ADVERTISEMENT

ಚಿಗುರಿನ ಸೊಬಗಿಗೆ ಸೋತ ಜನಮನ

ಮಳೆಯ ಕೊರತೆಯ ನಡುವೆ ಚಿಗುರಿದ ಎಲೆಗಳು, ಕಾಮನಬಿಲ್ಲಿನ ಬಣ್ಣಗಳು ಚಿಗುರಲ್ಲಿ ಪ್ರತಿಫಲ

ಆರ್.ಚೌಡರೆಡ್ಡಿ
Published 4 ಏಪ್ರಿಲ್ 2019, 9:25 IST
Last Updated 4 ಏಪ್ರಿಲ್ 2019, 9:25 IST
ಮಾಮರ ಚಿಗುರು.
ಮಾಮರ ಚಿಗುರು.   

ಶ್ರೀನಿವಾಸಪುರ: ಗಿಡಮರದ ಮುಡಿಯಲ್ಲಿ ಕಂಗೊಳಿಸುವ ಬಣ್ಣ ಬಣ್ಣದ ಚಿಗುರೆಲೆಯನ್ನು ನೋಡಿದರೆ, ಪ್ರಕೃತಿ ಕವಿಯೊಬ್ಬರ ಕವಿತೆಯ ‘ಚಿಗುರಿನ ಸೊಬಗಿಗೆ ಸೋತಿದೆ, ಹೂಮನ ಚೆಲ್ಲಿದೆ ಕಾಮನಬಿಲ್ಲು’ ಎಂಬ ಸಾಲು ನೆನಪಿಗೆ ಬರುತ್ತದೆ.

ಹೌದು, ಈಗ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬಿರುಬಿಸಿಲಿನ ನಡುವೆ ಗಿಡಮರ ಬಳ್ಳಿ ಚಿಗುರುತ್ತಿದೆ. ಚಿಗುರಲ್ಲಿ ಕಾಮನಬಿಲ್ಲು ಮೂಡಿದಂತೆ ಭಾಸವಾಗುತ್ತದೆ. ಅದರಲ್ಲೂ ಅರಳಿ ಹಾಗೂ ಹುಣಸೆ ಚಿಗುರನ್ನು ಗಮನಿಸಿದರೆ ಬಣ್ಣ ವೈಭವದ ದರ್ಶನವಾಗುತ್ತದೆ. ಹೂವಿನ ಸೌಂದರ್ಯ ಕಂಡು ಬೆರಗಾಗುವುದು ಸಾಮಾನ್ಯ. ಆದರೆ ಚಿಗುರಿನ ಬಣ್ಣ ವೈವಿಧ್ಯಕ್ಕೆ ಹೂವೂ ಸಹ ಮನಸೋಲಬೇಕು!

ವಸಂತ ಋತುವಿನ ಬಗ್ಗೆ ಹಾಡದ ಕವಿಗಳು ವಿರಳ. ಈ ಋತುವಿನಲ್ಲಿ ನಿಸರ್ಗದಲ್ಲಿ ಕಂಡುಬರುವ ಹೊಸತನ ಕವಿ ಹೃದಯವನ್ನು ಪುಳಕಿತಗೊಳಿಸುತ್ತದೆ. ಗಿಡಮರ ಬಳ್ಳಿಗಳಲ್ಲಿ ಕಾಣಿಸಿಕೊಳ್ಳುವ ಬಣ್ಣದ ಚಿಗುರು ಹಾಗೂ ಚೆಂದದ ಹೂವು ಕವಿತೆ ಗುನುಗುವಂತೆ ಪ್ರೇರೇಪಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜವಾಹರಲಾಲ್‌ ನೆಹರು ಜೈಲು ಕೋಣೆಯಿಂದ ಕಂಡ ಚಿಗುರಿನ ಸಂಭ್ರಮ ಹಾಗೂ ವಿವಿಧ ಬಣ್ಣ ಪಡೆದು ಕೊನೆಗೆ ಹಸಿರಾಗುವ ನೈಸರ್ಗಿಕ ಪ್ರಕ್ರಿಯೆ ಕಂಡು ಹೃದಯ ಹಗುರವಾದ ಬಗೆಯನ್ನು ಬರೆದು ಕಾಖಲಿಸಿದ್ದಾರೆ.

ADVERTISEMENT

ನಿಜ, ಯಾವುದೇ ಮರದ ಎಲೆಯನ್ನು ಹುಟ್ಟಿನಿಂದ ಗಮನಿಸಿದರೆ, ದಿನದಿಂದ ದಿನಕ್ಕೆ ಬದಲಾಗುವ ಬಣ್ಣ ಆಶ್ಚರ್ಯಗೊಳಿಸುತ್ತದೆ. ಚಿಗುರಿನ ಮರೆಯಲ್ಲಿ ಕುಳಿತ ಕೋಗಿಲೆ, ಒಗರಿನ ಚಿಗುರನ್ನು ಉಂಡು ಸುಶ್ರಾವ್ಯವಾಗಿ ಹಾಡುತ್ತದೆ. ಆದ್ದರಿಂದಲೇ ಚಿಗುರಿನ ಮರಗಳಲ್ಲಿ ಕೋಗಿಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲೂ ಮಾವಿನ ಚಿಗುರೆಂದರೆ ಕೋಗಿಲೆಗೆ ಪಂಚಪ್ರಾಣ.

ಕಾಮನಬಿಲ್ಲಿನ ಬಣ್ಣಗಳು ಚಿಗುರಲ್ಲಿ ಪ್ರತಿಫಲಿಸುವುದು ವಿಶೇಷ. ಕಾಡು ಮೇಡಿನ ಕಡೆ ದೃಷ್ಟಿ ಹರಿಸಿದರೆ ಬಣ್ಣದ ಹೋಳಿ ಗೋಚರಿಸುತ್ತದೆ. ಚಿಗುರಿನ ಮರೆಯಲ್ಲಿ ಮೊಗ್ಗು, ಮತ್ತೆ ಅರಳುವ ಹೂವು. ಒಟ್ಟಾರೆ ವನದೇವಿಯ ಮುಡಿಗೆ ಬಣ್ಣದ ಚಿಗುರು ಕಿರೀಟ. ಮತ್ತೆ ಹೂದೇರು.

ಜೊತೆಗೆ ಹೊಂಗೆ ಮರಗಳಲ್ಲಿ ಹೂ ಕಾಣಿಸಿಕೊಂಡಿದೆ. ಹೊಂಗೆ ಹೂವ ತಂಗಳಲ್ಲಿ ದುಂಬಿಯ ಸಂಗೀತ ಕೇಳಿಬರುತ್ತಿದೆ. ಜೇನ್ನೊಣಗಳ ಹಾರಾಟ ಹೆಚ್ಚಿದೆ. ಚಿಗರೆ ಮರಗಳಲ್ಲಿ ಚೆಂಡಿನಂಥ ಹೂಗಳು ಪುಟಿದುಬರುತ್ತಿವೆ. ತರುಲತೆ ಮುಡಿಯಲ್ಲಿ ರಂಗಿನ ಹೋಳಿ ಸಂಭ್ರಮ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.