ADVERTISEMENT

ಒತ್ತಡ ಮುಕ್ತ ಬದುಕಿಗೆ ಯೋಗ ದಾರಿದೀಪ: ಎಸ್‌ಪಿ ಡೆಕ್ಕಾ ಕಿಶೋರ್‌ಬಾಬು

ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಎ ಡೆಕ್ಕಾ ಕಿಶೋರ್‌ಬಾಬು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 14:23 IST
Last Updated 18 ಆಗಸ್ಟ್ 2021, 14:23 IST
ಪೊಲೀಸ್ ಸಿಬ್ಬಂದಿಗೆ ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ, ಒತ್ತಡ ಹಾಗೂ ಸಮಯ ನಿರ್ವಹಣೆ ಕುರಿತ ಅರಿವು ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಉದ್ಘಾಟಿಸಿದರು
ಪೊಲೀಸ್ ಸಿಬ್ಬಂದಿಗೆ ಕೋಲಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ, ಒತ್ತಡ ಹಾಗೂ ಸಮಯ ನಿರ್ವಹಣೆ ಕುರಿತ ಅರಿವು ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಉದ್ಘಾಟಿಸಿದರು   

ಕೋಲಾರ: ‘ಪೊಲೀಸರ ಕೆಲಸ ತುಂಬಾ ಒತ್ತಡದಿಂದ ಕೂಡಿರುತ್ತದೆ. ಒತ್ತಡವು ಜೀವನದ ಭಾಗವಾಗಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅರಿತು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ಸಿಬ್ಬಂದಿಗೆ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ. ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪೊಲೀಸ್ ಸಿಬ್ಬಂದಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ, ಒತ್ತಡ ಹಾಗೂ ಸಮಯ ನಿರ್ವಹಣೆ ಕುರಿತ ಅರಿವು ಕಾರ್ಯಗಾರದಲ್ಲಿ ಮಾತನಾಡಿದರು.

‘ಪ್ರತಿ ವ್ಯಕ್ತಿಗೆ ತನ್ನದೇ ಆದ ಹವ್ಯಾಸವಿರುತ್ತದೆ. ಪ್ರತಿನಿತ್ಯ ಕೆಲಸದ ಒತ್ತಡದಲ್ಲಿ ಹವ್ಯಾಸಗಳಿಗೆ ಸಮಯ ನೀಡಬೇಕು. ದಿನದ 24 ತಾಸು ದೇಹ ಮತ್ತು ಮಿದುಳಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಒತ್ತಡ ಮುಕ್ತ ಬದುಕು ರೂಪಿಸಿಕೊಳ್ಳಲು ಯೋಗಾಭ್ಯಾಸ ದಾರಿದೀಪ. ಯೋಗಾಭ್ಯಾಸವು ಜೀವನದ ಅವಿಭಾಜ್ಯ ಭಾಗವಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸ್ಕಿಜೋಫ್ರೆನಿಯಾ ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೀಘ್ರವಾಗಿ ವಾಸಿಯಾಗುತ್ತದೆ. ಈ ಕಾಯಿಲೆಯಲ್ಲಿ ಮನಸ್ಸಿನ ಕ್ರಿಯೆಗಳಲ್ಲಿ ಮುಖ್ಯವಾಗಿ ಆಲೋಚನೆ, ಭಾವನೆ ಮತ್ತು ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಂವೇದನಾ ಕ್ರಿಯೆ ಏರುಪೇರಾಗುತ್ತದೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್‌.ಸಿ.ನಾರಾಯಣಸ್ವಾಮಿ ವಿವರಿಸಿದರು.

‘ಅಸ್ತವ್ಯಸ್ತ ಆಲೋಚನೆ, ಭಾವನೆಗಳ ಏರುಪೇರು, ಅಸಹಜ ಹಾಗೂ ವಿಚಿತ್ರ ಅನುಭವ, ದೈಹಿಕ ಕ್ರಿಯೆಗಳಲ್ಲಿ ಏರುಪೇರು ಕಂಡುಬರುವುದು ಸ್ಕಿಜೋಫ್ರೆನಿಯಾ ಕಾಯಿಲೆಯ ಪ್ರಮುಖ ಲಕ್ಷಣಗಳು’ ಎಂದು ಮಾಹಿತಿ ನೀಡಿದರು.

‘ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಸೋಮವಾರ ದರ್ಗಾ ಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ, ಪ್ರತಿ ತಿಂಗಳ ಮೊದಲನೇ ಮಂಗಳವಾರ ಶ್ರೀನಿವಾಸಪುರ, 2ನೇ ಮಂಗಳವಾರ ಮುಳಬಾಗಿಲು ಮತ್ತು ಕೆಜಿಎಫ್‌ನಲ್ಲಿ, 3ನೇ ಮಂಗಳವಾರ ಬಂಗಾರಪೇಟೆ, 4ನೇ ಮಂಗಳವಾರ ಮಾಲೂರಿನಲ್ಲಿ ಮನೋಚೈತನ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಆನಂದವಾಗಿರಬೇಕು: ‘ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು. ಸಾಮಾಜಿಕ ನ್ಯಾಯಬದ್ಧ ಕಟ್ಟುಪಾಡು ಪಾಲಿಸಬೇಕು. ದೇಹ ಮತ್ತು ಮನಸ್ಸು ಎಲ್ಲಾ ಸಮಯದಲ್ಲೂ ಆನಂದವಾಗಿರಬೇಕು. ದಿನನಿತ್ಯದ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು’ ಎಂದು ಮನೋವೈದ್ಯ ಡಾ.ವಿಜೇತದಾಸ್ ಹೇಳಿದರು.

‘ಭಾವನೆಗಳ ಸಮತೋಲನೆ ಮತ್ತು ಒತ್ತಡದ ನಿರ್ವಹಣೆ ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು. ಅತಿಯಾದ ನಿರೀಕ್ಷೆ, ವ್ಯಸನ, ಕಾಯಿಲೆಗಳು ಮಾನಸಿಕ ಅನಾರೋಗ್ಯಕ್ಕೆ ಕಾರಣಗಳು. ಹದಿಹರೆಯದ ಮಕ್ಕಳು ಅತಿಯಾಗಿ ಆತ್ಮಹತ್ಯೆ ಮತ್ತು ವ್ಯಸನಗಳಿಗೆ ಆಕರ್ಷಿಕರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವ್ಯಕ್ತಿಯು ಮಾನಸಿಕವಾಗಿ ಆರೋಗ್ಯವಾಗಿದ್ದರೆ ದೈಹಿಕವಾಗಿ ಆರೋಗ್ಯಕರವಾಗಿರುತ್ತಾರೆ. ಪ್ರತಿನಿತ್ಯ ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ಸಮತೋಲನ ಪೌಷ್ಟಿಕ ಆಹಾರ ಸೇವಿಸುವುದರಿಂದ ಕಾಯಿಲೆಗಳಿಂದ ಮುಕ್ತರಾಗಬಹುದು. ಒತ್ತಡ ಹೆಚ್ಚಾದರೆ ಮಧುಮೇಹ ಕಾಯಿಲೆ ಬರುತ್ತದೆ. ಹೆಚ್ಚಾಗಿ 30 ವರ್ಷ ಮೀರಿದವರಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುತ್ತದೆ’ ಎಂದು ಹೆಚ್ಚುವರಿ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರೇಮಾ ವಿವರಿಸಿದರು.

ಮನಶಾಸ್ತ್ರಜ್ಞ ಶ್ರೀನಾಥ್, ಜಿಲ್ಲಾ ಪೊಲೀಸ್ ಯೋಗ ಕ್ಷೇಮ ಅಧಿಕಾರಿ ಲಿಂಗೇಶ್, ಮನೋ ಸಾಮಾಜಿಕ ಕಾರ್ಯಕರ್ತರಾದ ಎಸ್‌.ಎನ್‌.ಅಭಿಲಾಷ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.