ADVERTISEMENT

ನೀರಿನ ಸಮಸ್ಯೆ: ರಸ್ತೆತಡೆ ಮಾಡಿ ಧರಣಿ

ನಗರಸಭೆ– ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 16:38 IST
Last Updated 3 ಅಕ್ಟೋಬರ್ 2019, 16:38 IST
ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಾರ್ವಜನಿಕರು ಕೋಲಾರದ ಟೇಕಲ್ ರಸ್ತೆಯ ಮಿನಿ ಹೋಟೆಲ್ ವೃತ್ತದಲ್ಲಿ ಗುರುವಾರ ರಸ್ತೆತಡೆ ಮಾಡಿ ಧರಣಿ ನಡೆಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಾರ್ವಜನಿಕರು ಕೋಲಾರದ ಟೇಕಲ್ ರಸ್ತೆಯ ಮಿನಿ ಹೋಟೆಲ್ ವೃತ್ತದಲ್ಲಿ ಗುರುವಾರ ರಸ್ತೆತಡೆ ಮಾಡಿ ಧರಣಿ ನಡೆಸಿದರು.   

ಕೋಲಾರ: ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಗರದ 12, 13 ಮತ್ತು 14ನೇ ವಾರ್ಡ್‌ ನಿವಾಸಿಗಳು ಇಲ್ಲಿ ಗುರುವಾರ ಟೇಕಲ್ ರಸ್ತೆಯ ಮಿನಿ ಹೋಟೆಲ್ ವೃತ್ತದಲ್ಲಿ ರಸ್ತೆತಡೆ ಮಾಡಿ ಧರಣಿ ನಡೆಸಿದರು.

‘ವಾರ್ಡ್‌ ವ್ಯಾಪ್ತಿಯ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರಸಭೆಯಿಂದ ಸಮರ್ಪಕವಾಗಿ ಟ್ಯಾಂಕರ್‌ ನೀರು ಪೂರೈಸುತ್ತಿಲ್ಲ. ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಪಂಪ್‌ ಮೋಟರ್‌ ಕೆಟ್ಟಿರುವುದರಿಂದ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಧರಣಿನಿರತರು ನಗರಸಭೆ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

‘ಮೂರ್ನಾಲ್ಕು ಕಿಲೋ ಮೀಟರ್‌ ದೂರದಿಂದ ನೀರು ತರುವ ಪರಿಸ್ಥಿತಿಯಿದೆ. ನೀರು ಲಭ್ಯವಿರುವ ಕೊಳವೆ ಬಾವಿಗಳ ಪಂಪ್‌ ಮೋಟರ್‌ ರಿಪೇರಿ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ನಾರಾಯಣಗೌಡ ದೂರಿದರು.

ADVERTISEMENT

‘ನಗರಸಭೆಯಿಂದ ಪಂಪ್ ಮೋಟರ್‌ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಹಳೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಿಲ್ಲ. ಹೀಗಾಗಿ ಪಂಪ್ ಮೋಟರ್‌ ನಿರ್ವಹಣೆ ಪ್ರಕ್ರಿಯೆ ಹಳ್ಳ ಹಿಡಿದಿದೆ. ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದಿದ್ದು, ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ನೀರಿನ ಸಮಸ್ಯೆ ಪರಿಹರಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.

ಸುಳ್ಳು ಮಾಹಿತಿ: ‘ಸರ್ಕಾರ ಜಿಲ್ಲಾಧಿಕಾರಿಯನ್ನು ನಗರಸಭೆಗೆ ಆಡಳಿತಾಧಿಕಾರಿಯಾಗಿ ನೇಮಿಸಿದೆ. ಕಾರ್ಯ ಒತ್ತಡದಿಂದಾಗಿ ಜಿಲ್ಲಾಧಿಕಾರಿಗೆ ನಗರಸಭೆಯ ದೈನಂದಿನ ಕಾರ್ಯ ಚಟುವಟಿಕೆ ಹಾಗೂ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಲು ಕಾಲಾವಕಾಶ ಇಲ್ಲವಾಗಿದೆ. ನಗರಸಭೆ ಅಧಿಕಾರಿಗಳು ನೀರಿನ ವಿಚಾರವಾಗಿ ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿ ನೀಡಿ ಸಮಸ್ಯೆ ಮರೆ ಮಾಚುತ್ತಿದ್ದಾರೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಬಂದ ನಗರಸಭೆ ಪ್ರಭಾರ ಆಯುಕ್ತ ಶಿವಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡ ಧರಣಿನಿರತರು, ‘ಬಡಾವಣೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ನಗರಸಭೆಯ ಟ್ಯಾಂಕರ್ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ದೂರು ನೀಡಲು ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅಧಿಕಾರಿಗಳೇ ನೀರಿನ ಕೃತಕ ಅಭಾವ ಸೃಷ್ಟಿಸಿದ್ದಾರೆ’ ಎಂದು ಕಿಡಿಕಾರಿದರು.

‘ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಹೊಸದಾಗಿ ಪಂಪ್‌, ಮೋಟರ್‌ ಅಳವಡಿಸಬೇಕು. ದುರಸ್ತಿ ಹಂತದಲ್ಲಿರುವ ಕೊಳವೆ ಬಾವಿಗಳನ್ನು ಶೀಘ್ರವೇ ರಿಪೇರಿ ಮಾಡಬೇಕು. ಹಿಂದಿನಂತೆಯೇ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದರೆ ನಗರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯರಾದ ರಾಜೇಶ್, ಮಧು. ಆನಂದ್, ಶ್ರೀನಾಥ್, ಮಂಜುಳಾ, ನಾಗರತ್ನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.