ ನೀರಿನ ಪ್ರಮಾಣ ಕೇವಲ ಶೇ 0.27ರಷ್ಟಿದೆ. ನೀರು ಅತ್ಯಮೂಲ್ಯ ಸಂಪತ್ತಾಗಿದ್ದು, ಭವಿಷ್ಯದ ದೃಷ್ಟಿಯಿಂದ ಸಂರಕ್ಷಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಪ್ರಾಧಿಕಾರದ ವತಿಯಿಂದ ಜಿಲ್ಲೆಯ ಜಲ ಮೂಲಗಳಾದ ಕೆರೆ, ಪುಷ್ಕರಣಿಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಅಮ್ಮೇರಹಳ್ಳಿ ಕೆರೆಯಲ್ಲಿನ ಹೂಳು ತೆರವುಗೊಳಿಸುತ್ತೇವೆ. ಜಲ ಮೂಲಗಳ ಸಂರಕ್ಷಣೆ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಬೇಕು’ ಎಂದು ತಿಳಿಸಿದರು.

ಕೆರೆ ಪುನಶ್ಚೇತನ: ‘ಜಿಲ್ಲೆಯ ರಾಜಕಾಲುವೆಗಳು ಮತ್ತು ಪೋಷಕ ಕಾಲುಗಳ ಮರು ಸರ್ವೆ ಮಾಡಿ, ನರೇಗಾ ಅನುದಾನದಲ್ಲಿ ಹೂಳು ತೆಗೆಯಬೇಕು. ಕೋಲಾರಮ್ಮ ಕೆರೆಯಲ್ಲಿ ಶೇ 70ರಷ್ಟು ಹೂಳು ತುಂಬಿದ್ದು, ಕಾರ್ಪೋರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‍ಆರ್) ಕೆರೆ ಪುನಶ್ಚೇತನ ಮಾಡಬೇಕು’ ಎಂದು ಸಮರ್ಥ ಭಾರತ ಟ್ರಸ್ಟ್ ಅಧ್ಯಕ್ಷ ತ್ಯಾಗರಾಜ್ ಒತ್ತಾಯಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವೇಣುಗೋಪಾಲಸ್ವಾಮಿ ಪುಷ್ಕರಣಿ ಸ್ವಚ್ಛಗೊಳಿಸಲಾಯಿತು. ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರವಾಸಿ ಮಂದಿರದಿಂದ ಕಾಲೇಜು ವೃತ್ತದವರೆಗೆ ಜಾಥಾ ನಡೆಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಎಂ.ಸೌಮ್ಯ, ಜಿಲ್ಲಾ ಪರಿಸರ ಅಧಿಕಾರಿ ಮಂಜುನಾಥ್‌, ವಿಜ್ಞಾನ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್, ನಗರಸಭೆ ಆಯುಕ್ತ ಮಹೇಂದ್ರಕುಮಾರ್, ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಧನರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.