ADVERTISEMENT

ಯುವ ಪೀಳಿಗೆ ಸಿನಿಮಾಕ್ಕೆ ಆಕರ್ಷಿತರಾಗಿದ್ದಾರೆ- ಶಾಸಕ ಕೆ.ಶ್ರೀನಿವಾಸಗೌಡ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 15:19 IST
Last Updated 3 ಜನವರಿ 2022, 15:19 IST
ಕೋಲಾರದಲ್ಲಿ ಸೋಮವಾರ ನಡೆದ ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನೋತ್ಸವದಲ್ಲಿ ಕಲಾವಿದರು ಕೇಳಿಕೆ ಪ್ರದರ್ಶಿಸಿದರು
ಕೋಲಾರದಲ್ಲಿ ಸೋಮವಾರ ನಡೆದ ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನೋತ್ಸವದಲ್ಲಿ ಕಲಾವಿದರು ಕೇಳಿಕೆ ಪ್ರದರ್ಶಿಸಿದರು   

ಕೋಲಾರ: ‘ಪ್ರಸಕ್ತ ಕಾಲಘಟ್ಟದಲ್ಲಿ ಸಿನಿಮಾರಂಗ ಹೆಚ್ಚು ಬೆಳೆಯುತ್ತಿದ್ದು, ಯುವ ಪೀಳಿಗೆಯು ಇದಕ್ಕೆ ಆಕರ್ಷಿತವಾಗುತ್ತಿದೆ. ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನವು ನೇಪಥ್ಯಕ್ಕೆ ಸರಿದಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಯಕ್ಷಗಾನ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಳಿಕೆ ಮತ್ತು ಮೂಡಲಪಾಯ ಯಕ್ಷಗಾನೋತ್ಸವ, ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಜನರಿಗೆ ಈಗ ನಾಟಕಗಳು ಹಾಗೂ ಕೇಳಿಕೆ ಎಂಬುದು ಬರಿ ಜ್ಞಾಪಿಸಿಕೊಳ್ಳುವುದಕ್ಕೆ ಸೀಮಿತವಾಗಿದೆ. ಈಗಿನ ಜನರು ಹೆಚ್ಚು ಸಿನಿಮಾಗಳಿಗೆ ಹೊಂದಿಕೊಂಡಿದ್ದಾರೆ. ಹಿಂದೆ ಜನಜೀವನದಲ್ಲಿ ಹಾಸುಹೊಕ್ಕಾಗಿದ್ದ ಜನಪದ ಕಲೆಗಳು ಸಹ ನಶಿಸುತ್ತಿವೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಕರಾವಳಿ ಯಕ್ಷಗಾನಕ್ಕೂ ಮತ್ತು ಕೇಳಿಕೆ ಮೂಡಲಪಾಯ ಯಕ್ಷಗಾನಕ್ಕೂ ತುಂಬಾ ವ್ಯತ್ಯಾಸವಿದೆ. ವೇಷ ಭೂಷಣ ಮತ್ತು ವಸ್ತ್ರಾಲಂಕಾರದಲ್ಲಿ ವ್ಯತ್ಯಾಸಗಳಿವೆ’ ಎಂದು ಗಾಯಕ ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ ವೇಮಗಲ್ ನಾರಾಯಣಸ್ವಾಮಿ ಹೇಳಿದರು.

‘ಕೇಳಿಕೆಯನ್ನು ಕಳೆದು ಹೋಗದಂತೆ ರಕ್ಷಿಸಬೇಕು. ಕೇಳಿಕೆಯು ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆಯಲಿ’ ಎಂದು ಎಂದು ಮೂಡಲಪಾಯ ಯಕ್ಷಗಾನ ವಿದ್ವಾಂಸ ಕುರುವ ಬಸವರಾಜ್‌ ಆಶಿಸಿದರು.

ರಾಜ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ಪಿ.ಮುನಿರೆಡ್ಡಿ, ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ನರೇಂದ್ರಬಾಬು, ಯಕ್ಷಗಾನ ಕಲಾವಿದರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.